ಬೆಳಗಾವಿ, ಜು.17- ಸರ್ಕಾರ ನಡೆಸುವುದು ಹೂವಿನ ಹಾಸಿಗೆಯಲ್ಲ, ಅದೊಂದು ಮುಳ್ಳಿನ ಹಾಸಿಗೆ ಇದ್ದಂತೆ. ಸಿಎಂ ಹುದ್ದೆ ಎಂಜಾಯ್ ಮಾಡುವ ಪೆÇೀಸ್ಟ್ ಅಲ್ಲ ಎಂದು ಐಟಿ ಬಿಟಿ ಸಚಿವ ಕೆ.ಜೆ.ಜಾರ್ಜ್ ಇಂದಿಲ್ಲಿ ತಿಳಿಸಿದ್ದಾರೆ. ಪಕ್ಷದ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರ ನಡೆಸುವುದು ಸುಲಭದ ಮಾತಲ್ಲ, ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಪವರ್ಫುಲ್ ಇದ್ದಾರೆ, ಯಂಗ್ಸ್ಟಾರ್ ಇದ್ದಾರೆ. ಸರ್ಕಾರವನ್ನು ಸಮರ್ಥವಾಗಿ ಮುನ್ನಡೆಸಿಕೊಂಡು ಹೋಗುತ್ತಾರೆ ಎಂದು ಹೇಳಿದರು.
ಸಿಎಂ ಅವರು ಅವರ ಪಕ್ಷದ ಕಚೇರಿಯ ಕಾರ್ಯಕ್ರಮದಲ್ಲಿ ಉತ್ತಮ ಕೆಲಸ ಮಾಡಿದರೂ ರಾಜ್ಯದ ಜನರಿಂದ ಬೆಂಬಲ ಸಿಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿ ಕಣ್ಣೀರು ಹಾಕಿದರು. ಇದನ್ನು ಮಾಧ್ಯಮದವರು ನಕಾರಾತ್ಮಕವಾಗಿ ಬಿಂಬಿಸಿದ್ದಾರೆ, ಸಕಾರಾತ್ಮಕವಾಗಿ ತೆಗೆದುಕೊಳ್ಳಬೇಕು ಎಂದು ಹೇಳಿದರು.
ಸಮನ್ವಯ ಸಮಿತಿ ಅಧ್ಯಕ್ಷರಾದ ಸಿದ್ದರಾಮಯ್ಯನವರು ಸರ್ಕಾರಕ್ಕೆ ಪತ್ರ ಬರೆಯುವುದರಲ್ಲಿ ಯಾವ ತಪ್ಪೂ ಇಲ್ಲ. ತಮ್ಮ ಅಭಿಪ್ರಾಯವನ್ನು ಪತ್ರದ ಮೂಲಕ ತಿಳಿಸುವುದು ತಪ್ಪಲ್ಲ ಎಂದರು.
ಕುಮಾರಸ್ವಾಮಿ ಕಣ್ಣೀರಿನ ಬಗ್ಗೆ ಅರುಣ್ ಜೇಟ್ಲಿ ಅವರು ಪ್ರತಿಕ್ರಿಯೆ ನೀಡಿರುವುದರ ಹಿಂದೆ ರಾಜಕೀಯ ದುರುದ್ದೇಶವಿದೆ. ಅವರಿಗೆ ಉತ್ತರ ಕೊಡುವ ಅವಶ್ಯಕತೆಯಿಲ್ಲ ಎಂದು ಹೇಳಿದರು.
ಅನ್ನಭಾಗ್ಯ ಯೋಜನೆಯಲ್ಲಿ ಅಕ್ಕಿ ಕಡಿತಗೊಳಿಸಲಾಗಿದೆ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ಈ ವಿಚಾರವನ್ನು ಮಾಧ್ಯಮದ ಮುಂದೆ ಮಾತನಾಡುವುದಿಲ್ಲ. ಸಮನ್ವಯ ಸಮಿತಿಯಲ್ಲಿ ಚರ್ಚೆ ಮಾಡುತ್ತೇವೆ ಎಂದು ಹೇಳಿದರು. ಶಾಸಕರಾದ ಲಕ್ಷ್ಮಿ ಹೆಬ್ಬಾಳ್ಕರ್, ಜಿಲ್ಲಾಧ್ಯಕ್ಷ ವಿನಯ ಸಾವಲಗಟ್ಟಿ ಸೇರಿದಂತೆ ಅನೇಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.