
ನವದೆಹಲಿ, ಜು.17-ವದಂತಿಗಳ ಹಿನ್ನೆಲೆಯಲ್ಲಿ ಉದ್ರಿಕ್ತ ಗುಂಪಿನಿಂದ ಅಮಾಯಕರನ್ನು ಹಿಂಸಿಸಿ ಕೊಲ್ಲುತ್ತಿರುವ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿರುವ ಸುಪ್ರೀಂಕೋರ್ಟ್, ಇಂಥವರ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳಲು ಸಂಸತ್ ಸೂಕ್ತ ಕಾನೂನು ರೂಪಿಸುವಂತೆ ಇಂದು ಮಹತ್ವದ ಆದೇಶ ನೀಡಿದೆ.
ಮಕ್ಕಳ ಕಳ್ಳರು ವದಂತಿಗಳಿಂದಾಗಿ ಕರ್ನಾಟಕ ಸೇರಿದಂತೆ ದೇಶದ ವಿವಿಧ ರಾಜ್ಯಗಳಲ್ಲಿ ಅಮಾಯಕರನ್ನು ಉದ್ರಿಕ್ತ ಜನರು ಹಿಂಸಿಸಿ ಕೊಲ್ಲುತ್ತಿರುವ ಘಟನೆಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸರ್ವೋಚ್ಚ ನ್ಯಾಯಾಲಯದ ಈ ಆದೇಶ ಭಾರಿ ಪ್ರಾಮುಖ್ಯತೆ ಪಡೆದುಕೊಂಡಿದೆ.
ಮಕ್ಕಳ ಕಳ್ಳರು, ಗೋ ಕಳ್ಳರು ಇತ್ಯಾದಿ ವದಂತಿಗಳಿಗೆ ಕಿವಿಗೊಟ್ಟು ಉದ್ರಿಕ್ರ ಗುಂಪು ಮತ್ತು ಗೋರಕ್ಷಕರು ಮುಗ್ಧರನ್ನು ಕೊಲ್ಲುತ್ತಿರುವುದು ಅತ್ಯಂತ ಹೀನ ಮತ್ತು ಬರ್ಬರ ಕೃತ್ಯ. ಇದು ಮುಂದುವರಿಯಲು ಬಿಡಬಾರದು. ಇದು ಹೊಸ ಪಿಡುಗಾಗಲು ಬಿಡಬಾರದು. ವಜ್ರಮುಷ್ಠಿಯಿಂದ ಇದನ್ನು ನಿಯಂತ್ರಿಸಬೇಕು. ಇಂಥ ಅಪರಾಧ ಕೃತ್ಯಗಳನ್ನು ಹತ್ತಿಕ್ಕಬೇಕು. ಇವುಗಳನ್ನು ತಡೆಗಟ್ಟುವ, ಶಮನಗೊಳಿಸುವ ಹಾಗೂ ಶಿಕ್ಷೆ ನೀಡುವಂಥ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸುಪ್ರೀಂಕೋರ್ಟ್ ಹೇಳಿದೆ.
ಈ ಸಂಬಂಧ ತುಷಾರ್ ಗಾಂಧಿ ಮತ್ತು ತೆಹಸೀನ್ ಪೂನಾವಾಲಾ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ಪೀಠವು, ಕಾನೂನು ಕೈಗೆತ್ತಿಕೊಳ್ಳುವವರನ್ನು ಶಿಕ್ಷಿಸಲು ಸಂಸತ್ ಸೂಕ್ತ ಕಾನೂನು ರಚಿಸಬೇಕು. ಉದ್ರಿಕ್ತರ ಹಲ್ಲೆ, ಹಿಂಸೆ ಮತ್ತು ಕೊಲೆ ಪ್ರಕರಣಗಳ ವಿರುದ್ಧ ಹೊಸ ನಿಯಮ ಜಾರಿಗೆ ಬರಬೇಕು ಎಂದು ಕೇಂದ್ರ ಸರ್ಕಾರಕ್ಕೆ ಸ್ಪಷ್ಟ ಸೂಚನೆ ನೀಡಿತು. ಯಾರೊಬ್ಬರೂ ಕಾನೂನು ಕೈಗೆತ್ತಿಕೊಳ್ಳಬಾರದು. ಇದು ಕಾನೂನು ಬಾಹಿರ. ಇಂಥವರಿಗೆ ಶಿಕ್ಷೆ ತಪ್ಪಿದ್ದಲ್ಲ ಎಂದು ಹಿರಿಯ ನ್ಯಾಯಮೂರ್ತಿಗಳಾದ ಎ.ಎಂ.ಖಾನ್ವಿಲ್ಕರ್ ಮತ್ತು ಡಿ.ವೈ.ಚಂದ್ರಚೂಡ್ ಅವರನ್ನೂ ಒಳಗೊಂಡ ಪೀಠವು ಹೇಳಿದೆ.
