ಬೆಂಗಳೂರು, ಜು.16-ನಗರದಲ್ಲಿ ಸುರಿಯುತ್ತಿರುವ ಮಳೆ ಹಿನ್ನೆಲೆಯಲ್ಲಿ ವಹಿಸಬೇಕಾದ ಮುನ್ನೆಚ್ಚರಿಕೆ, ಕಸ ನಿರ್ವಹಣೆ, ಕಾನೂನು ಸುವ್ಯವಸ್ಥೆ, ಅನುದಾನ ಹಂಚಿಕೆ ತಾರತಮ್ಯ ನಿವಾರಣೆ ಸೇರಿದಂತೆ ಬೆಂಗಳೂರು ಮಹಾನಗರದಲ್ಲಿನ ಪ್ರಚಲಿತ ಸಮಸ್ಯೆ ಕುರಿತು ಮಹತ್ವದ ಸಭೆಯನ್ನು ನಡೆಸಲಾಯಿತು.
ಉಪಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆದ ಡಾ.ಜಿ.ಪರಮೇಶ್ವರ್ ಅಧ್ಯಕ್ಷತೆಯಲ್ಲಿ ಸುಮಾರು 2 ಗಂಟೆಗೂ ಹೆಚ್ಚು ಕಾಲ ನಡೆದ ಸಭೆಯಲ್ಲಿ ಪ್ರಮುಖವಾಗಿ ಬೆಂಗಳೂರಿನಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಉಂಟಾಗುತ್ತಿರುವ ಸಮಸ್ಯೆಗಳನ್ನು ಪರಿಹರಿಸಲು ಪರಮೇಶ್ವರ್ ಅವರಿಗೆ ಜನಪ್ರತಿನಿಧಿಗಳು ಮನವಿ ಮಾಡಿದರು.
ರಾಜಕಾಲುವೆ ಒತ್ತುವರಿ, ಕಾಲುವೆಗಳ ಹೂಳೆತ್ತದಿರುವುದು, ಚರಂಡಿಯಲ್ಲಿ ಸಂಗ್ರಹವಾಗಿರುವ ತ್ಯಾಜ್ಯವನ್ನು ತೆಗೆದು ಹಾಕದಿರುವುದರಿಂದ ನೀರು ಸಮರ್ಪಕವಾಗಿ ಹರಿದು ಹೋಗದ ಕಾರಣ ಸಾಕಷ್ಟು ಸಮಸ್ಯೆ ಉಂಟಾಗಿದೆ. ಅಲ್ಲದೆ, ತಕ್ಷಣವೇ ರಾಜಕಾಲುವೆ ಒತ್ತುವರಿ ತೆರವಿಗೂ ಕ್ರಮ ಕೈಗೊಳ್ಳುವಂತೆ ಪಕ್ಷಭೇದ ಮರೆತು ಸದಸ್ಯರು ಒತ್ತಾಯಿಸಿದ್ದಾರೆ.
ಪ್ರಭಾವಿಗಳು ರಾಜಕಾಲುವೆ ಒತ್ತುವರಿ ಮಾಡಿದ ಪರಿಣಾಮ ತಗ್ಗು ಪ್ರದೇಶಗಳಿಗೆ ನೀರು ಹರಿದು ಅನೇಕರಿಗೆ ತೊಂದರೆ ಉಂಟಾಗಿದೆ. ಕೆಲವು ಬಿಬಿಎಂಪಿ ಮತ್ತು ನಗರಾಭಿವೃದ್ಧಿ ಇಲಾಖೆ ಅಧಿಕಾರಿಗಳು ಕೆಲವರ ಜತೆ ಶಾಮೀಲಾಗಿ ಯಾವುದೇ ಕ್ರಮ ಕೈಗೊಂಡಿಲ್ಲ.ಕೂಡಲೇ ಅಂತಹವರ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ಒಕ್ಕೊರಲಿನ ಒತ್ತಾಯ ಮಾಡಿದ್ದಾರೆ.
