
ಬೆಂಗಳೂರು, ಜು.14- ಇತ್ತೀಚೆಗೆ ಆತ್ಮಹತ್ಯೆ ಮಾಡಿಕೊಂಡ ಪೌರ ಕಾರ್ಮಿಕ ಸುಬ್ರಹ್ಮಣ್ಯ ಅವರ ಕುಟುಂಬದ ಸದಸ್ಯರೊಬ್ಬರಿಗೆ ಉದ್ಯೋಗ ನೀಡಬೇಕು ಎಂದು ಸಫಾಯಿ ಕರ್ಮಚಾರಿ ಕಾವಲು ಸಮಿತಿಯು ಬಿಬಿಎಂಪಿಯನ್ನು ಆಗ್ರಹಿಸಿದೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಮಿತಿಯ ರಾಜ್ಯ ಸಂಚಾಲಕ ಕೆ.ಬಿ.ಓಬಳೇಶ್, ಬಿಬಿಎಂಪಿ ಅಧಿಕಾರಿಗಳ ನಿರ್ಲಕ್ಷ್ಯದಿಂದ ಸುಬ್ರಹ್ಮಣ್ಯ ಆತ್ಮಹತ್ಯೆ ಮಾಡಿಕೊಳ್ಳುವಂತಾಯಿತು. ಸರಿಯಾದ ಸಮಯಕ್ಕೆ ವೇತನ ಕೊಟ್ಟಿದ್ದರೆ ಈ ಆತ್ಮಹತ್ಯೆ ಸಂಭವಿಸುತ್ತಿರಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು
ಸುಬ್ರಹ್ಮಣ್ಯ ಅವರೇ ಮನೆಗೆ ಆಧಾರವಾಗಿದ್ದರು. ಅವರ ನಿಧನದಿಂದ ಕುಟುಂಬ ಅನಾಥವಾಗಿದೆ. ತಕ್ಷಣ 25 ಲಕ್ಷ ರೂ. ಪರಿಹಾರ ನೀಡಬೇಕು ಮತ್ತು ಕುಟುಂಬ ಸದಸ್ಯರೊಬ್ಬರಿಗೆ ಉದ್ಯೋಗ ನೀಡಬೇಕೆಂದು ಅವರು ಆಗ್ರಹಿಸಿದರು.
ಗುತ್ತಿಗೆ ಪೌರಕಾರ್ಮಿಕರ ನೇರ ನೇಮಕಾತಿಗೆ 45 ವರ್ಷಗಳು ನಿಗದಿಪಡಿಸಿರುವುದು ಅಸಮಂಜಸವಾಗಿದೆ. ಹಾಗಾಗಿ ಕನಿಷ್ಠ 50 ವರ್ಷ ನಿಗದಿ ಮಾಡಬೇಕು. 50 ವರ್ಷಕ್ಕಿಂತ ಹೆಚ್ಚಿಗೆ ವಯಸ್ಸಾಗಿರುವ ಕಾರ್ಮಿಕರಿಗೆ ಸೂಕ್ತ ಪರಿಹಾರ ಕೊಡಬೇಕೆಂದು ಕಾರ್ಮಿಕರಿಗೆ ಸೂಕ್ತ ಪರಿಹಾರ ಕೊಡಬೇಕೆಂದು ಓಬಳೇಶ್ ಒತ್ತಾಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಹಲವು ಸಂಘಟನೆಯ ಮುಖಂಡರು ಉಪಸ್ಥಿತರಿದ್ದರು.