![maxresdefault](http://kannada.vartamitra.com/wp-content/uploads/2018/07/maxresdefault-2-677x381.jpg)
ತುಮಕೂರು, ಜು.18- ವೈದ್ಯಕೀಯ ಶಿಕ್ಷಣ ಸಚಿವ ಡಿ.ಕೆ.ಶಿವಕುಮಾರ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ಮಾಜಿ ಸಂಸದ ಜಿ.ಎಸ್.ಬಸವರಾಜು, ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಯವರನ್ನು ಬಳಸಿಕೊಂಡು ತುಘಲಕ್ ದರ್ಬಾರ್ ನಡೆಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ತುಮಕೂರು ಜಿಲ್ಲೆಯಲ್ಲಿ ಹರಿಯುತ್ತಿರುವ ಹೇಮಾವತಿ ನೀರನ್ನು ರಾಮನಗರ, ಚನ್ನಪಟ್ಟಣಕ್ಕೆ ತೆಗೆದುಕೊಂಡು ಹೋಗುವ ಹುನ್ನಾರವನ್ನು ಶಿವಕುಮಾರ್ ಮಾಡುತ್ತಿದ್ದಾರೆ. ಈ ಮೂಲಕ ತುಮಕೂರು ಜಿಲ್ಲೆಯ ಜನರಿಗೆ ಅನ್ಯಾಯ ಮಾಡಲು ಮುಂದಾಗಿದ್ದಾರೆ. ಜನರ ನಡುವೆ ಶಾಂತಿ ಕದಡುವ ಪ್ರಯತ್ನವನ್ನು ಡಿಕೆಶಿ ಸಹೋದರರು ಮಾಡುತ್ತಿದ್ದಾರೆ. ಇದನ್ನು ಖಂಡಿಸುತ್ತೇವೆ ಎಂದು ಬಸವರಾಜು ವಾಗ್ದಾಳಿ ನಡೆಸಿದ್ದಾರೆ. ಗುಬ್ಬಿ ತಾಲೂಕಿನಿಂದ ಕುಣಿಗಲ್ ಮಾರ್ಗವಾಗಿ ಹೇಮಾವತಿ ನಾಲೆಯಿಂದ ನೀರು ತೆಗೆದುಕೊಂಡು ಹೋಗುವ ಎಕ್ಸ್ಪ್ರೆಸ್ ನಾಲೆಗೆ ಆಕ್ಷೇಪ ವ್ಯಕ್ತಪಡಿಸಿದ ಜಿ.ಎಸ್.ಬಸವರಾಜು, ಈ ಯೋಜನೆ ಕೈಬಿಡದಿದ್ದರೆ ಇಲ್ಲಿನ ಜನ ದಂಗೆ ಏಳಲಿದ್ದಾರೆ. ಯೋಜನೆ ಕೈಗೆತ್ತಿಕೊಂಡರೆ ಬಿಜೆಪಿಯಿಂದ ತೀವ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದರು. ಎ.ಕೃಷ್ಣಪ್ಪ ಸಾವಿಗೆ ದೇವೇಗೌಡರೇ ಕಾರಣ: ಕಳೆದ ಲೋಕಸಭಾ ಚುನಾವಣೆಯಲ್ಲಿ ತುಮಕೂರು ಲೋಕಸಭಾ ಜೆಡಿಎಸ್ ಅಭ್ಯರ್ಥಿಯಾಗಿದ್ದು, ಫಲಿತಾಂಶಕ್ಕೂ ಮುನ್ನವೇ ಹೃದಯಾಘಾತದಿಂದ ಸಾವನ್ನಪ್ಪಿದ್ದರು. ಎ.ಕೃಷ್ಣಪ್ಪ ಅವರ ಸಾವಿಗೆ ದೇವೇಗೌಡರು ಕಾರಣ. ಕೃಷ್ಣಪ್ಪ ಅವರನ್ನು ಲೋಕಸಭಾ ಚುನಾವಣೆಗೆ ನಿಲ್ಲಿಸಿ ಯಜ್ಞಪಶು ಮಾಡಿದ್ದರು ಎಂದು ಜಿ.ಎಸ್.ಬಸವರಾಜು ಆರೋಪಿಸಿದರು.
ಎ.ಕೃಷ್ಣಪ್ಪ ನನ್ನ ಸ್ನೇಹಿತ. ನಾನೇ ಗೆಲ್ಲುತ್ತೇನೆ ಎಂದು ಹೇಳಿದ್ದರು. ಚುನಾವಣೆ ದಿನ ಮನೆಗೆ ಬಂದು ತಿಂಡಿ ತಿಂದಿದ್ದರು ಎಂದು ಬಸವರಾಜು ಸ್ಮರಿಸಿದ್ದಾರೆ.