
ಬೆಂಗಳೂರು,ಜು.13-ಇಸ್ರೇಲ್ ಮಾದರಿ ಕೃಷಿ ಪದ್ಧತಿಯ ಅನುಷ್ಠಾನದ ಅಗತ್ಯದ ಬಗ್ಗೆ ಕೃಷಿ ತಜ್ಞ ಎಂ.ಎಸ್.ಸ್ವಾಮಿನಾಥನ್ ಅವರು ಸಲಹೆ ನೀಡಿದ್ದಾರೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು.
ಸರ್ಕಾರಕ್ಕೆ ಯಾರೇ ಉತ್ತಮ ಸಲಹೆ ಕೊಟ್ಟರೂ ಅದನ್ನು ಸ್ವೀಕರಿಸಲಾಗುವುದು. ಇಸ್ರೇಲ್ ಕೃಷಿ ಪದ್ದತಿಗೆ ಸಂಬಂಧಿಸಿದಂತೆ ಕೃಷಿ ಇಲಾಖೆ ಅಧಿಕಾರಿಗಳ ಸಭೆಯನ್ನು ಮುಂದಿನ ಹತ್ತು ದಿನಗಳಲ್ಲಿ ಕರೆಯಲಾಗುವುದು. ಹವಾಮಾನಕ್ಕೆ ಅನುಗುಣವಾದ ಕೃಷಿ ಪದ್ಧತಿಯನ್ನು ಜಾರಿ ಮಾಡಲು ಚಿಂತಿಸಿದ್ದೇವೆ ಎಂದರು.
ಕೃಷಿ ತಜ್ಞ ಸ್ವಾಮಿನಾಥ್ ಅವರೊಂದಿಗೆ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೃಷಿ ಕ್ಷೇತ್ರದಲ್ಲಿ ಸ್ವಾಮಿನಾಥನ್ ಅವರ ಅನುಭವ ಅಪಾರವಾಗಿದೆ. ಸರ್ಕಾರಕ್ಕೆ ಸಾಕಷ್ಟು ಸಲಹೆಗಳನ್ನು ಕೂಡ ನೀಡಿದ್ದಾರೆ. ಕೃಷಿ ವಲಯಕ್ಕೆ ಸಂಬಂಧಿಸಿದಂತೆ ಹಲವು ವಿಚಾರಗಳ ಬಗ್ಗೆ ಚರ್ಚೆ ಮಾಡಲಾಗಿದೆ.
ಕೃಷಿ ಪದ್ದತಿ ಮಾರ್ಪಾಡು ಮಾಡುವುದು, ನೀರು ಬಳಕೆ ಸೇರಿದಂತೆ ಹಲವು ವಿಚಾರಗಳನ್ನು ಚರ್ಚಿಸಲಾಯಿತು. ಸ್ವಾಮಿನಾಥನ್ ನೀಡಿರುವ ಹಲವು ಸಲಹೆಗಳನ್ನು ಅನುಷ್ಠಾನಕ್ಕೆ ತರಲು ಸಿದ್ದವಿದ್ದೇವೆ ಎಂದು ಹೇಳಿದರು.
ಆಧುನಿಕ ಕೃಷಿ ಪದ್ಧತಿಗೆ ನೀಡುವಂತಹ ಸಲಹೆಗಳನ್ನು ಸ್ವಾಗತಿಸಲಾಗುವುದು. ಕೇವಲ ರೈತರ ಸಾಲ ಮನ್ನಾ ಮಾಡುವುದು ಮಾತ್ರವಲ್ಲ, ರೈತರನ್ನು ಆರ್ಥಿಕವಾಗಿ ಸದೃಢಗೊಳಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಮುಖ್ಯಮಂತ್ರಿ ತಿಳಿಸಿದರು.