ಲಕ್ನೋ: ನಗರಗಳ ದೈನಂದಿನ ಚಟುವಟಿಕೆಗಳಲ್ಲಿ ಹೊಸ ಬದಲಾವಣೆಯನ್ನು ಉತ್ತರ ಪ್ರದೇಶ ಸರ್ಕಾರ ತರಲಿದೆ. ಯೋಗಿ ಆದಿತ್ಯಾನಾಥ್ ಸರ್ಕಾರ ರಾಜ್ಯದಲ್ಲಿ ಪ್ಲಾಸ್ಟಿಕ್ ಹಾಗೂ ಪಾಲಿಥಿನ್ ಬ್ಯಾಗ್ಗಳ ಬಳಕೆ ಮೇಲೆ ನಿಷೇಧಾಜ್ಞೆಯನ್ನು ಇಂದಿನಿಂದ ಜಾರಿಗೆ ತರಲಿದೆ.
ಮಹಾರಾಷ್ಟ್ರದ ಬಿಜೆಪಿ ಸರ್ಕಾರವೂ ಕೂಡ ಪ್ಲಾಸ್ಟಿಕ್ ನಿಷೇಧ ಕಾನೂನನ್ನು ಜಾರಿಗೆ ತರಲು ಯೋಜನೆ ನಡೆಸಿದೆ. ಈ ಕಾನೂನು ಇಂದಿನಿಂದ ಕಾರ್ಯರೂಪಕ್ಕೆ ಬರುವುದಾಗಿ ಮಹಾರಾಷ್ಟ್ರ ಮುಖ್ಯ ಕಾರ್ಯದರ್ಶಿ ಡಾ. ಅನೂಪ್ ಚಂದ್ರ ಪಾಂಡೆ ಸ್ಪಷ್ಟಪಡಿಸಿದ್ದಾರೆ.
ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯಾನಾಥ್ ಪ್ಲಾಸ್ಟಿಕ್ ನಿಷೇಧ ಮಾಡುವ ಕುರಿತು ಮೊದಲೇ ರಾಜ್ಯದ ಜನರಿಗೆ ತಿಳಿಸಿ, ತಮ್ಮ ಸರ್ಕಾರಕ್ಕೆ ಸಹಕರಿಸುವಂತೆ ಮನವಿ ಮಾಡಿಕೊಂಡಿದ್ದರು. ಪರಿಸರವನ್ನು ಕಾಪಾಡಲು, ಪ್ಲಾಸ್ಟಿಕ್ ಮುಕ್ತ ರಾಜ್ಯವನ್ನಾಗಿಸಲು ಈ ದೊಡ್ಡ ನಿರ್ಧಾರವನ್ನು ಕೈಗೊಳ್ಳುತ್ತಿದ್ದೇವೆ ಎಂದು ಜುಲೈ 6ರಂದು ನಿಷೇಧಾಜ್ಞೆ ಕುರಿತು ಘೋಷಿಸುವ ಸಂದರ್ಭದಲ್ಲಿ ತಿಳಿಸಿದ್ದರು.
ರಾಜ್ಯ ಸರ್ಕಾರವು ಪ್ಲಾಸ್ಟಿಕ್ ನಿಷೇಧಾಜ್ಞೆ ಕಾನೂನು ಬಾಹಿರವಾಗಿಸಲು ಶಾಸನವನ್ನು ರೂಪಿಸಲಿದೆ. ಈ ಕಾನೂನನ್ನು ಉಲ್ಲಂಘಿಸಿದವರ ಮೇಲೆ 10,000 ರೂ.ಗಳಿಂದ ಸುಮಾರು 1 ಲಕ್ಷ ರೂ.ಗಳಷ್ಟು ದಂಡವನ್ನು ವಿಧಿಸಲಾಗುತ್ತದೆ ಎಂದು ಮುಖ್ಯಮಂತ್ರಿ ಸಚಿವಾಲಯದ ಹಿರಿಯ ಅಧಿಕಾರಿ ತಿಳಿಸಿದ್ದಾರೆ.
ಸರ್ಕಾರವು ನಿಷೇಧಾಜ್ಞೆಯನ್ನು ಹಂತ ಹಂತವಾಗಿ ಕಾರ್ಯರೂಪಕ್ಕೆ ತರಲು ಯೋಚಿಸಿದೆ. ಇಂದಿನಿಂದ ಪಾಲಿಥಿನ್ ಚೀಲಗಳ ಬಳಕೆ ನಿಷೇಧಿಸಲಿದೆ. ನಂತರ ಆಗಸ್ಟ್ 1 ರಿಂದ ಪ್ಲಾಸ್ಟಿಕ್ ಹಾಗೂ ಥರ್ಮಾಕೋಲ್ ಕಪ್ಪುಗಳು, ಲೋಟ, ಪ್ಲೇಟ್ ಇತ್ಯಾದಿಗಳನ್ನು ನಿಷೇಧಿಸಲು ಮುಂದಾಗಿದೆ ಎಂದು ಹಿರಿಯ ಅಧಿಕಾರಿ ತಿಳಿಸಿದರು.