ರಾಜ್ಯದ ನಾಡು-ನುಡಿ ರಕ್ಷಣೆಗೆ ಎಲ್ಲಾ ರೀತಿಯ ಸಹಕಾರ – ದಿನೇಶ್ ಗುಂಡೂರಾವ್

ಬೆಂಗಳೂರು, ಜು.18-ರಾಜ್ಯದ ನಾಡು-ನುಡಿ ರಕ್ಷಣೆಗೆ ಎಲ್ಲಾ ರೀತಿಯ ಸಹಕಾರ ನೀಡಲಾಗುವುದು. ಈ ಸಂಬಂಧದ ಹೋರಾಟದಲ್ಲಿ ಮುಂಚೂಣಿಯಲ್ಲಿರುತ್ತೇನೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಭರವಸೆ ನೀಡಿದ್ದಾರೆ.

ಕನ್ನಡ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಗಾಂಧಿ ನಗರದ ಗುಬ್ಬಿ ವೀರಣ್ಣ ರಂಗಮಂದಿರದಲ್ಲಿ ಏರ್ಫಡಿಸಿದ್ದ ವಿಜಯನಗರ ಸಾಮ್ರಾಜ್ಯ ಸ್ಥಾಪಕರಾದ ಹಕ್ಕ ಬುಕ್ಕರ ಜಯಂತ್ಯೋತ್ಸವದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಹಕ್ಕ ಬುಕ್ಕರು ವಿಜಯ ನಗರ ಸಾಮ್ರಾಜ್ಯವನ್ನು ಸ್ಥಾಪಿಸಿದ್ದರು. ಈ ಸಹೋದರರ ಪರಿಶ್ರಮದಿಂದಾಗಿ ವಿಜಯನಗರ ಅತ್ಯುತ್ತಮ ಸಾಮ್ರಾಜ್ಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು ಎಂದು ಹೇಳಿದರು.

ಕನ್ನಡ ಕರ್ನಾಟಕ ರಕ್ಷಣಾ ವೇದಿಕೆ ನಾಡು , ನುಡಿಗಾಗಿ ಶ್ರಮಿಸುತ್ತಿದೆ. ಈ ಹೋರಾಟದಲ್ಲಿ ನಾನು ಕೂಡ ನಿಮ್ಮ ಜತೆಗಿರುತ್ತೇನೆ ಎಂದು ಭರವಸೆ ನೀಡಿದರು.
ವೇದಿಕೆ ಅಧ್ಯಕ್ಷ ಕೆ.ಸಿ.ಮೂರ್ತಿ ಕನ್ನಡದ ಕೆಲಸದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಅವರು ಇನ್ನಷ್ಟು ಕೆಲಸವನ್ನು ಮಾಡುವಂತಾಗಲಿ ಎಂದು ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ಬೇಲಿ ಮಠದ ಶ್ರೀ ಶಿವರುದ್ರ ಮಹಾ ಸ್ವಾಮೀಜಿ, ಆನಂದ ಗುರೂಜಿ, ಡಾ.ರಾಜ್‍ಕುಮಾರ್ ಸಂಘದ ಅಧ್ಯಕ್ಷ ಸಾ.ರಾ.ಗೋವಿಂದು, ರಂಗಭೂಮಿ ಕಲಾವಿದೆ ಮಾಲತಿ ಸುಧೀರ್ , ಸಮತಾ ಸೈನಿಕ ದಳದ ಅಧ್ಯಕ್ಷ ಡಾ.ವೆಂಕಟಸ್ವಾಮಿ, ದೂರದರ್ಶನ ದಕ್ಷಿಣ ಭಾರತ ವಿಭಾಗದ ವಿಶ್ರಾಂತ ಮಹಾ ನಿರ್ದೇಶಕ ಡಾ.ಮಹೇಶ್ ಜೋಷಿ ಮತ್ತಿತರರು ಪಾಲ್ಗೊಂಡಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