ಬೆಂಗಳೂರು, ಜು.18- ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ನೀಡಲು ಯಾವುದೇ ಸಮಸ್ಯೆ ಇಲ್ಲ. ಇನ್ನೊಂದು ವಾರದಲ್ಲಿ ಬಸ್ ಪಾಸ್ ಕುರಿತು ಅಧಿಕೃತ ತೀರ್ಮಾನ ಪ್ರಕಟಿಸಲಾಗುತ್ತದೆ ಎಂದು ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಹೇಳಿದ್ದು, ಜೊತೆಗೆ ಬಸ್ ದರ ಹೆಚ್ಚಳಕ್ಕೆ ಪ್ರಸ್ತಾವನೆ ಬಂದಿರುವ ಮಾಹಿತಿ ನೀಡಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಚಿತ ಬಸ್ ಪಾಸ್ಗೆ 2 ಸಾವಿರ ಕೋಟಿ ರೂ. ಖರ್ಚು ಬರಲಿದೆ. ಶಿಕ್ಷಣ ಮಂತ್ರಿಗಳು ಶಿಕ್ಷಣ ಇಲಾಖೆಯಿಂದ ಶೇ. 25ರಷ್ಟು ಅನುದಾನ ಕೊಡುತ್ತೇವೆ ಅಂದಿದ್ದಾರೆ. ಸಾರಿಗೆ ಇಲಾಖೆಯಿಂದ ಶೇ. 25 ರಷ್ಟು ಅನುದಾನ ಕೊಡುತ್ತೇವೆ. ಸರ್ಕಾರ ಶೇ. 50 ರಷ್ಟು ಅನುದಾನ ಕೊಡಲಿದೆ. ಹಿಂದೆಯೂ ಸರ್ಕಾರ ಇಷ್ಟೇ ನೆರವು ಕೊಡುತ್ತಿತ್ತು. ಮುಖ್ಯಮಂತ್ರಿಗಳು ಸದ್ಯ ದೆಹಲಿಯಲ್ಲಿದ್ದಾರೆ. ಮುಖ್ಯಮಂತ್ರಿಗಳು ದೆಹಲಿಯಿಂದ ಬಂದ ಬಳಿಕ ಬಸ್ ಪಾಸ್ ಕುರಿತು ಚರ್ಚೆ ನಡೆಸಿ ಒಂದು ವಾರದಲ್ಲಿ ಬಸ್ ಪಾಸ್ ಕುರಿತು ತೀರ್ಮಾನ ಪ್ರಕಟಿಸಲಾಗುತ್ತದೆ ಎಂದರು.
ಪೆಟ್ರೋಲ್, ಡೀಸೆಲ್ ತೆರಿಗೆ ಹೆಚ್ಚಳದಿಂದ ಸಾರಿಗೆ ಇಲಾಖೆಯ ನಷ್ಟದ ಪ್ರಮಾಣ ಹೆಚ್ಚಾಗಿದೆ. ಹಾಗಾಗಿ ಇಲಾಖೆಗೆ ಕನಿಷ್ಠ 1000 ಕೋಟಿ ರೂ. ಹೆಚ್ಚುವರಿ ಅನುದಾನ ಕೇಳಿದ್ದೇವೆ. ಜತೆಗೆ ಶೇ. 20ರಷ್ಟು ಪ್ರಯಾಣ ದರ ಹೆಚ್ಚಳಕ್ಕೆ ಎಲ್ಲ ಸಾರಿಗೆ ನಿಗಮಗಳೂ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿವೆ. ಶೀಘ್ರದಲ್ಲೇ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ ಎಂದರು.
ಸಾರಿಗೆ ಸೆಸ್ ಸಂಗ್ರಹಿಸುವಂತೆ ಬಿಬಿಎಂಪಿಗೆ ಪ್ರಸ್ತಾವನೆ ಸಲ್ಲಿಸಿದ್ದೇವೆ. ಮಹಾನಗರ ಪಾಲಿಕೆಯಿಂದ ಈಗಾಗಲೇ ಭಿಕ್ಷುಕರ ಕರ ಸೇರಿದಂತೆ ವಿವಿಧ ಸೆಸ್?ಗಳನ್ಮು ವಿಧಿಸಲಾಗುತ್ತಿದೆ. ಅದೇ ರೀತಿ ಸಾರಿಗೆ ಸೆಸ್ ಸಂಗ್ರಹಿಸಿ ಕೊಟ್ಟರೆ ನಗರ ಸಾರಿಗೆಗೆ ಅನುಕೂಲವಾಗುತ್ತದೆ ಎಂದರು.
