ನವದೆಹಲಿ, ಜು.15-ದೇಶದ ವಿವಿಧೆಡೆ ಭುಗಿಲೆದ್ದ ಕೋಮುಗಲಭೆ ಹಾಗೂ ಹತ್ಯೆ ಪ್ರಕರಣಗಳು ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಪ್ರತಿಧ್ವನಿಸಲಿದ್ದು, ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳಲು ಎಡ ಪಕ್ಷಗಳು ಸಜ್ಜಾಗಿವೆ. ಜು.18 ಬುಧವಾರದಿಂದ ಸಂಸತ್ತು ಮುಂಗಾರು ಅಧಿವೇಶನ ಆರಂಭವಾಗಲಿದ್ದು, ದೇಶದಲ್ಲಿ ಅನೇಕ ಜನರನ್ನು ಬಲಿತೆಗೆದುಕೊಂಡು ಕೋಮುಗಲಭೆ ಮತ್ತು ಹತ್ಯೆ ಪ್ರಕರಣಗಳ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರಿಂದ ಪ್ರತ್ಯುತ್ತರಕ್ಕಾಗಿ ಸಿಪಿಐ(ಎಂ) ಮತ್ತು ಸಿಪಿಐ ಪಕ್ಷಗಳು ಆಗ್ರಹಿಸಲಿವೆ.
ಸರ್ಕಾರದ ವೈಫಲ್ಯಗಳನ್ನು ತರಾಟೆಗೆ ತೆಗೆದುಕೊಳ್ಳಲು ನಾವು ಕಾರ್ಯತಂತ್ರ ರೂಪಿಸಿದ್ದೇವೆ. ಸಂಸತ್ತಿನ ಉಭಯ ಸದನಗಳಲ್ಲಿ ನಾವು ಈ ವಿಷಯಗಳನ್ನು ಪ್ರಮುಖವಾಗಿ ಪ್ರಸ್ತಾಪಿಸಿ ಸರ್ಕಾರದಿಂದ ಪ್ರತ್ಯುತ್ತರಕ್ಕಾಗಿ ಒತ್ತಾಯಿಸುತ್ತೇವೆ ಎಂದು ಸಿಪಿಐ(ಎಂ) ಲೋಕಸಭಾ ಸದಸ್ಯ ಮಹಮದ್ ಸಲೀಂ ಹೇಳಿದ್ದಾರೆ.
ಕೇಂದ್ರ ಸರ್ಕಾರ ಒಡೆದು ಆಳುವ ನೀತಿಯನ್ನು ಅನುಸರಿಸುತ್ತಿದೆ. ಬಿಜೆಪಿ-ಆರ್‍ಎಸ್‍ಎಸ್ ರಾಜಕೀಯದಿಂದ ದೇಶದಲ್ಲಿ ಕೋಮು ಹಿಂಸಾಚಾರ ಹೆಚ್ಚಾಗುತ್ತಿದೆ. ಈ ಬಗ್ಗೆ ಸಂಸತ್ತಿನಲ್ಲಿ ನಾವು ಚರ್ಚೆಗೆ ಆಗ್ರಹಿಸುತ್ತೇವೆ ಎಂದು ಅವರು ಹೇಳಿದರು. ದೇಶದಲ್ಲಿ ದಲಿತರು ಮತ್ತು ಅಲ್ಪಸಂಖ್ಯಾತರ ಮೇಲೆ ಹಿಂಸಾಚಾರ ಹೆಚ್ಚಾಗಲು ಆರ್‍ಎಸ್‍ಎಸ್-ಬಿಜೆಪಿ ಹಾಗೂ ಇತರ ಬಲಪಂಥೀಯ ರಾಜಕೀಯ ಪಕ್ಷಗಳು ಕಾರಣ ಎಂದು ಆರೋಪಿಸಿದ ಸಿಪಿಐ ರಾಜ್ಯಸಭಾ ಸದಸ್ಯ ಡಿ. ರಾಜಾ, ದಲಿತರ ಮತ್ತು ಅಲ್ಪಸಂಖ್ಯಾತರ ಕಗ್ಗೊಲೆಗಳು, ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ಕಾಯ್ದೆ ದುರ್ಬಲಗೊಳಿಸಿರುವ ವಿಷಯಗಳನ್ನು ಮುಖ್ಯವಾಗಿ ಪ್ರಸ್ತಾಪಿಸಲಾಗುವುದು ಎಂದು ಹೇಳಿದ್ದಾರೆ.