ದೇಶದಲ್ಲಿ ನಡೆಯುತ್ತಿರುವ ಇಂಥ ಅಪರಾಧಗಳನ್ನು ತಡೆಗಟ್ಟಲು ಪರಿಣಾಮಕಾರಿ ಕಾನೂನು-ನಿಯಮಗಳು ಜಾರಿಗೆ ಬರಬೇಕು. ಇದಕ್ಕಾಗಿ ಸೂಕ್ತ ಮಾರ್ಗಸೂಚಿಗಳನ್ನು ರೂಪಿಸಬೇಕು ಎಂದು ಸಂಸತ್ತಿಗೆ ಕೋರ್ಟ್ ಸೂಚನೆ ನೀಡಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಂವಿಧಾನದ ಪ್ರಕಾರ ಕಾರ್ಯನಿರ್ವಹಿಸಬೇಕು. ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಹೊಣೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಮೇಲಿದೆ. ಇದನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ಸರ್ವೋಚ್ಚ ನ್ಯಾಯಾಲಯ ತಾಕೀತು ಮಾಡಿತು.
ತನ್ನ ನಿರ್ದೇಶನಗಳಿಗೆ ಅನುಗುಣವಾಗಿ ಈ ನಿಟ್ಟಿನಲ್ಲಿ ಸೂಕ್ತ ಕ್ರಮಗಳನ್ನು ಕೈಗೊಳ್ಳುವಂತೆ ಸುಪ್ರೀಂಕೋರ್ಟ್ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಸೂಚನೆ ನೀಡಿದೆ.
ಈ ಸಂಬಂಧ ಸಲ್ಲಿಸಲಾಗಿರುವ ಇತರ ಅರ್ಜಿಗಳ ಮುಂದಿನ ವಿಚಾರಣೆ ಆಗಸ್ಟ್ 28ರಂದು ನಡೆಯಲಿದೆ.
ಮಕ್ಕಳ ಕಳ್ಳರು, ಗೋ ಕಳ್ಳರು ಎಂಬ ವದಂತಿ ಸೇರಿದಂತೆ ಇತರ ಗಾಳಿ ಸುದ್ದಿಗಳು ದೇಶದ ವಿವಿಧೆಡೆ ಉದ್ರಿಕ್ತ ಗುಂಪುಗಳಿಂದ ಹಲ್ಲೆ, ಹಿಂಸೆ, ಮತ್ತು ಕೊಲೆ ಪ್ರಕರಣಗಳಿಗೆ ಕಾರಣವಾಗುತ್ತಿದೆ. ಇಂಥ ಹಿಂಸಾಚಾರಗಳನ್ನು ತಡೆಗಟ್ಟಬೇಕು ಹಾಗೂ ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸಬೇಕೆಂದು ಕೋರಿ ಹಲವು ಪಿಐಎಲ್ ಅರ್ಜಿಗಳನ್ನು ಸುಪ್ರೀಂಕೋರ್ಟ್‍ಗೆ ಸಲ್ಲಿಸಲಾಗಿದೆ.