ಲೋಕಪಾಲರ ನೇಮಕ ಪ್ರಕ್ರಿಯೆಯನ್ನು ಚುರುಕುಗೊಳಿಸಿದ ಕೇಂದ್ರ ಸರ್ಕಾರ

ನವದೆಹಲಿ, ಜು.17-ಭ್ರಷ್ಟಾಚಾರ ಮತ್ತು ಲಂಚಾವತಾರ ನಿಗ್ರಹಕ್ಕಾಗಿ ಲೋಕಪಾಲರ ನೇಮಕ ಪ್ರಕ್ರಿಯೆಯನ್ನು ಕೇಂದ್ರ ಸರ್ಕಾರ ಚುರುಕುಗೊಳಿಸಿದೆ. ಇದಕ್ಕಾಗಿ ಶೋಧ ಸಮಿತಿ ರಚಿಸುವ ಉದ್ದೇಶಕ್ಕಾಗಿ ಜು.19ರಂದು ಲೋಕಪಾಲ ಆಯ್ಕೆ ಸಮಿತಿ ಸಭೆ ಸೇರಲಿದೆ. ಈ ಬಗ್ಗೆ ಕೇಂದ್ರ ಸರ್ಕಾರ ಇಂದು ಸುಪ್ರೀಂಕೋರ್ಟ್‍ಗೆ ಮಾಹಿತಿ ನೀಡಿದೆ. ಲೋಕಪಾಲರನ್ನು ನೇಮಕ ಮಾಡುವುದಕ್ಕಾಗಿ ಆಯ್ಕೆ ಸಮಿತಿಗೆ ಈ ಘಟಕವು ಹೆಸರುಗಳನ್ನು ಶಿಫಾರಸು ಮಾಡಲಿದೆ ಎಂದು ಸರ್ಕಾರವು ಹಿರಿಯ ನ್ಯಾಯಮೂರ್ತಿ ರಂಜನ್ ಗೊಗೈ ನೇತೃತ್ವದ ಪೀಠಕ್ಕೆ ತಿಳಿಸಿದೆ.
ಜುಲೈ 19ರಂದು ಆಯ್ಕೆ ಸಮಿತಿ ಸಭೆ ಸೇರಲಿರುವುದರಿಂದ ಈ ಪ್ರಕರಣದ ಮುಂದಿನ ವಿಚಾರಣೆ ದಿನಾಂಕವನ್ನು ಪೀಠವು ಜುಲೈ 24ಕ್ಕೆ ನಿಗದಿಗೊಳಿಸಿದೆ. ಆಯ್ಕೆ ಸಮಿತಿಯಲ್ಲಿ ಪ್ರಧಾನಮಂತ್ರಿ, ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ, ಲೋಕಸಭಾಧ್ಯಕ್ಷರು, ವಿರೋಧ ಪಕ್ಷದ ನಾಯಕ ಹಾಗೂ ಪರಿಣಿತ ತೀರ್ಪುಗಾರರು ಇದ್ದಾರೆ. ಜು.19ರ ಸಭೆಯಲ್ಲಿ ಶೋಧ ಸಮಿತಿಯನ್ನು ರಚಿಸಿದ ನಂತರ ಲೋಕಪಾಲರ ನೇಮಕ ಪ್ರಕ್ರಿಯೆ ಮತ್ತಷ್ಟು ತೀವ್ರಗೊಳ್ಳಲಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