ಇನ್ನು ಮನಸ್ಸಿಗೆ ದುಃಖ ಆದಾಗ ಅತ್ತು ಬಿಡಬೇಕು. ಆಗಲೇ ಮನಸ್ಸಿಗೆ ಸಮಾಧಾನವಾಗುತ್ತದೆ. ಸಿಎಂ ಭಾವನಾತ್ಮಕ ವ್ಯಕ್ತಿ. ಹಾಗಾಗಿ ಅವರು ಅಳುವಿನ ಮೂಲಕ ತಮ್ಮ ದುಃಖ ಶಮನ ಮಾಡಿಕೊಂಡಿದ್ದಾರೆ. ಸಿಎಂ ಯಾರ ಮೇಲೂ ಆರೋಪ ಮಾಡಿಲ್ಲ. ಯಾರೂ ತಮಗೆ ನೋವು ಕೊಟ್ಟಿದ್ದಾರೆ ಎಂದು ಹೇಳಿಲ್ಲ. ಅವರಿಗೆ ಯಾರಿಂದಲಾದರೂ ನೋವಾಗಿರಬಹುದು ಎಂದರು.
ಸಾರಿಗೆ ಇಲಾಖೆಯಲ್ಲಿ 400ಕ್ಕೂ ಹೆಚ್ಚು ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಹಾಗೂ ಸಾರಿಗೆ ಇನ್ಸ್ಪೆಕ್ಟರ್ ಹುದ್ದೆಗಳು ಖಾಲಿ ಇದ್ದು, ನೇಮಕಾತಿ ಮಾಡುವ ಬಗ್ಗೆ ಸದ್ಯದಲ್ಲೇ ತೀರ್ಮಾನ ಕೈಗೊಳ್ಳಲಾಗುವುದು ಎಂದರು.
ಸಾರಿಗೆ ಇಲಾಖೆಯ 676 ಹುದ್ದೆಗಳ ಪೈಕಿ 400ಕ್ಕೂ ಹೆಚ್ಚು ಹುದ್ದೆಗಳು ಖಾಲಿ ಇವೆ. 260 ಮಂದಿ ಮಾತ್ರ ಸದ್ಯಕ್ಕೆ ಕಾರ್ಯನಿರ್ವಹಿಸುತ್ತಿದ್ದಾರೆ. 200 ಹುದ್ದೆಗಳ ನೇಮಕಾತಿ ಬಗ್ಗೆ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ. ಕರ್ನಾಟಕ ಲೋಕಸೇವಾ ಆಯೋಗದ ಮೂಲಕ 100 ಮಂದಿಯ ನೇಮಕಾತಿ ಪ್ರಕ್ರಿಯೆ ಪೂರ್ಣಗೊಂಡಿದೆ ಎಂದು ಹೇಳಲಾಗಿದೆ.
ಈ ಎಲ್ಲಾ ವಿಚಾರವನ್ನು ಪರಿಶೀಲಿಸಿ ಖಾಲಿ ಹುದ್ದೆಗಳ ನೇಮಕಾತಿಗೆ ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದರು.
ಬಿಬಿಎಂಪಿ ವ್ಯಾಪ್ತಿಯಲ್ಲಿ ಆರೋಗ್ಯ, ಶಿಕ್ಷಣಕ್ಕೆ ಉಪಕರ ವಿಧಿಸಲಾಗುತ್ತದೆ. ಅದೇ ಮಾದರಿಯಲ್ಲಿ ಸಾರಿಗೆ ಉಪಕರ ವಿಧಿಸಬೇಕೆಂಬುದು ನಮ್ಮ ಬೇಡಿಕೆ. ಬೆಂಗಳೂರಿನಲ್ಲಿ ಬಿಎಂಟಿಸಿ ಬಸ್ಗಳನ್ನು ನಗರದ ನಾಗರಿಕರು ಬಳಕೆ ಮಾಡುತ್ತಿದ್ದಾರೆ. ಬಿಬಿಎಂಪಿ ಸಾರಿಗೆ ಸೆಸ್ ಸಂಗ್ರಹಿಸಿ ಬಿಎಂಟಿಸಿಗೆ ನೀಡಬೇಕೆಂದು ನಾವು ಪ್ರಸ್ತಾಪಿಸಿದ್ದು, ಈ ಬಗ್ಗೆಯೂ ಯಾವುದೇ ತೀರ್ಮಾನವಾಗಿಲ್ಲ ಎಂದು ಸ್ಪಷ್ಟಪಡಿಸಿದರು.
ಲಾರಿ ಮುಷ್ಕರದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ದೈನಂದಿನ ಸರಕು ಸಾಗಣೆಗೆ ತೊಂದರೆಯಾಗದಂತೆ ಕ್ರಮವಹಿಸಲಾಗುವುದು ಎಂದು ತಿಳಿಸಿದರು.
ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಭಾವುಕರಾಗಿ ಕಣ್ಣೀರು ಸುರಿಸಿದ್ದರು. ದುಃಖ ಬಂದಾಗ ತಡೆದುಕೊಳ್ಳದೆ ಅಳಬೇಕು. ಆಗ ಮನಸ್ಸು ಹಗುರವಾಗುತ್ತದೆ. ತಮ್ಮ ನೋವಿಗೆ ಮುಖ್ಯಮಂತ್ರಿಗಳು ಯಾರ ಮೇಲೂ ಆಪಾದನೆ ಮಾಡಲಿಲ್ಲ ಎಂದು ಹೇಳಿದರು.