ಮಾಸ್ಕೋ, ಜು.16-ಫಿಫಾ ವಿಶ್ವಕಪ್ ಫುಟ್ಬಾಲ್ ಪಂದ್ಯಾವಳಿಯ ರೋಚಕ ಫೈನಲ್‍ನಲ್ಲಿ ಫ್ರಾನ್ಸ್ ವಿರುದ್ಧ ವೀರೋಚಿತ ಸೋಲು ಕಂಡ ಕ್ರೊವೇಷ್ಯಾ ಈಗ ಪರಾಭವದ ಆತ್ಮಾವಲೋಕನ ಮಾಡಿಕೊಳ್ಳುತ್ತಿದೆ. ಲಭಿಸಿದ ಅವಕಾಶಗಳನ್ನು ನಾವು ಹಾಳು ಮಾಡಿಕೊಂಡೆವು, ಮತ್ತೆ ಇಂಥ ಚಾನ್ಸ್ ಲಭಿಸದೇ ಇರಬಹುದು ಎಂದು ತಂಡದ ನಾಯಕ ಲುಕಾ ಮೊಡ್ರಿಕ್ ವಿಷಾದದಿಂದ ನುಡಿದಿದ್ದಾರೆ.
ರನ್ನರ್-ಅಪ್ ಆದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಶ್ವಕಪ್ ಗೆಲ್ಲುವುದಕ್ಕೆ ನಾವು ತುಂಬಾ ಹತ್ತಿರದಲ್ಲಿದ್ದೇವು. ಆದರೆ ಅಂತಿಮ ಕ್ಷಣದಲ್ಲಿ ದೊರೆತ ಅವಕಾಶಗಳನ್ನು ನಾವು ಕಳೆದುಕೊಂಡೆವು ಎಂದು ಪ್ರತಿಕ್ರಿಯಿಸಿದ್ದಾರೆ.
1998ರಲ್ಲಿ ಕ್ರೊವೇಷ್ಯಾ ಮೊದಲ ಬಾರಿ ಫಿಫಾ ವಿಶ್ವಕಪ್ ಫುಟ್ಬಾಲ್ ಟೂರ್ನಿ ಪ್ರವೇಶಿಸಿದಾಗ ಅತ್ಯುತ್ತಮ ಪ್ರದರ್ಶನ ತೋರಿ ಸೆಮಿ ಫೈನಲ್‍ವರೆಗೂ ತಲುಪಿತ್ತು. ಉಪಾಂತ್ಯದಲ್ಲಿ ಫ್ರಾನ್ಸ್ ವಿರುದ್ಧ ವೀರೋಚಿತ ಸೋಲು ಕಂಡಿತ್ತು. 20 ವರ್ಷಗಳ ಹಿಂದಿನ ಆ ಪಂದ್ಯದಲ್ಲಿ ಫ್ರಾನ್ಸ್ ಚೊಚ್ಚಲ ವಿಶ್ವಕಪ್ ಗೆದ್ದುಕೊಂಡಿತ್ತು.
ಎರಡು ದಶಕಗಳ ಬಳಿಕ ಫೈನಲ್‍ನಲ್ಲಿ ಮೊದಲ ಬಾರಿಗೆ ಕ್ರೊವೇಷ್ಯಾ ಮತ್ತು ಫ್ರಾನ್ಸ್ ಮುಖಾಮುಖಿಯಾದವು. ಅಂತಿಮ ಕದನದಲ್ಲಿ ಫ್ರಾನ್ಸ್ ವಿರುದ್ಧ ಸೇಡು ತೀರಿಸಿಕೊಳ್ಳಲು ಕ್ರೊವೇಷ್ಯಾ ಉತ್ತಮ ಅವಕಾಶಗಳಿತ್ತು. ಆದರೆ 4-2 ಗೋಲುಗಳಿಂದ ಪರಾಭವಗೊಂಡ ಕ್ರೊವೇಷ್ಯಾ ರನ್ನರ್-ಅಪ್ ಆಗಿ ಐತಿಹಾಸಿಕ ಸಾಧನೆ ಮಾಡಿದೆ.
ಟೂರ್ನಿಯಲ್ಲಿ ಅತ್ಯುತ್ತಮ ಪ್ರದರ್ಶನ ತೋರಿದ ಲುಕಾ ಮೊಡ್ರಿಕ್ ಅವರಿಗೆ ಪ್ರತಿಷ್ಠಿತ ಅಡಿಡಾಸ್ ಗೋಲ್ಡನ್ ಬಾಲ್ ಪ್ರಶಸ್ತಿ ನೀಡಿ ಗೌರವಿಸಲಾಯಿತು.