ಜುಲೈ18ರ ನಂತರ ಸಂಪುಟ ವಿಸ್ತರಣೆ ಸಾಧ್ಯತೆ: ಮಂತ್ರಿಗಿರಿಗಾಗಿ ಲಾಬಿ ಆರಂಭ

ಬೆಂಗಳೂರು: ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ಮತ್ತು ಸಚಿವ ಸ್ಥಾನಕ್ಕಾಗಿ ಲಾಬಿ ಆರಂಭವಾಗಿದೆ. ಬಜೆಟ್ ಅಧಿವೇಶನದ ನಂತರ ನಿಗಮ-ಮಂಡಳಿ ನೇಮಕಾತಿ ಮಾಡಲಾಗುತ್ತದೆ ಎಂದು ಎರಡು ಪಕ್ಷಗಳ ಮುಖಂಡರು ತಿಳಿಸಿದ್ದರು, ಈ ಹಿನ್ನೆಲೆಯಲ್ಲಿ ಜುಲೈ 18 ರಂದು ರಾಜ್ಯ ಕಾಂಗ್ರೆಸ್ ನಾಯಕರು ದೆಹಲಿಗೆ ತೆರಳಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಲಿದ್ದಾರೆ.
ಜುಲೈ 18 ರಂದು ಕಾವೇರಿ ವಿವಾದ ಸಂಬಂಧ ಸಂಸದರ ಸಭೆಯಿದ್ದು ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಜಲ ಸಂಪನ್ಮೂಲ ಸಚಿವ ಡಿ,ಕೆ ಶಿವಕುಮಾರ್ ಮತ್ತು ನಾನು ದೆಹಲಿಗೆ ತೆರಳಿ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡುವುದಾಗಿ ಡಿಸಿಎಂ ಪರಮೇಶ್ವರ್ ತಿಳಿಸಿದ್ದಾರೆ.
34 ಸಚಿವ ಸ್ಥಾನಗಳಲ್ಲಿ ಮುಖ್ಯಮಂತ್ರಿ ಕುಮಾರ ಸ್ವಾಮಿ ಸೇರಿದಂತೆ ಈಗಾಗಲೇ ಒಟ್ಟು 27 ಮಂದಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ, ಸಮ್ಮಿಶ್ರ ಸರ್ಕಾರದ ಹಂಚಿಕೆ ಪ್ರಮಾಣದಂತೆ ಕಾಂಗ್ರೆಸ್ ನ ಆರು ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ, ಈ ಭಾರಿ ವಿಸ್ತರಣೆಯಲ್ಲಿ ಉತ್ತರ ಕರ್ನಾಟಕ ಭಾಗಕ್ಕೆ ಆದ್ಯತೆ ಸಿಗಲಿದೆ ಎಂದು ಭರವಸೆ ಇಡಲಾಗಿದೆ ಎಂದು ಕಾಂಗ್ರೆಸ್ ಮುಖಂಡರೊಬ್ಬರು ತಿಳಿಸಿದ್ದಾರೆ.
ಉತ್ತರ ಕರ್ನಾಟಕದ ಪ್ರಮುಖ ನಾಯಕರುಗಳಾದ ಎಂ ಬಿ ಪಾಟೀಲ್, ಎಚ್.ಕೆ ಪಾಟೀಲ್, ಸಿ ಎಸ್ ಶಿವಳ್ಳಿ, ಪಿ,ಟಿ ಪರಮೇಶ್ವರ್ ನಾಯಕ್, ಅವರು ಪ್ರಬಲ ಆಕಾಂಕ್ಷಿಗಳಾಗಿದ್ದಾರೆ, ಇನ್ನು ರಾಮಲಿಂಗಾ ರೆಡ್ಜಿ ಮತ್ತು ರೋಷನ್ ಬೇಗ್ ಅವರನ್ನು ಸೇರಿಸಿಕೊಳ್ಳುವ ಸಾಧ್ಯತೆ ಕಡಿಮೆ ಇದೆ.
ಜುಲೈ ತಿಂಗಳ ಅಂತ್ಯದಲ್ಲಿ ನಿಗಮ-ಮಂಡಳಿ ವಿಸ್ತರಣೆ ನಡೆಯಲಿದ್ದು, ಕಾಂಗ್ರೆಸ್ ಅಸಮಾಧಾನಗೊಂಡ ಶಾಸಕರನ್ನು ಸಮಾಧಾನ ಪಡಿಸಲು ನಿಗಮ-ಮಂಡಳಿಗೆ ಅಧ್ಯಕ್ಷರನ್ನಾಗಿ ನೇಮಿಸಲು ನಿರ್ಧರಿಸಲಾಗಿದೆ, ಸಂಪುಟ ವಿಸ್ತರಣೆಗೂ ಮುನ್ನವೇ ನಿಗಮ ಮಂಡಳಿ ನೇಮಕಾತಿ ಮಾಡಲಾಗುತ್ತದೆ ಎಂದು ಹೇಳಲಾಗುತ್ತಿದೆ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಮತ್ತು ಈಶ್ವರ ಖಂಡ್ರೆ ಅವರಿಗೆ ನಿಗಮ- ಮಂಡಳಿ ನೇಮಕಾತಿ ದೊಡ್ಡ ಸವಾಲಾಗಲಿದೆ.
ಸಚಿವ ಸ್ಥಾನಗಳ ಹಂಚಿಕೆಯಂತೆ ಸಮ್ಮಿಶ್ರ ಸರ್ಕಾರದ ದೋಸ್ತಿಗಳ ಮಧ್ಯೆ ನಿಗಮ -ಮಂಡಳಿಗಳ ಹಂಚಿಕೆಯಾಗಿದೆ

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