ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರಕ್ಕೆ ಸಡ್ಡು ಹೊಡೆದು ಮೋದಿ ರಣಕಹಳೆ

 

ಬೆಂಗಳೂರು, ಜು.16- ಆಡಳಿತಾರೂಢ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರಕ್ಕೆ ಸಡ್ಡು ಹೊಡೆದು ಲೋಕಸಭೆ ಚುನಾವಣೆಯಲ್ಲಿ ಹೆಚ್ಚು ಸ್ಥಾನ ಗಳಿಸಲು ರಣತಂತ್ರ ರೂಪಿಸಿರುವ ಬಿಜೆಪಿ ಮುಂದಿನ ತಿಂಗಳು ಪ್ರಧಾನಿ ನರೇಂದ್ರ ಮೋದಿ ಮೂಲಕ ರಣಕಹಳೆ ಮೊಳಗಿಸಲಿದೆ.
ಮುಂದಿನ ತಿಂಗಳು ಮುಂಬೈ ಕರ್ನಾಟಕದ ಚಿಕ್ಕೋಡಿ ಇಲ್ಲವೇ ಹಾವೇರಿಯಲ್ಲಿ ಬೃಹತ್ ರೈತ ಸಮಾವೇಶ ನಡೆಸುವ ಮೂಲಕ ಬಿಜೆಪಿ ಲೋಕಸಭೆ ಚುನಾವಣೆಗೆ ವಿದ್ಯುಕ್ತ ಚಾಲನೆ ನೀಡಿದೆ.
ಈ ಕಾರ್ಯಕ್ರಮಕ್ಕೆ ಖುದ್ದು ಪ್ರಧಾನಿ ನರೇಂದ್ರ ಮೋದಿಯೇ ಆಗಮಿಸಲಿದ್ದು, ಸುಮಾರು ಐದು ಲಕ್ಷಕ್ಕೂ ಹೆಚ್ಚು ರೈತರನ್ನು ಸೇರಿಸಲು ಬಿಜೆಪಿ ಮುಂದಾಗಿದೆ.
ಕಳೆದ ವಾರ ಪಂಜಾಬ್‍ನ ಮುಸ್ತಕರ್ ಹಾಗೂ ಉತ್ತರ ಪ್ರದೇಶದ ಮಿರ್ಜಾಪುರದಲ್ಲಿ ಬೃಹತ್ ರೈತ ಸಮಾವೇಶ ನಡೆಸಿದ್ದ ಮೋದಿ ದೇಶಾದ್ಯಂತ ಒಟ್ಟು 50ಕ್ಕೂ ಹೆಚ್ಚು ರೈತರ ಸಮಾವೇಶಗಳನ್ನು ನಡೆಸಿ, ಕೇಂದ್ರ ಸರ್ಕಾರದ ಸಾಧನೆಗಳನ್ನು ಜನರಿಗೆ ಮನವರಿಕೆ ಮಾಡಿಕೊಡುತ್ತಿದ್ದಾರೆ.
ಇದರ ಮುಂದುವರೆದ ಭಾಗವಾಗಿ ಕರ್ನಾಟಕದಲ್ಲೂ ಮೋದಿ ಚಿಕ್ಕೋಡಿ ಇಲ್ಲವೇ ಹಾವೇರಿಯಲ್ಲಿ ಬೃಹತ್ ರೈತ ಸಮಾವೇಶ ಉದ್ಘಾಟಿಸಿ ಲೋಕಸಬೆ ಚುನಾವಣೆಗೆ ಕಾರ್ಯಕರ್ತರನ್ನು ಹುರಿದುಂಬಿಸಲಿದ್ದಾರೆ.
ಈಗಾಗಲೇ ಮೋದಿ ಆಗಮನ ಕುರಿತಂತೆ ಪಕ್ಷದ ವೇದಿಕೆಯಲ್ಲಿ ಚರ್ಚೆಯಾಗಿದ್ದು , ಸಮಾವೇಶವನ್ನು ಎಲ್ಲಿ ನಡೆಸಬೇಕು ಎಂಬುದು ನಿರ್ಧಾರವಾಗಿಲ್ಲ. ಕೆಳದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗೆ ತುಸು ಹಿನ್ನಡೆಯಾದರೂ ಮುಂಬೈ ಕರ್ನಾಟಕದಲ್ಲಿ ವ್ಯಾಪಕ ಬೆಂಬಲ ವ್ಯಕ್ತವಾಗಿತ್ತು.
ಕಾರ್ಯಕರ್ತರಿಗೆ ಕೃತಜ್ಞತೆ ಹಾಗೂ ಲೋಕಸಭೆ ಚುನಾವಣೆಗೆ ಪಕ್ಷ ಸಂಘಟಿಸುವ ಸದುದ್ದೇಶದಿಂದ ಬಿಜೆಪಿ ಈ ತಂತ್ರವನ್ನು ಹೆಣೆದಿದೆ. ಒಂದೆಡೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ , ಲೋಕಸಭೆ ಚುನಾವಣೆಗೆ ಪಕ್ಷವನ್ನು ಅಣಿಗೊಳಿಸಲು ದೇಶಾದ್ಯಂತ ಪ್ರವಾಸ ನಡೆಸುತ್ತಿದ್ದಾರೆ.
