ನವದೆಹಲಿ,ಜೂ.13- ಈ ಬಾರಿಯ ಗಣರಾಜ್ಯೋತ್ಸವಕ್ಕೆ ಮುಖ್ಯ ಅತಿಥಿಯಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಭಾರತ ಆಹ್ವಾನಿಸಿದೆ. ಜನವರಿ 26ರಂದು ನವದೆಹಲಿಯಲ್ಲಿ ನಡೆಯಲಿರುವ ಗಣರಾಜ್ಯೋತ್ಸವಕ್ಕೆ ಮುಖ್ಯ ಅತಿಥಿಯಾಗಿ ನೀವು ಆಗಮಿಸಬೇಕೆಂದು ಭಾರತದ ವಿದೇಶಾಂಗ ವ್ಯವಹಾರಗಳ ಇಲಾಖೆ ಅಮೆರಿಕ ಅಧ್ಯಕ್ಷರಿಗೆ ಆಹ್ವಾನ ನೀಡಿದೆ. ಆದರೆ ಭಾರತದ ಈ ಆಹ್ವಾನವನ್ನು ಅಮೆರಿಕ ಅಧಿಕೃತವಾಗಿ ಒಪ್ಪಿಕೊಂಡಿಲ್ಲ. ಒಂದು ವೇಳೆ ಪ್ರಧಾನಿ ನರೇಂದ್ರ ಮೋದಿ ಅವರ ಆಹ್ವಾನವನ್ನು ಒಪ್ಪಿ ಮುಖ್ಯ ಅತಿಥಿಯಾಗಿ ಆಗಮಿಸಿದರೆ ಭಾರತದ ರಾಜತಾಂತ್ರಿಕ ಅಧಿಕಾರಿಗಳಿಗೆ ಮತ್ತೊಂದು ಕಿರೀಟ ಸಿಗಲಿದೆ.
ಈ ಹಿಂದೆ ಗಣರಾಜ್ಯೋತ್ಸವದ ಮುಖ್ಯ ಅತಿಥಿಗಳಾಗಿ ಅಮೆರಿಕದ ಆಗಿನ ಅಧ್ಯಕ್ಷ ಬರಾಕ್ ಒಬಾಮ ಆಗಮಿಸಿದ್ದರು. ಈಗ ಡೋನಾಲ್ಡ್ ಟ್ರಂಪ್ ಅವರಿಗೆ ಆಹ್ವಾನ ನೀಡುವ ಮೂಲಕ ಎರಡು ರಾಷ್ಟ್ರಗಳ ನಡುವೆ ಉಂಟಾಗಿರುವ ಅಸಮಾಧಾನವನ್ನು ಹೋಗಲಾಡಿಸಲು ಇದು ಸಹಕಾರಿಯಾಗಲಿದೆ ಎಂದು ನಿರೀಕ್ಷಿಸಲಾಗಿದೆ.
ಭಾರತದ ಆಹ್ವಾನ ಒಪ್ಪಿ ಟ್ರಂಪ್ ಗಣರಾಜ್ಯೋತ್ಸವದ ಮುಖ್ಯ ಅತಿಥಿಯಾಗಿ ನವದೆಹಲಿಗೆ ಆಗಮಿಸಲಿದ್ದಾರೆ ಎಂದು ರಾಜತಾಂತ್ರಿಕ ಮೂಲಗಳು ಖಚಿತಪಡಿಸಿವೆ.
ಪ್ರಧಾನಿ ನರೇಂದ್ರ ಮೋದಿ ಅವರ ಪ್ರಭಾವ, ಭಾರತದ ಬಗ್ಗೆ ಅಮೆರಿಕ ಹೊಂದಿರುವ ಸಕಾರಾತ್ಮಕ ಧೋರಣೆ, ಉಭಯ ರಾಷ್ಟ್ರಗಳ ನಡುವೆ ವ್ಯಾಪಾರ, ವಾಣಿಜ್ಯ ವಹಿವಾಟು ಸೇರಿದಂತೆ ಹತ್ತು ಹಲವು ವಿಷಯಗಳ ಬಗ್ಗೆ ಚರ್ಚಿಸಲು ಇದೊಂದು ವೇದಿಕೆಯಾಗಲಿದೆ ಎಂದು ನಿರೀಕ್ಷಿಸಲಾಗಿದೆ.
ಇತ್ತೀಚೆಗೆ ಭಾರತ ರಷ್ಯಾ ಹಾಗೂ ಫ್ರಾನ್ಸ್ ಜೊತೆ ಕೆಲವು ಪ್ರಮುಖ ಒಪ್ಪಂದಗಳಿಗೆ ಸಹಿ ಹಾಕಿದ್ದರಿಂದ ಅಮೆರಿಕದ ನಡುವಿನ ಸಂಬಂಧಕ್ಕೆ ತುಸು ಹಿನ್ನಡೆಯಾಗಿತ್ತು.
ಈ ಹಿಂದೆ ಬರಾಕ್ ಒಬಾಮ ಇದ್ದ ಸಂಬಂಧಕ್ಕೂ ತದನಂತರ ಟ್ರಂಪ್ ಅಧಿಕಾರ ವಹಿಸಿಕೊಂಡ ಬಳಿಕ ಉಭಯ ರಾಷ್ಟ್ರಗಳ ನಡುವಿನ ಸಂಬಂಧ ತೀವ್ರ ಹಳಸಿಕೊಳ್ಳದಿದ್ದರೂ ಆರಕ್ಕೇರಲಿಲ್ಲ, ಮೂರಕ್ಕಿಳಿಯಲಿಲ್ಲ ಎಂಬಂತಿತ್ತು. ಚೀನಾ ವಿಷಯದಲ್ಲಿ ಅಮೆರಿಕ ಬಿಗಿ ನಿಲುವು ತೆಗೆದುಕೊಂಡರೆ ಭಾರತ ಯಥಾಸ್ಥಿತಿಯನ್ನೇ ಕಾಪಾಡಿಕೊಂಡಿತ್ತು. ಅಲ್ಲದೆ ರಷ್ಯಾದ ಜೊತೆ ದೊಡ್ಡಣ್ಣ ಸಂಬಂಧ ಹಳಸಿಕೊಂಡರೂ ಭಾರತ ಮಾತ್ರ ಆ ರಾಷ್ಟ್ರದ ಜೊತೆ ತನ್ನ ವ್ಯಾಪಾರ ವಹಿವಾಟನ್ನು ಮುಂದುವರೆಸಿತ್ತು.ಇದು ಸಹಜವಾಗಿ ಅಮೆರಿಕದ ಕಣ್ಣು ಕೆಂಪಾಗುವಂತೆ ಮಾಡಿತ್ತು.
ಈಗ ರಾಜ್ಯೋತ್ಸವ ಕಾರ್ಯಕ್ರಮಕ್ಕೆ ದೊಡ್ಡಣ್ಣನ್ನು ವಿಶೇಷ ಅತಿಥಿಯಾಗಿ ಆಹ್ವಾನಿಸುವ ಮೂಲಕ ಉಭಯ ರಾಷ್ಟ್ರಗಳ ಸಂಬಂಧವನ್ನು ಗಟ್ಟಿಗೊಳಿಸಲು ಎರಡೂ ರಾಷ್ಟ್ರಗಳ ರಾಜತಾಂತ್ರಿಕ ಅಧಿಕಾರಿಗಳು ಮುಂದಾಗಿದ್ದಾರೆ.