ನಗರದಲ್ಲಿ ಇತ್ತೀಚೆಗೆ ಕಾನೂನು ಸುವ್ಯವಸ್ಥೆ ಕುಸಿಯುತ್ತಿದ್ದು, ಸಮಾಜಘಾತುಕ ಶಕ್ತಿಗಳು ಅಟ್ಟಹಾಸ ಮೆರೆಯುತ್ತಿವೆ. ವೃದ್ಧರ ಮೇಲೆ ಹಲ್ಲೆ, ಸರ ಅಪಹರಣಗಳು, ದರೋಡೆ, ಕೊಲೆ, ಸುಲಿಗೆ ನಡೆಯುತ್ತಿವೆ. ಕಾನೂನು ಸುವ್ಯವಸ್ಥೆ ಕುಸಿದಿದ್ದರೂ ಪೆÇಲೀಸರು ಏಕೆ ಕೈ ಕಟ್ಟಿ ಕುಳಿತಿದ್ದಾರೆ ಎಂದು ಸಚಿವರನ್ನು ಪ್ರಶ್ನೆ ಮಾಡಿದರು.
ಯಾರೋ ಕೆಲವರು ನಡೆಸುವ ಕೃತ್ಯದಿಂದ ಬೆಂಗಳೂರಿಗೆ ಕೆಟ್ಟಹೆಸರು ಬರುತ್ತದೆ. ನಗರ ಪೆÇಲೀಸ್ ಆಯುಕ್ತರು, ಡಿಸಿಪಿ, ಎಸಿಪಿ ಹಾಗೂ ಠಾಣಾ ಇನ್ಸ್‍ಪೆಕ್ಟರ್‍ಗಳು ಮುಕ್ತವಾಗಿ ಕೆಲಸ ಮಾಡಲು ಸೂಚನೆ ಕೊಟ್ಟಿದ್ದರೂ ಪೆÇಲೀಸರು ಮಾತ್ರ ಕುಂಟುನೆಪ ಹೇಳುತ್ತಿದ್ದಾರೆ. ಪದೇ ಪದೇ ಇಂತಹ ಘಟನೆಗಳು ನಡೆಯುತ್ತಿದ್ದರೂ ಎಚ್ಚೆತ್ತುಕೊಳ್ಳದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂಬ ಆಗ್ರಹವೂ ಕೇಳಿಬಂದಿದೆ.
ಹಾಡಹಗಲೇ ಬೆಂಗಳೂರಿನಲ್ಲಿ ಕೊಲೆಗಳು, ದರೋಡೆ, ಸರ ಅಪಹರಣದಂತಹ ಪ್ರಕರಣಗಳು ನಡೆಯುತ್ತಿವೆ ಎಂದರೆ ಯಾವ ಸರ್ಕಾರಕ್ಕೂ ಶೋಭೆ ತರುವುದಿಲ್ಲ. ಕೆಲವರು ರಾಜಕೀಯ ವ್ಯಕ್ತಿಗಳ ಹೆಸರು ಹೇಳಿಕೊಂಡು ಇಂತಹ ಕೃತ್ಯ ನಡೆಸುತ್ತಾರೆ. ಪೆÇಲೀಸರು ಮುಕ್ತವಾಗಿ ಕೆಲಸ ಮಾಡಲು ಅವಕಾಶ ನೀಡಬೇಕು. ಯಾವುದೇ ಕಾರಣಕ್ಕೂ ಯಾರೊಬ್ಬರ ಹಸ್ತಕ್ಷೇಪವಿಲ್ಲದಂತೆ ನೋಡಿಕೊಳ್ಳಿ ಎಂದು ಸಲಹೆ ನೀಡಿದರು.
ಸಮಸ್ಯೆ ಪರಿಹರಿಸುವೆ: ಸಭೆಯಲ್ಲಿ ಸದಸ್ಯರ ಸಮಸ್ಯೆಗಳನ್ನು ಸಹನೆಯಿಂದಲೇ ಆಲಿಸಿದ ಡಾ.ಜಿ.ಪರಮೇಶ್ವರ್ ನನಗೆ ಎಲ್ಲ ಸಮಸ್ಯೆಗಳೂ ಅರ್ಥವಾಗಿವೆ. ನಗರದ 28 ಕೆÉೀತ್ರಗಳಿಗೂ ಖುದ್ದು ನಾನೇ ಭೇಟಿ ಕೊಡುವೆ. ನಿಮ್ಮ ನಿಮ್ಮ ಕ್ಷೇತ್ರದಲ್ಲಿರುವ ಸಮಸ್ಯೆಗಳ ಪಟ್ಟಿಯನ್ನು ನನಗೆ ನೀಡಿ. ಎಲ್ಲಿ ಏನು ಆಗಬೇಕೆಂಬುದನ್ನು ನಾನು ಪರಿಶೀಲಿಸಿ ಸಮಸ್ಯೆ ಬಗೆಹರಿಸುತ್ತೇನೆ ಎಂದು ಭರವಸೆ ನೀಡಿದರು.
