ಮಾಸ್ಕೊ: ಸರಿಯಾಗಿ ಒಂದು ತಿಂಗಳು, ಒಂದು ದಿನದ ಬಳಿಕ ಫಿಫಾ ವಿಶ್ವಕಪ್ ಫುಟ್‌ಬಾಲ್ ಪಂದ್ಯಾವಳಿ ಕ್ಲೈಮ್ಯಾಕ್ಸ್ ಹಂತಕ್ಕೆ ಬಂದಿದೆ. ಬಹುತೇಕ ಮಂದಿಯ ಲೆಕ್ಕಾಚಾರಗಳನ್ನೆಲ್ಲ ಸಂಪೂರ್ಣವಾಗಿ ತಲೆಕೆಳಗಾಗಿಸಿ ಮಾಜಿ ಚಾಂಪಿಯನ್ ಫ್ರಾನ್ಸ್ ಮತ್ತು ಇದೇ ಮೊದಲ ಸಲ ಫೈನಲ್ ಪ್ರವೇಶಿಸಿರುವ ಕೆಚ್ಚೆದೆಯ ಕ್ರೊವೇಶಿಯ ತಂಡಗಳು ಇಂದು ಮಾಸ್ಕೊದ “ಲಿಜ್ನಿಕಿ ಸ್ಟೇಡಿಯಂ’ನಲ್ಲಿ ಜಾಗತಿಕ ಫುಟ್‌ಬಾಲ್ ಕಿರೀಟಕ್ಕಾಗಿ ಪಣತೊಡಲಿವೆ.
ಫುಟ್‌ಬಾಲ್ ಪಂಡಿತರ ಪ್ರಕಾರ ಶಿಸ್ತು ಹಾಗೂ ಜವಾಬ್ದಾರಿಯುತ ಪ್ರದರ್ಶನ ನೀಡುತ್ತಿರುವ ಫ್ರಾನ್ಸ್ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡ. ಎಲ್ಲರ ನಿರೀಕ್ಷೆಗಳನ್ನು ಬುಡಮೇಲು ಮಾಡಿರುವ ಕ್ರೊವೇಶಿಯ “ಅಂಡರ್ ಡಾಗ್ಸ್’. ಆದರೆ ಕೊನೆಯಲ್ಲಿ ಏನೂ ಸಂಭವಿಸಬಹುದು. ಏಕೆಂದರೆ “ಫಿಫಾ 2018′ ಸಾಗಿ ಬಂದ ಹಾದಿಯೇ ಹಾಗಿದೆ… ಅದು ಅಚ್ಚರಿಗಳಲ್ಲೇ ಅಚ್ಚರಿ! ಈ ಎರಡೂ ತಂಡಗಳ ಫೈನಲ್ ಪ್ರವೇಶ ಅನಿರೀಕ್ಷಿತ. ಎಲ್ಲರೂ ಬ್ರಝಿಲ್, ಆರ್ಜೆಂಟೀನಾ, ಜರ್ಮನಿ, ಇಂಗ್ಲೆಂಡ್ ತಂಡಗಳ ಮೇಲೆ ಹೆಚ್ಚಿನ ನಿರೀಕ್ಷೆ ಇರಿಸಿದ್ದರು. ಮೆಸ್ಸಿ, ಕ್ರಿಸ್ಟಿಯಾನೊ ರೊನಾಲ್ಡೊ, ನೇಯ್ಮರ್, ಹ್ಯಾರಿ ಕೇನ್ ಹೆಸರನ್ನು ಜಪಿಸುತ್ತಿದ್ದರು. ಆದರೆ ಈ ತಂಡಗಳ ಜತೆಗೆ ಸ್ಟಾರ್ ಆಟಗಾರರೆಲ್ಲ ಮೂಲೆ ಗುಂಪಾದರು. ಜಾಗತಿಕ ಫುಟ್‌ಬಾಲ್‌ನಲ್ಲಿ ನೂತನ ಪೀಳಿಗೆಯ ಆಟಗಾರರ ದೊಡ್ಡ ಪಡೆಯೇ ಹುಟ್ಟಿಕೊಂಡಿತು. ಎಂಬಪೆ, ಮೊಡ್ರಿಕ್, ವಿದ, ಪೆರಿಸಿಕ್, ಮ್ಯಾಂಝುಕಿಕ್, ಉಮಿಟಿ, ಗ್ರೀಝ್ಮನ್, ಲಾರಿಸ್ ಅವರೆಲ್ಲ ಸಾಧನೆಯಿಂದ ಸುದ್ದಿಯಾದರು. ಇವರೇ ನಾಳಿನ ಹೀರೋಗಳಾಗಿ ಮೆರೆಯುವುದರಲ್ಲಿ ಅನುಮಾನವಿಲ್ಲ.
ಹಾಗೆಯೇ ಸ್ಟಾರ್ ತಂಡಗಳನ್ನು ಹೊಂದಿಲ್ಲದ ಅಪರೂಪದ ಫೈನಲ್ ಎಂಬ ಹೆಗ್ಗಳಿಕೆಯೂ ಈ ಪಂದ್ಯಕ್ಕಿದೆ. 2010ರಲ್ಲಿ ಸ್ಪೇನ್-ಹಾಲೆಂಡ್ ಫೈನಲ್ ಬಳಿಕ ಇಂಥದೊಂದು ಚಮತ್ಕಾರ ನಡೆಯುತ್ತಿರುವುದು ಇದೇ ಮೊದಲು. ಇಲ್ಲವಾದರೆ ಇಲ್ಲಿ ಬ್ರಝಿಲ್, ಜರ್ಮನಿ, ಇಟಲಿ ಅಥವಾ ಆರ್ಜೆಂಟೀನಾಗಳಲ್ಲಿ ಒಂದಾದರೂ ತಂಡ ಹಾಜರಿರುತ್ತಿತ್ತು.