ನವದೆಹಲಿ,ಜು.16- ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ರಾಜ್ಯಸಭೆಯ ಸಭಾ ನಾಯಕರಾದ ಅರುಣ್ ಜೇಟ್ಲಿ ಗೈರುಹಾಜರಾಗಲಿರುವ ಹಿನ್ನೆಲೆಯಲ್ಲಿ ಈ ಬಾರಿಯ ಅಧಿವೇಶನದಲ್ಲಿ ಪ್ರತಿಪಕ್ಷಗಳನ್ನು ಸಮರ್ಪಕವಾಗಿ ಎದುರಿಸಲು ಹೊಸ ನಾಯಕನ ಆಯ್ಕೆಯಲ್ಲಿ ಬಿಜೆಪಿ ಮಗ್ನವಾಗಿದೆ.
ಮೂಲಗಳ ಪ್ರಕಾರ ರಾಜ್ಯಸಭೆಯ ನೂತನ ಸಭಾನಾಯಕರಾಗಿ ಆಯ್ಕೆಯಾಗುವವರ ಪಟ್ಟಿಯಲ್ಲಿ ಕೇಂದ್ರ ಸಚಿವರಾದ ಜೆ.ಪಿ.ನಡ್ಡಾ , ಪಿಯೂಷ್ ಗೋಯಲ್ ಮತ್ತು ವಿಜಯ್ ಗೋಯಲ್ ಅವರ ಹೆಸರು ಚಾಲ್ತಿಯಲ್ಲಿವೆ.
ರಾಜಸಭೆಯಲ್ಲಿ ಪ್ರತಿಪಕ್ಷದ ನಾಯಕ ಗುಲಾಂ ನಬಿ ಅಜಾದ್, ಪ್ರಮುಖದರಾದ ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್, ಪಿ.ಚಿದಂಬರಂ, ಅಂಬಿಕಾ ಸೋನಿ, ಶರದ್ ಯಾದವ್ ಸೇರಿದಂತೆ ಘಟಾನುಘಟಿಗಳನ್ನು ಅಧಿವೇಶನದ ಸಂದರ್ಭದಲ್ಲಿ ಎದುರಿಸುವುದು ಅಷ್ಟು ಸುಲಭವಲ್ಲ.
ಪ್ರತಿಪಕ್ಷಗಳು ಎತ್ತುವ ಪ್ರತಿ ವಿಷಯಕ್ಕೂ ಸಮರ್ಪಕ ಉತ್ತರ ನೀಡಿ ಸರ್ಕಾರವನ್ನು ಸಮರ್ಥಿಸಿಕೊಳ್ಳುವುದರ ಜೊತೆಗೆ ಪ್ರಮುಖ ಕಾಯ್ದೆಗಳು ಅಂಗೀಕಾರವಾಗುವ ಸಮಯದಲ್ಲಿ ರಾಜಕೀಯ ಜಾಣ್ಮೆ ಪ್ರಮುಖವಾಗಿರುತ್ತದೆ. ಕಳೆದ ನಾಲ್ಕೂವರೆ ವರ್ಷಗಳ ಅವಧಿಯಲ್ಲಿ ಅರುಣ್ ಜೇಟ್ಲಿ ರಾಜ್ಯಸಭೆಯ ನಾಯಕರಾಗಿ ಹಲವು ಕಠಿಣ ಸವಾಲುಗಳನ್ನು ಎದುರಿಸಿ ಸರ್ಕಾರವನ್ನು ಸಮರ್ಪಕವಾಗಿ ಮುನ್ನಡೆಸಿದ್ದರು.
ಈ ಬಾರಿಯ ಅಧಿವೇಶನದಲ್ಲೂ ತ್ರಿವಳಿ ತಲಾಕ್ ಹಾಗೂ ಹಿಂದುಳಿದ ವರ್ಗಗಳ ಆಯೋಗಕ್ಕೆ ಸಂವಿಧಾನದ ಸ್ಥಾನಮಾನ ನೀಡುವ ಮಹತ್ವದ ಕಾಯ್ದೆ ಸೇರಿದಂತೆ ಪ್ರಮುಖ ಮಸೂದೆಗಳು ಅಂಗೀಕಾರವಾಗಬೇಕಿದೆ.
