ಬೆಂಗಳೂರು: ಬಜೆಟ್ನಲ್ಲಿ ಎರಡು ಲಕ್ಷದವರೆಗೂ ಸುಸ್ತಿ ಸಾಲ ಮನ್ನಾ ಮಾಡಿದ್ದ ಮುಖ್ಯಮಂತ್ರಿ ಕುಮಾರಸ್ವಾಮಿ, ಇಂದು ಹೊಸದಾಗಿ ಒಂದು ಲಕ್ಷದವರೆಗಿನ ಚಾಲ್ತಿ ಸಾಲವನ್ನು ಮನ್ನಾ ಮಾಡುವುದಾಗಿ ಘೋಷಿಸಿದ್ದಾರೆ.
ಅಷ್ಟೇ ಅಲ್ಲದೆ ಅನ್ನಭಾಗ್ಯದಲ್ಲಿ ಈ ಹಿಂದಿನಂತೆ ಏಳು ಕೆ.ಜಿ. ಅಕ್ಕಿ ನೀಡುವ ಯೋಜನೆಯನ್ನು ಮುಂದುವರಿಸುವುದಾಗಿ ಘೋಷಿಸಿದ್ದಾರೆ. ಉಳಿದಂತೆ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ನೀಡಲು ನಿರಾಕರಿಸಿದ್ದು, ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರ ವಿರೋಧದ ನಡುವೆಯೂ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಹೆಚ್ಚುವರಿ ತೆರಿಗೆಯನ್ನು ಮುಂದುವ??ಸಿದ್ದಾರೆ. ಅಲ್ಪಸಂಖ್ಯಾತರ ಕಡಗಣೆಯ ಮಾಡಲಾಗಿದೆ ಎಂಬ ಆರೋಪದಿಂದ ಮುಕ್ತರಾಗಲು ೫೦೦ ಕೋಟಿ ರೂಪಾಯಿ ಅನುದಾನ ನೀಡುವುದಾಗಿ ಹೇಳಿದ್ದಾರೆ.
ತೆರಿಗೆ ಹೊರೆ ಇಳಿಸದ ಎಚ್ಡಿಕೆ:
ಹಲವು ಟೀಕೆ, ಆಕ್ಷೇಪಗಳ ನಡುವೆಯೂ ಜುಲೈ ೫ರಂದು ಸಮ್ಮಿಶ್ರ ಸರ್ಕಾರದ ಹೊಸ ಬಜೆಟ್ನ್ನು ಹಣಕಾಸು ಹೊಂದಿರುವ ಮುಖ್ಯಮಂತ್ರಿ ಕುಮಾರಸ್ವಾಮಿ ವಿಧಾನಸಭೆಯಲ್ಲಿ ಮಂಡಿಸಿದ್ದರು. ಕಳೆದ ಮೂರು ದಿನಗಳಿಂದ ಬಜೆಟ್ ಮೇಲೆ ಆಡಳಿತ ಮತ್ತು ಪ್ರತಿಪಕ್ಷದ ಹಲವಾರು ಮಂದಿ ಶಾಸಕರು ಚರ್ಚೆ ನಡೆಸಿದ್ದರು. ಚರ್ಚೆ ಮಾಡಿದ ಬಹುತೇಕರು ರೈತರ ಸಾಲ ಮನ್ನಾ, ಪೆಟ್ರೋಲ್, ಡೀಸೆಲ್ ಮೇಲೆ ಶೇ.೨ರಷ್ಟು ಮಾರಾಟ ತೆರಿಗೆ, ಅಬಕಾರಿ ಹಾಗೂ ವಿದ್ಯುತ್ ಮೇಲಿನ ಶುಲ್ಕ ಹೆಚ್ಚಳವನ್ನು ವಿರೋಧಿಸಿದ್ದರು. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಖುದ್ದಾಗಿ ತೆರಿಗೆ ಹೆಚ್ಚಳ ವಿರೋಧಿಸಿ ಕುಮಾರಸ್ವಾಮಿ ಅವರಿಗೆ ಪತ್ರ ಬರೆದಿದ್ದರು.