ಮತ್ತೊಂದೆಡೆ ಸ್ವಂತ ಬಲದ ಮೇಲೆ ಅಧಿಕಾರ ಹಿಡಿಯುವ ಉಮೇದಿನೊಂದಿಗೆ ಮೋದಿ ಕೂಡ ದೇಶದ ನಾನಾ ಭಾಗಗಳಲ್ಲಿ ಬೃಹತ್ ಸಾರ್ವಜನಿಕ ಸಮಾರಂಭಗಳನ್ನು ನಡೆಸುತ್ತಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ಆಡಳಿತ ನಡೆಸುತ್ತಿದ್ದರೂ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಜನರ ವಿಶ್ವಾಸವನ್ನು ಗಳಿಸುವಲ್ಲಿ ಯಶಸ್ವಿಯಾಗಿತ್ತು.
ಸ್ಪಷ್ಟ ಜನಾದೇಶ ಬಾರದಿದ್ದರೂ ಸಿದ್ದರಾಮಯ್ಯನಂತಹ ಪ್ರಬಲ ನಾಯಕತ್ವದ ವಿರುದ್ಧ 104 ಸ್ಥಾನ ಗಳಿಸಿದ್ದು ಸಾಮಾನ್ಯ ಮಾತಲ್ಲ. ಜೆಡಿಎಸ್-ಕಾಂಗ್ರೆಸ್ ಎರಡೂ ಪಕ್ಷಗಳು ಈಗಾಗಲೇ ಮೈತ್ರಿ ಮಾಡಿಕೊಳ್ಳುವ ಸುಳಿವು ನೀಡಿವೆ. ಈಗ ಇದು ಲೋಕಸಭೆ ಚುನಾವಣೆ ಬಿಜೆಪಿಗೆ ಸವಾಲಾಗಿಯೇ ಪರಿಣಮಿಸಿದೆ.
2014ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ 17 ಸ್ಥಾನ ಗಳಿಸಿತ್ತು. ಈ ಬಾರಿ 20 ಸ್ಥಾನಗಳ ಗುರಿಯೊಂದಿಗೆ ಚುನಾವಣಾ ಅಖಾಡಕ್ಕೆ ಧುಮುಕಲು ಕಮಲ ಪಡೆ ಸಜ್ಜಾಗಿದೆ. ಇದಕ್ಕಾಗಿಯೇ ರಾಜ್ಯದಲ್ಲಿ ಮತ್ತೊಮ್ಮೆ ಮೋದಿ ಸುನಾಮಿಯನ್ನು ಸೃಷ್ಟಿಸಲು ಬಿಜೆಪಿ ಸಜ್ಜಾಗುತ್ತಿದೆ.
28ಕ್ಕೆ ಅಮಿತ್ ಷಾ:
ಒಂದೆಡೆ ಮೋದಿ ಆಗಮನಕ್ಕೂ ಮುನ್ನ ಅಮಿತ್ ಷಾ ಇದೇ 28ರಂದು ಬೆಂಗಳೂರಿಗೆ ಆಗಮಿಸಲಿದ್ದಾರೆ. ಬೂತ್ ಮಟ್ಟವನ್ನು ಸಜ್ಜುಗೊಳಿಸುವುದು, ಅಭ್ಯರ್ಥಿಗಳ ಆಯ್ಕೆ, ಚುನಾವಣೆಗೆ ಅನುಸರಿಸಬೇಕಾದ ಕಾರ್ಯತಂತ್ರ ಸೇರಿದಂತೆ ಹಲವು ವಿಷಯಗಳ ಬಗ್ಗೆ ಚರ್ಚಿಸಲು ಆಗಮಿಸುತ್ತಿದ್ದಾರೆ.
ಯಡಿಯೂರಪ್ಪನವರನ್ನು ಪಕ್ಷದ ರಾಜ್ಯಾಧ್ಯಕ್ಷರನ್ನಾಗಿ ಮುಂದುವರೆಸಬೇಕೇ , ಬೇರೊಬ್ಬರನ್ನು ಆಯ್ಕೆ ಮಾಡಬೇಕೆ, ನಾಯಕರ ನಡುವೆ ಸಮನ್ವಯತೆ ಸಾಧಿಸುವುದು, ಕೇಂದ್ರ ಸರ್ಕಾರದ ಸಾಧನೆಗಳನ್ನು ಮನೆ ಮನೆಗೆ ತಲುಪಿಸುವುದು, ಆಡಳಿತಾರೂಢ ಸರ್ಕಾರದ ವೈಫಲ್ಯಗಳನ್ನು ಜನರಿಗೆ ಮನವರಿಕೆ ಮಾಡಿಕೊಡುವಂತೆ ಕಾರ್ಯಕರ್ತರಿಗೆ ಷಾ ಸೂಚಿಸಲಿದ್ದಾರೆ.
ಒಟ್ಟಿನಲ್ಲಿ ಲೋಕಸಭೆ ಚುನಾವಣೆಗೆ ಕೆಲವೇ ತಿಂಗಳು ಬಾಕಿ ಇರುವಾಗಲೇ ಬಿಜೆಪಿ ಪುಟಿದೇಳಲು ತನ್ನದೇ ಆದ ರಣತಂತ್ರ ರೂಪಿಸುತ್ತಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