ಲೋಕಸಭೆಯಲ್ಲಿ ಬಿಜೆಪಿ ಬಹುಮತ ಹೊಂದಿದ್ದರೂ ರಾಜ್ಯಸಭೆಯಲ್ಲಿ ಬಹುಮತವಿಲ್ಲ. ಕೆಲವು ಸಂದರ್ಭಗಳಲ್ಲಿ ಮಿತ್ರ ಪಕ್ಷಗಳ ಜೊತೆ ಹೊಂದಾಣಿಕೆಯ ಮನೋಭಾವನೆ ಅತ್ಯಗತ್ಯ.
ಈ ಹಿಂದೆ ಜಿಎಸ್‍ಟಿ ಸೇರಿದಂತೆ ಪ್ರಮುಖ ಮಸೂದೆಗಳು ಅಂಗೀಕಾರವಾಗಬೇಕಾದರೆ ಪ್ರತಿಪಕ್ಷಗಳ ಜೊತೆ ಅರುಣ್‍ಜೇಟ್ಲಿ ನಡೆಸಿದ ಸಂಧಾನ ಹಾಗೂ ಆ ಮಸೂದೆಗಳ ಮಹತ್ವವನ್ನು ಸಭೆಯಲ್ಲಿ ಎಳೆಎಳೆಯಾಗಿ ಬಿಡಿಸಿಡುತ್ತಿದ್ದರು. ಇದೇ ಬುಧವಾರದಿಂದ ಆರಂಭವಾಗಲಿರುವ ಅಧಿವೇಶನಕ್ಕೆ ಅವರ ಗೈರುಹಾಜರಿ ಬಿಜೆಪಿಗೆ ತುಂಬಲಾರದ ನಷ್ಟವಾಗಿದೆ.
ಕೆಲ ದಿನಗಳ ಹಿಂದೆ ಅರುಣ್ ಜೇಟ್ಲಿ ಮೂತ್ರಪಿಂಡ ಕಸಿ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದರು. ಕೆಲ ತಿಂಗಳ ಕಾಲ ವಿಶ್ರಾಂತಿ ಪಡೆಯಬೇಕೆಂದು ವೈದ್ಯರು ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ಅಧಿವೇಶನ ಪೂರ್ತಿ ಅರುಣ್ ಜೇಟ್ಲಿ ಗೈರುಹಾಜರಾಗಲಿದ್ದಾರೆ. ಹಾಗಾಗಿ ಬಿಜೆಪಿಯಲ್ಲಿ ಹೊಸ ನಾಯಕನ ಆಯ್ಕೆ ಕಸರತ್ತು ನಡೆಯುತ್ತಿದೆ.
ರಾಜ್ಯಸಭೆಯ ಸಭಾನಾಯಕನ ಆಯ್ಕೆ ಕುರಿತಂತೆ ಬಿಜೆಪಿ ಕೆಲ ದಿನಗಳ ಹಿಂದೆ ಚರ್ಚೆ ನಡೆಸಿತ್ತಾದರೂ ಈವರೆಗೂ ಅಂತಿಮಗೊಂಡಿಲ್ಲ. ಹಣಕಾಸು ಖಾತೆ ಹೊಂದಿರುವ ರೈಲ್ವೆ ಸಚಿವ ಪಿಯೂಷ್ ಗೋಯಲ್, ಮಾನವ ಸಂಪನ್ಮೂಲ ಸಚಿವ ಪ್ರಕಾಶ್ ಜಾವ್ಡೇಕರ್, ವಿಜಯ್ ಗೋಯಲ್ ಹೆಸರುಗಳು ಕೇಳಿಬಂದಿವೆ.
ಅಂತಿಮವಾಗಿ ನಾಳೆ ಪಕ್ಷದ ವರಿಷ್ಠರು ಮತ್ತೊಂದು ಸುತ್ತಿನ ಸಭೆ ನಡೆಸಿ ಹೆಸರನ್ನು ಅಂತಿಮಗೊಳಿಸಲಿದ್ದಾರೆ ಎಂದು ತಿಳಿದುಬಂದಿದೆ.