ಸಂಸತ್ತಿನ ಮುಂಗಾರು ಅಧಿವೇಶನ ಜು.18ರಿಂದ ಆರಂಭ

ನವದೆಹಲಿ, ಜು.16-ಸಂಸತ್ತಿನ ಮುಂಗಾರು ಅಧಿವೇಶನ ಜು.18ರಿಂದ ಆರಂಭವಾಗಲಿದ್ದು, ಲೋಕಸಭೆ ಅಧ್ಯಕ್ಷೆ ಸುಮಿತ್ರಾ ಮಹಾಜನ್ ನಾಳೆ ಭೋಜನಕೂಟದಲ್ಲಿ ವಿವಿಧ ರಾಜಕೀಯ ಪಕ್ಷಗಳ ಮುಖಂಡರೊಂದಿಗೆ ಚರ್ಚಿಸಲಿದ್ದಾರೆ. ಮುಂಗಾರು ಅಧಿವೇಶನವು ಸುಗಮವಾಗಿ ನಡೆಯಲು ಹಾಗೂ ಬಾಕಿ ಇರುವ ವಿವಿಧ ಮಸೂದೆಗಳು ಅಂಗೀಕಾರವಾಗಲು ಸ್ಪೀಕರ್ ಅವರು ಪ್ರತಿಪಕ್ಷಗಳ ಬೆಂಬಲ ಕೋರಲಿದ್ದಾರೆ ಎಂದು ಲೋಕಸಭೆ ಕಾರ್ಯಾಲಯದ ಮೂಲಗಳು ತಿಳಿಸಿವೆ. ಸಭೆಯಲ್ಲಿ ಪಾಲ್ಗೊಳ್ಳದಿದ್ದರೂ, ಪ್ರಧಾನಿ ನರೇಂದ್ರ ಮೋದಿ ಅವರು ಭೋಜನಕೂಟದಲ್ಲಿ ಭಾಗವಹಿಸುವ ಸಾಧ್ಯತೆ ಇದೆ. ಸಂಸತ್ತಿನ ಗ್ರಂಥಾಲಯ ಕಟ್ಟಡದಲ್ಲಿ ಸಭೆ ನಡೆಯಲಿದ್ದು, ವಿರೋಧ ಪಕ್ಷಗಳೊಂದಿಗೆ ಸರ್ಕಾರದ ಇನ್ನೊಂದು ಸಭೆ ನಂತರ ಸ್ಪೀಕರ್ ಮತ್ತು ಪ್ರತಿಪಕ್ಷಗಳ ನಾಯಕರು ಸಮಾಲೋಚನೆಯಲ್ಲಿ ಭಾಗವಹಿಸಲಿದ್ದಾರೆ.
ಮುಂಗಾರು ಅಧಿವೇಶನದಲ್ಲಿ ವಿವಿಧ ವಿಷಯಗಳ ಮೇಲೆ ಸರ್ಕಾರದ ಮೇಲೆ ವಾಗ್ದಾಳಿ ನಡೆಸಲು ಜಂಟಿ ಕಾರ್ಯತಂತ್ರ ರೂಪಿಸುವ ಸಂಬಂಧ ವಿರೋಧ ಪಕ್ಷಗಳು ಇಂದು ಸಭೆ ಸೇರಿ ಸಮಾಲೋಚನೆ ನಡೆಸಲಿವೆ.
ಜುಲೈ 1 ರಂದು ಕಾಂಗ್ರೆಸ್‍ನ ಪಿ.ಜೆ. ಕುರಿಯನ್ ಅವರ ಅವಧಿ ಮುಗಿದ ನಂತರ ಖಾಲಿ ಇರುವ ರಾಜ್ಯ ಸಭೆ ಉಪ ಸಭಾಪತಿ ಹುದ್ದೆಗೆ ಜಂಟಿ ಅಭ್ಯರ್ಥಿ ಹೆಸರನ್ನು ಅಂತಿಮಗೊಳಿಸುವ ಬಗ್ಗೆ ಪ್ರತಿಪಕ್ಷಗಳು ಚರ್ಚಿಸಲಿವೆ.
ಕಾಂಗ್ರೆಸ್ ಮತ್ತು ವಿವಿಧ ರಾಜಕೀಯ ಪಕ್ಷಗಳ ನಾಯಕರು ಇಂದು ಸಜೆ ಮೇಲ್ಮನೆ ವಿರೋಧ ಪಕ್ಷದ ಮುಖಂಡ ಗುಲಾಂ ನಬಿ ಅಜಾದ್ ಅವರ ಕಚೇರಿಯಲ್ಲಿ ಸಭೆ ಸೇರಲಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