ಬೆಂಗಳೂರು, ಜು.16- ರಾಜ್ಯದ ರೈತರು ಸಹಕಾರ ಮತ್ತು ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಪಡೆದಿರುವ ಸಂಪೂರ್ಣ ಸಾಲವನ್ನು ಮನ್ನಾ ಮಾಡಬೇಕೆಂದು ಅಖಂಡ ಕರ್ನಾಟಕ ರೈತ ಸಂಘ ಒತ್ತಾಯಿಸಿದೆ.
ನಗರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಸೋಮನಗುದ್ದು ರಂಗಸ್ವಾಮಿ, ಚುನಾವಣೆ ಪೂರ್ವದಲ್ಲಿ ಆಶ್ವಾಸನೆ ನೀಡಿದಂತೆ ರೈತರ ಸಂಪೂರ್ಣ ಸಾಲ ಮನ್ನಾ ಆಗಬೇಕು. ಅದರಲ್ಲಿ ಸಣ್ಣ, ದೊಡ್ಡ ರೈತ, ಸುಸ್ಥಿದಾರ, ಚಾಲ್ತಿದಾರ ಎಂದು ವಿಂಗಡಿಸಬಾರದು. ಯಾವುದೇ ಬ್ಯಾಂಕ್‍ನಲ್ಲಿ ಸಾಲ ಪಡೆದರೂ ಅದನ್ನು ಮನ್ನಾ ಮಾಡಬೇಕೆಂದು ಒತ್ತಾಯಿಸಿದರು.
ಕೇಂದ್ರ ಸರ್ಕಾರ ಬೆಂಬಲ ಬೆಲೆ ಘೋಷಿಸಿದ್ದಕ್ಕೆ ಜತೆಯಾಗಿ ರಾಜ್ಯ ಸರ್ಕಾರವೂ 2000 ರೂ. ಬೆಂಬಲ ಬೆಲೆ ನೀಡಬೇಕು. ಸಕ್ಕರೆ ಕಾರ್ಖಾನೆಗಳು, ಕಬ್ಬು ಬೆಳೆಗಾರರಿಗೆ 1500 ಕೋಟಿ ರೂ. ಬಾಕಿ ಉಳಿಸಿಕೊಂಡಿದೆ. ಅದನ್ನು ಕೂಡಲೇ ಕೊಡಿಸಬೇಕು. ಒಣ ಬೇಸಾಯಕ್ಕೆ ತೆಲಂಗಾಣ ಮಾದರಿಯಲ್ಲಿ ಪ್ರತಿ ಎಕರೆಗೆ 10 ಸಾವಿರ ರೂ.ನಂತೆ ಪೆÇ್ರೀ ಧನ ನೀಡಬೇಕು. ನಮ್ಮ ಹೊಲ ನಮ್ಮ ರಸ್ತೆ ಯೋಜನೆಯಡಿ ಪ್ರತಿ ರೈತರ ಜಮೀನಿಗೆ ರಸ್ತೆ ನಿರ್ಮಿಸಿಕೊಡಬೇಕು. 60 ವರ್ಷ ಮೇಲ್ಪಟ್ಟ ರೈತರಿಗೆ ತಿಂಗಳಿಗೆ 6ಸಾವಿರ ರೂ. ಗೌರವ ಧನ ನೀಡಬೇಕೆಂದು ಒತ್ತಾಯಿಸಿದರು.
ಹಿಂದೂಸ್ತಾನ್, ಇನ್ಫ್ರೋಕಾನ್ ಎಂಬ ಕಂಪೆನಿ, ರೈತರು ಮತ್ತು ಸಾರ್ವಜನಿಕರಿಂದ ಹಣ ವಸೂಲಿ ಮಾಡಿ 400 ಕೋಟಿ ರೂ. ವಂಚಿಸಿದೆ. ಈ ಬಗ್ಗೆ ಸಿಐಡಿ ತನಿಖೆಯೂ ನಡೆದಿದೆ. ಸರ್ಕಾರ ಮುಟ್ಟುಗೋಲು ಹಾಕಿಕೊಂಡಿರುವ ಕಂಪೆನಿ ಆಸ್ತಿಯನ್ನು ಮಾರಾಟ ಮಾಡಿ ವಂಚನೆಗೊಳಗಾದವರಿಗೆ ಹಣ ವಾಪಸ್ ಕೊಡಿಸಬೇಕೆಂದು ಅವರು ಆಗ್ರಹಿಸಿದರು.
ಸಂಘದ ಮುಖಂಡರಾದ ನಿರ್ಮಲಕಾಂತ ಪಾಟೀಲ್, ಕೆ.ಎಸ್.ಸುಧೀರ್‍ಕುಮಾರ್, ರಂಜಣಗಿ, ಬಿ.ಸಿ.ಪಾಟೀಲ್ ಸೇರಿದಂತೆ ಹಲವಾರು ನಾಯಕರು ಪತ್ರಿಕಾಗೋಷ್ಠಿಯಲ್ಲಿದ್ದರು.