ಬೆಂಗಳೂರು, ಜು.16- ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಸಭೆಯಲ್ಲಿ ಹಾಕಿದ ಕಣ್ಣೀರು, ನೀಡಿದ ವಿಷ ಕಂಠ ಹೇಳಿಕೆ ಮೈತ್ರಿ ಸರ್ಕಾರದಲ್ಲಿ ಅಸಮಾಧಾನವನ್ನು ಉಂಟು ಮಾಡಿದೆ.
ಕುಮಾರಸ್ವಾಮಿ ಅವರ ಈ ವರ್ತನೆಗೆ ಕಾಂಗ್ರೆಸ್ ನಾಯಕರು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಜೆಡಿಎಸ್ ನಾಯಕರು ಕುಮಾರಸ್ವಾಮಿ ಅವರ ಬೆಂಬಲಕ್ಕೆ ನಿಂತಿದ್ದಾರೆ.
ಸಂಪುಟದಲ್ಲಿರುವ ಕೆಲ ಸಚಿವರು ಪರ, ವಿರೋಧ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ, ಮುಖಂಡರಾದ ಹರಿಪ್ರಸಾದ್, ಸಮನ್ವಯ ಸಮಿತಿ ಅಧ್ಯಕ್ಷರಾದ ಸಿದ್ದರಾಮಯ್ಯ ಮುಂತಾದವರು ಕುಮಾರಸ್ವಾಮಿ ಅವರ ಹೇಳಿಕೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಇಂತಹ ಬಹಿರಂಗ ಹೇಳಿಕೆಗಳಿಂದ ಕಾಂಗ್ರೆಸ್ ಪಕ್ಷಕ್ಕೆ ಡ್ಯಾಮೇಜ್ ಆಗಲಿದೆ. ಇಂತಹ ಹೇಳಿಕೆಗಳನ್ನು ನಿಯಂತ್ರಿಸದಿದ್ದರೆ ಕಷ್ಟವಾಗುತ್ತದೆ ಎಂದು ತಮ್ಮ ಆಕ್ರೋಶ ಹೊರ ಹಾಕಿದ್ದಾರೆ ಎಂದು ತಿಳಿದು ಬಂದಿದೆ.
ಸರ್ಕಾರದಲ್ಲಿ ಇರುವ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಡಿ.ಕೆ.ಶಿವಕುಮಾರ್ ಅವರ ಹೇಳಿಕೆ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡದೇ ಇರುವುದು ಕಾಂಗ್ರೆಸ್‍ನ ಹಿರಿಯ ನಾಯಕರ ಅತೃಪ್ತಿಗೆ ಕಾರಣವಾಗಿದೆ.
ಕುಮಾರಸ್ವಾಮಿ ಅವರ ಹೇಳಿಕೆಯನ್ನು ವಿರೋಧಿಸಿ ಮಾಜಿ ಸಚಿವ, ಕಾಂಗ್ರೆಸ್ ಮುಖಂಡ ಎ.ಮಂಜು ಮಾತನಾಡಿ, ನಾವು ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ವಿಷ ಉಣಿಸಿಲ್ಲ. ಅಮೃತ ಕೊಟ್ಟಿದ್ದೇವೆ. ಅವರು ಕಾಂಗ್ರೆಸ್ ಪಕ್ಷದ ವರ್ಚಸ್ಸಿಗೆ ಧಕ್ಕೆಯಾಗುವ ರೀತಿ ಹೇಳಿಕೆ ನೀಡುತ್ತಿರುವುದು ಸರಿಯಲ್ಲ. ಎಲ್ಲರನ್ನು ಕೊಂಡೊಯ್ಯುವ ಮೂಲಕ ಆಡಳಿತ ನಡೆಸಬೇಕು. ಸಮ್ಮಿಶ್ರ ಸರ್ಕಾರ ಒಂದು ಸಂಸಾರ ವಿದ್ದಂತೆ ಎಲ್ಲರೂ ಒಗ್ಗಟ್ಟಾಗಿ ಹೋಗಬೇಕು. ಅವರು ಅಳಬಾರದು, ಅತ್ತರೆ ಸಮಸ್ಯೆ ಬಗೆಹರಿಯುವುದಿಲ್ಲ. ಅವರು ಕಣ್ಣೀರು ಒರೆಸಬೇಕೇ ಹೋರತು ಕಣ್ಣೀರು ಸುರಿಸಬಾರದು ಎಂದಿದ್ದಾರೆ.
ಮಾನವೀಯತೆ ಇದ್ದವರಿಗೆ ಸಹಜವಾಗಿ ಭಾವುಕತೆಯಿಂದ ಕಣ್ಣೀರು ಬರುತ್ತದೆ. ಕಲ್ಲು ಹೃದಯ ಇದ್ದವರಿಗೆ ಕಣ್ಣೀರು ಬರುವುದಿಲ್ಲ ಎಂದು ಪಶುಸಂಗೋಪನ ಸಚಿವ ವೆಂಕಟರಾವ್ ನಾಡಗೌಡ ಕುಮಾರಸ್ವಾಮಿ ಪರವಾಗಿ ಮಾತನಾಡುವ ಮೂಲಕ, ಮಂಜು ಅವರಿಗೆ ಟಾಂಗ್ ನೀಡಿದ್ದಾರೆ.
ಸಮ್ಮಿಶ್ರ ಸರ್ಕಾರದ ಮುಖ್ಯಮಂತ್ರಿಯಾಗಿ ಖುಷಿ ಪಡುವ ಬದಲು ನೋವನ್ನೇ ನುಂಗುತ್ತಿದ್ದೇನೆ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಕಣ್ಣೀರು ಹಾಕಲು ಕಾಂಗ್ರೆಸ್ ನಾಯಕರೇ ಕಾರಣ ಎಂದು ಮಾಜಿ ಸಭಾಧ್ಯಕ್ಷ ಕೆ.ಬಿ.ಕೋಳಿವಾಡ ಸ್ವಪಕ್ಷೀಯದವರ ವಿರುದ್ಧವೇ ಕಿಡಿಕಾರಿದ್ದಾರೆ.
ನಿನ್ನೆಯಷ್ಟೇ ಈ ಕುರಿತು ಶಾಸಕ ಸುಧಾಕರ್ ಹೇಳಿಕೆ ನೀಡಿದ್ದರು. ಕುಮಾರಸ್ವಾಮಿ ಅವರು ಹೇಳಿಕೆ ಮತ್ತು ಕಣ್ಣೀರಿನ ಬಗ್ಗೆ ಮೈತ್ರಿ ಪಕ್ಷಗಳಲ್ಲೇ ಹೇಳಿಕೆ, ಪ್ರತಿ ಹೇಳಿಕೆಗಳು ಹೆಚ್ಚಾಗುತ್ತಿವೆ. ಒಬ್ಬರ ಕಾಲನ್ನು ಒಬ್ಬರು ಎಳೆಯುವ ಕೆಲಸಗಳು ನಡೆಯುತ್ತಿವೆ. ಎಲ್ಲರೂ ಒಟ್ಟಾಗಿ ಹೋಗಬೇಕಾದ ಸಂದರ್ಭದಲ್ಲಿ ಈ ರೀತಿ ಪರಸ್ಪರ ಮಾತಿನ ಸಮರಕ್ಕಿಳಿಯುವುದು ಎಷ್ಟು ಸಮಂಜಸ ಎಂಬುದು ಉಭಯ ಪಕ್ಷಗಳ ಕಾರ್ಯಕರ್ತರ ಅಳಲಾಗಿದೆ.