ಬೆಂಗಳೂರು, ಜು.14-ರೈತರ ಸಂಪೂರ್ಣ ಸಾಲ ಮನ್ನಾ ಮಾಡದೆ ಮಾತಿಗೆ ತಪ್ಪಿದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ನಡವಳಿಕೆ ಖಂಡಿಸಿ ಇದೇ 21 ರಂದು 39ನೇ ರೈತ ಹುತಾತ್ಮ ದಿನಾಚರಣೆಯಂದು ರಾಷ್ಟ್ರೀಯ ಹೆದ್ದಾರಿ ಬಂದ್ ನಡೆಸಲು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನಿರ್ಧರಿಸಿದೆ.
ರೈತರ, ಕೃಷಿ ಕಾರ್ಮಿಕರ, ಸ್ವಸಹಾಯ ಸಂಘಗಳ ಸಂಪೂರ್ಣ ಸಾಲ ಮನ್ನಾ ಮಾಡುವಂತೆ ಒತ್ತಾಯಿಸಿ ಹಾಗೂ ಕೇಂದ್ರ ಮತ್ತು ರಾಜ್ಯ ಸರ್ಕಾರ ಗ್ರಾಮೀಣ ಪ್ರದೇಶದ ಪುನಶ್ಚೇತನಕ್ಕಾಗಿ ವಿಶೇಷ ಪ್ಯಾಕೇಜ್ ನೀಡುವಂತೆ ಆಗ್ರಹಿಸಿ ಅಂದು ಬೆಳಗ್ಗೆ 11 ಗಂಟೆಯಿಂದ ಸಂಜೆ 5ಗಂಟೆಯವರೆಗೆ ಹೊಸಪೇಟೆ ಬಳಿ ಇರುವ ಕೊಪ್ಪಳ ಜಿಲ್ಲಾ ವ್ಯಾಪ್ತಿಗೆ ಬರುವ ಇಳಕಲ್ ಸರ್ಕಲ್ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಹುತಾತ್ಮ ದಿನಾಚರಣೆ ಆಚರಿಸಿ ಬಂದ್ ನಡೆಸಲಾಗುವುದು. ಈ ಚಳವಳಿಯಲ್ಲಿ ಸುಮಾರು 10 ಸಾವಿರಕ್ಕೂ ಹೆಚ್ಚು ರೈತರು ಪಾಲ್ಗೊಳ್ಳಲಿದ್ದಾರೆ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಬಡಗಲಪುರ ನಾಗೇಂದ್ರ ತಿಳಿಸಿದ್ದಾರೆ.
ರೈತರ ಬೆಳೆ ಸಾಲವನ್ನೇ ಒಂದೇ ಕಂತಿನಲ್ಲಿ ಮನ್ನಾ ಮಾಡಬೇಕು. ಮತ್ತು ಎರಡನೇ ಹಂತದಲ್ಲಿ ರೈತರು ಕೃಷಿ ಚಟುವಟಿಕೆಗಳಿಗೆ ಪಡೆದಿರುವ ಎಲ್ಲಾ ರೀತಿಯ ಸಾಲಗಳನ್ನು ಹಾಗೂ ಕೃಷಿ ಕಾರ್ಮಿಕರು ಪಡೆದಿರುವ ಹಸು, ಎಮ್ಮೆ, ಎತ್ತಿನ ಗಾಡಿ ಸಾಲ ಮತ್ತು ಮಹಿಳಾ ಸ್ವಸಹಾಯ ಸಂಘಗಳು ಪಡೆದಿರುವ ಸಾಲ ಮನ್ನಾ ಮಾಡುವಂತೆ ರಸ್ತೆ ಬಂದ್ ಮಾಡಿ ಒತ್ತಾಯಿಸಲಾಗುವುದು.
ಈ ಒತ್ತಾಯಕ್ಕೆ ಸ್ಪಂದಿಸದಿದ್ದಲ್ಲಿ ಜೆಡಿಎಸ್‍ನ ಎಲ್ಲಾ 37 ಶಾಸಕರ ಮನೆ ಮುಂದೆ ಧರಣಿ ಹಾಗೂ ಮುಖ್ಯಮಂತ್ರಿ ಭಾಗವಹಿಸುವ ಕಾರ್ಯಕ್ರಮಗಳಲ್ಲಿ ಕಪ್ಪು ಬಾವುಟ ಪ್ರದರ್ಶಿಸಿ ಪ್ರತಿಭಟನೆ ನಡೆಸಲಾಗುವುದು ಎಂದು ಹೇಳಿದರು.