ತುಮಕೂರು: ತುಮಕೂರಿನಲ್ಲಿರುವ ಹಳೆಯ ಹೆಚ್ ಎಂಟಿ ವಾಚ್ ಕಾರ್ಖಾನೆ 4ರ ಭೂಮಿ ಭಾರತೀಯ ಬಾಹ್ಯಾಕಾಶ ಅಂತರಿಕ್ಷ ಕೇಂದ್ರ ಇಸ್ರೋದ ಪಾಲಾಗಿದೆ.
ಕೇಂದ್ರ ಸಚಿವ ಸಂಪುಟ ಕಳೆದ ವರ್ಷ ಮಾರ್ಚ್ 31ರಂದು ಹೆಚ್ ಎಂಟಿ ಫ್ಯಾಕ್ಟರಿಯ ಜಾಗವನ್ನು ಇಸ್ರೋಗೆ ಮಾರಾಟ ಮಾಡಲು ಅನುಮೋದನೆ ನೀಡಿತ್ತು. ಇದೀಗ ಅಧಿಕೃತ ಪ್ರಕಟಣೆ ಹೊರಬಿದ್ದಿದೆ. ಇಸ್ರೊ ತನ್ನ ಕ್ಯಾಂಪಸ್ ನ್ನು ಅಭಿವೃದ್ಧಿಪಡಿಸುವ ಸಲುವಾಗಿ ಹೆಚ್ ಎಂಟಿ ಫ್ಯಾಕ್ಟರಿಯಿಂದ ಜಮೀನನ್ನು ಖರೀದಿಸಿದೆ ಎಂದು ಹೆಚ್ ಎಂಟಿ ಕಂಪೆನಿ ಕಾರ್ಯದರ್ಶಿ ಕಿಶೋರ್ ಕುಮಾರ್ ಎಸ್ ನಿನ್ನೆ ಬಿಎಸ್ ಇ ಮತ್ತು ಎನ್ ಎಸ್ಇ ಸ್ಟಾಕ್ ಎಕ್ಸ್ ಚೇಂಜ್ ಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.
ಹೆಚ್ ಎಂಟಿ ಜಾಗವನ್ನು ಕಳೆದ ತಿಂಗಳು 27ಕ್ಕೆ ಇಸ್ರೋ ಸಂಸ್ಥೆಗೆ ಮಾರಾಟ ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ. ಪೂರಕ ಘಟಕಗಳೊಂದಿಗೆ ವಿವಾದದ ನಂತರ ಉಳಿದಿದ್ದ 6.952 ಎಕರೆ ಭೂಮಿಯನ್ನು ಇಸ್ರೋಗೆ ಹಸ್ತಾಂತರಿಸಲಾಗಿದೆ ಎಂದು ಪ್ರಕಟಣೆಯಲ್ಲಿ ವಿವರಿಸಲಾಗಿದೆ.
ಹೊಸದಾಗಿ ಖರೀದಿಸಲಾಗಿರುವ ಭೂಮಿಯ ಭದ್ರತೆಯನ್ನು ನೋಡಿಕೊಳ್ಳಲು ಭದ್ರತಾ ಸೇವೆ ಒದಗಿಸಲು ಭಾರತದ ರಾಷ್ಟ್ರಪತಿಗಳ ಪರವಾಗಿ ಇಸ್ರೋ ಟೆಂಡರ್ ಆಹ್ವಾನಿಸಿದೆ. ಇಂದು ನಡೆಯಲಿರುವ ಸಮಾರಂಭದಲ್ಲಿ ಇಸ್ರೋ ಔಪಚಾರಿಕವಾಗಿ ಹೆಚ್ ಎಂಟಿ ಫ್ಯಾಕ್ಟರಿಯಿಂದ ಭೂಮಿ ಖರೀದಿಸಿದ್ದರ ಬಗ್ಗೆ ಘೋಷಣೆ ಮಾಡಲಿದೆ. ಇಸ್ರೋ ಅಧ್ಯಕ್ಷರ ಅನುಪಸ್ಥಿತಿಯಲ್ಲಿ ಸಂಸ್ಥೆಯ ಜಂಟಿ ಕಾರ್ಯದರ್ಶಿ ಎಸ್ ಕುಮಾರಸ್ವಾಮಿ ಇಂದು ನಡೆಯಲಿರುವ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಲೋಕಸಭಾ ಸದಸ್ಯ ಎಸ್ ಪಿ ಮುದ್ದಹನುಮೇ ಗೌಡ ತಿಳಿಸಿದ್ದಾರೆ.
1978ರಲ್ಲಿ ಸ್ಥಾಪನೆಗೊಂಡ ಹೆಚ್ ಎಂಟಿ ಫ್ಯಾಕ್ಟರಿಯಲ್ಲಿ 1600ಕ್ಕೂ ಹೆಚ್ಚು ಜನ ಉದ್ಯೋಗಿಗಳಿದ್ದರು. ಇದೀಗ ಇಸ್ರೊ ಸಂಸ್ಥೆ ಭೂಮಿ ಖರೀದಿಸಿ ಅಲ್ಲಿ ಕ್ಯಾಂಪಸ್ ನ್ನು ಸ್ಥಾಪಿಸಿ ಹಳೆಯ ಗತವೈಭವವನ್ನು ಮರುಸ್ಥಾಪಿಸುವ ಪ್ರಯತ್ನದಲ್ಲಿದೆ. ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮಿಗಳು ಕೂಡ ಇಸ್ರೋಗೆ ಸ್ವಯಂಪ್ರೇರಿತವಾಗಿ ಸರ್ಕಾರಿ ದರದಲ್ಲಿ ಬೆಂಗಳೂರಿನಿಂದ 65 ಕಿಲೋ ಮೀಟರ್ ದೂರದಲ್ಲಿರುವ ಬೆಂಗಳೂರು-ಹೊನ್ನಾವರ ರಾಷ್ಟ್ರೀಯ ಹೆದ್ದಾರಿ 206ರಲ್ಲಿ 40 ಎಕರೆ ಭೂಮಿಯನ್ನು ನೀಡಿದ್ದಾರೆ.
ಮೂಲಗಳು ಹೇಳುವ ಪ್ರಕಾರ ಬೆಂಗಳೂರಿನ ಇಂದಿರಾನಗರದಲ್ಲಿರುವ ಲಿಕ್ವಿಡ್ ಪ್ರೊಪಲ್ಷನ್ ಸಿಸ್ಟಮ್ ಕೇಂದ್ರವನ್ನು ಇಸ್ರೊ ತುಮಕೂರಿಗೆ ವರ್ಗಾಯಿಸುವ ಸಾಧ್ಯತೆಯಿದೆ