ಬೆಂಗಳೂರು,ಜು.16- ರಾಜ್ಯ ಪ್ರತಿನಿಧಿಸುವ ಲೋಕಸಭೆ ಹಾಗೂ ರಾಜ್ಯಸಭೆ ಸದಸ್ಯರ ಸಭೆಯನ್ನು ಜುಲೈ 18ರಂದು ಸಂಜೆ ನವದೆಹಲಿಯಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕರೆದಿದ್ದಾರೆ.
ದೆಹಲಿಯಲ್ಲಿರುವ ಕರ್ನಾಟಕ ಭವನದಲ್ಲಿ ಬುಧವಾರ ಸಂಜೆ ಸಂಸದರ ಸಭೆ ಕರೆಯಲಾಗಿದೆ. ಸಂಸತ್ತಿನ ಮಳೆಗಾಲದ ಅಧಿವೇಶನದ ಹಿನ್ನೆಲೆಯಲ್ಲಿ ರಾಜ್ಯ ಸಂಸದರ ಸಭೆಯನ್ನು ಕರೆದಿರುವ ಮುಖ್ಯಮಂತ್ರಿ ಕಾವೇರಿ ನದಿ ನೀರು ನಿರ್ವಹಣಾ ಸಮಿತಿ ರಚನೆ, ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಮಂಜೂರಾಗಬೇಕಿರುವ ಯೋಜನೆಗಳು ಹಾಗೂ ಬಿಡುಗಡೆಯಾಗಬೇಕಿದ್ದ ಅನುದಾನದ ಬಗ್ಗೆ ಸಮಾಲೋಚನೆ ನಡೆಸಲಿದ್ದಾರೆ.
ರಾಜ್ಯ ಪರವಾಗಿ ಲೋಕಸಭೆ ಹಾಗೂ ರಾಜ್ಯ ಸಭೆ ಅಧಿವೇಶನದಲ್ಲಿ ದನಿ ಎತ್ತುವಂತೆ ಸಂಸದರಲ್ಲಿ ಮನವಿ ಮಾಡಲಿದ್ದಾರೆ. ರಾಜ್ಯಕ್ಕೆ ಸಂಬಂಧಿಸಿದ ವಿಚಾರಗಳಲ್ಲಿ ಒಗ್ಗಟ್ಟಿನಿಂದ ಚರ್ಚೆ ನಡೆಸುವಂತೆಯೂ ಮುಖ್ಯಮಂತ್ರಿ ಮನವಿ ಮಾಡಲಿದ್ದಾರೆ.
ನಾಳೆ ಬೆಳಗ್ಗೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ದೆಹಲಿಗೆ ತೆರಳಿರುವ ಮುಖ್ಯಮಂತ್ರಿ ಕರ್ನಾಟಕ ಭವನದಲ್ಲಿ ವಾಸ್ತವ್ಯ ಹೂಡಲಿದ್ದಾರೆ.
ಜು.18ರಂದು ಮಧ್ಯಾಹ್ನ ಕೇಂದ್ರ ಹಣಕಾಸು , ಕಲ್ಲಿದ್ದಲು ಹಾಗೂ ರೈಲ್ವೆ ಸಚಿವರನ್ನು ಭೇಟಿ ಮಾಡುವ ಮುಖ್ಯಮಂತ್ರಿರಾಜ್ಯಕ್ಕೆ ಸಂಬಂಧಿಸಿದ ಯೋಜನೆಗಳು ಹಾಗೂ ಅನುದಾನ ಬಿಡುಗಡೆಗೆ ಸಂಬಂಧಿಸಿದಂತೆ ಮಾತುಕತೆ ನಡೆಸಲಿದ್ದಾರೆ.
ಜು.19ರ ಬೆಳಗ್ಗೆ ದೆಹಲಿಯಿಂದ ಬೆಂಗಳೂರಿಗೆ ವಾಪಸ್ಸಾಗುವ ಕಾರ್ಯಕ್ರಮವಿದೆ ಎಂದು ಮೂಲಗಳು ತಿಳಿಸಿವೆ.