ಕಳೆದ ಒಂದು ವರ್ಷದಿಂದ ನಗರದಲ್ಲಿ ನಡೆಯುತ್ತಿರುವ ಕೆಲವು ಘಟನೆಗಳಿಂದಾಗಿ ತಲೆ ತಗ್ಗಿಸುವಂತಾಗಿದೆ. ಸರ್ಕಾರ ಯಾವುದೇ ಇರಲಿ, ಮುಖ್ಯಮಂತ್ರಿಗಳು ಯಾರೇ ಇರಲಿ, ವ್ಯವಸ್ಥೆ ಮಾತ್ರ ಯಥಾಸ್ಥಿತಿ ಇದೆ. ಅಧಿಕಾರಿಗಳು ಕುಂಟುನೆಪ ಹೇಳಲು ಬಿಡುವುದಿಲ್ಲ. ಅದು ಕಸದ ಸಮಸ್ಯೆಯೇ ಇರಲಿ, ಮಳೆ ನೀರು ಅಥವಾ ಕಾನೂನು ಸುವ್ಯವಸ್ಥೆಯಂತಹ ಯಾವುದೇ ಸಮಸ್ಯೆಗಳಿರಲಿ ತಕ್ಷಣವೇ ಸ್ಪಂದಿಸಬೇಕು. ಕಾರಣ ಹೇಳಲು ಅವಕಾಶ ನೀಡುವುದಿಲ್ಲ ಎಂದು ಪರಮೇಶ್ವರ್ ಹೇಳಿದರು.
ಬೆಂಗಳೂರಿನಲ್ಲಿ ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲಾಗುವುದು. ಇತ್ತೀಚೆಗೆ ಬಜೆಟ್‍ನಲ್ಲಿ ನಮ್ಮ ಸರ್ಕಾರ ನಗರಕ್ಕೆ ವಿಶೇಷವಾದ ಯೋಜನೆಗಳನ್ನು ಪ್ರಕಟಿಸಿದೆ. ಅಗತ್ಯವಿರುವ ಕಡೆ ಫ್ಲೈ ಓವರ್, ಸುರಂಗ ಮಾರ್ಗ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುವುದು. ಪ್ರತಿ ದಿನವೂ ಕಸ ವಿಲೇವಾರಿಗೆ ಸಂಬಂಧಪಟ್ಟ ಗುತ್ತಿಗೆದಾರರಿಗೆ ಸೂಚನೆ ನೀಡಲಾಗುವುದು. ನಗರದ ಮೂಲಭೂತ ಸೌಕರ್ಯ ಸೇರಿದಂತೆ ಎಲ್ಲ ರೀತಿಯ ಸಮಸ್ಯೆಗಳನ್ನೂ ಕಾಲಮಿತಿಯಲ್ಲಿ ಪರಿಹರಿಸುವುದಾಗಿ ತಿಳಿಸಿದರು.
ಸಭೆಯಲ್ಲಿ ಸಚಿವರಾದ ಕೆ.ಜೆ.ಜಾರ್ಜ್, ಜಯಮಾಲಾ, ಸಂಸದರು, ಶಾಸಕರು, ವಿಧಾನ ಪರಿಷತ್ ಸದಸ್ಯರು, ಬಿಬಿಎಂಪಿ ಮಹಾಪೌರ ಸಂಪತ್‍ರಾಜ್, ವಿರೋಧ ಪಕ್ಷದ ನಾಯಕ ಪದ್ಮನಾಭರೆಡ್ಡಿ, ಬಿಬಿಎಂಪಿ, ಬಿಎಂಆರ್‍ಸಿಎಲ್, ಬಿಎಂಆರ್‍ಡಿಎ, ನಗರಾಭಿವೃದ್ಧಿ ಹಾಗೂ ಬಿಡಿಎ ಮತ್ತಿತರ ಅಧಿಕಾರಿಗಳು ಭಾಗವಹಿಸಿದ್ದರು.
ಸಂಸದರ ಪೈಕಿ ಪಿ.ಸಿ.ಮೋಹನ್ ಭಾಗವಹಿಸಿದ್ದರೆ, ಅನಂತ್‍ಕುಮಾರ್, ಡಿ.ವಿ.ಸದಾನಂದಗೌಡ, ಡಿ.ಕೆ.ಸುರೇಶ್ ಗೈರು ಹಾಜರಾಗಿದ್ದರು.