ಇಂದು ಬಜೆಟ್ ಮೇಲೆ ನಡೆದ ಚರ್ಚೆಗೆ ಉತ್ತರ ನೀಡಿದ ಕುಮಾರಸ್ವಾಮಿ ತೆರಿಗೆ ಹೆಚ್ಚಳವನ್ನು ಹಿಂಪಡೆಯುತ್ತಾರೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಯಾವುದೇ ಒತ್ತಡಕ್ಕೆ ಮಣಿಯದ ಕುಮಾರಸ್ವಾಮಿ, ಶೇ.೩೨ರಿಂದ ಶೇ.೩೪ರಷ್ಟು ಹೆಚ್ಚಿಸಿರುವ ಪೆಟ್ರೋಲ್, ಡೀಸೆಲ್ ಮೇಲಿನ ತೆರಿಗೆಯನ್ನು ಮುಂದುವರೆಸಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಇಂಧನದ ಬೆಲೆ ಮತ್ತಷ್ಟು ಏರಿಕೆಯಾಗಲಿದೆ.
ಪೆಟ್ರೋಲ್, ಡಿಸೇಲ್ ಮೇಲಿನ ತೆರಿಗೆ, ವಿದ್ಯುತ್ ಹಾಗೂ ಮದ್ಯದ ದರ ಹೆಚ್ಚಳವನ್ನು ಸಮರ್ಥಿಸಿಕೊಂಡ ಕುಮಾರಸ್ವಾಮಿ, ಬಿಜೆಪಿ ಆಡಳಿತರುವ ಮಹಾರಾಷ್ಟ್ರದಲ್ಲಿ ಪ್ರತಿ ಲೀಟರ್ ಪೆಟ್ರೋಲ್ ೮೩.೧೨ ರೂ., ಮಧ್ಯಪ್ರದೇಶ ೮೧.೧೪, ಬಿಹಾರ ೮೧.೦೪, ಆಂಧ್ರಪ್ರದೇಶ ೮೦ ರೂ., ಕೇರಳ ೭೮ ರೂ., ತಮಿಳುನಾಡು ೭೮.೦೪ ರೂ, ರಾಜಸ್ಥಾನ ೭೮.೨೭ ರೂ.ಗಳಷ್ಟಿದೆ. ನಮ್ಮ ರಾಜ್ಯದಲ್ಲಿ ಈಗ ತೆರಿಗೆ ಹೆಚ್ಚಳ ನಂತರ ೭೭.೯೭ ಆಗಿರಲಿದೆ ಎಂದರು.
ಜಿಎಸ್ಟಿ ಜಾರಿಯಾದ ನಂತರ ತೆರಿಗೆ ಸಂಗ್ರಹ ಮಾಡಲು ರಾಜ್ಯ ಸರಕಾರಕ್ಕೆ ಇತಿಮಿತಿಗಳು ತುಂಬಾ ಕಡಿಮೆ ಇದೆ. ಜಗದೀಶ್ ಶೆಟ್ಟರ್ ಮುಖ್ಯಮಂತ್ರಿಯಾಗಿದ್ದಾಗ ರೈತರ ಸಾಲ ಮನ್ನಾ ಮಾಡಲು ವ್ಯಾಟ್ ಅನ್ನು ಶೇ.೦೫ರಷ್ಟು ಹೆಚ್ಚಳ ಮಾಡಲಿಲ್ಲವೇ ? ಈಗ ಯಾಕೆ ಟೀಕೆ ಮಾಡಲಾಗುತ್ತಿದೆ ಎಂದು ಪ್ರಶ್ನಿಸಿದರು.
ಚಾಲ್ತಿ ಸಾಲಮನ್ನಾ:
ಸಹಕಾರಿ ಸಂಘಗಳಲ್ಲಿ ರೈತರು ಪಡೆದಿರುವ ಒಂದು ಲಕ್ಷದ ವರೆಗಿನ ಚಾಲ್ತಿ ಸಾಲ ಮನ್ನಾಮಾಡಲಾಗುವುದು ಎಂದು ಕುಮಾರಸ್ವಾಮಿ ಘೋಷಿಸಿದ್ದಾರೆ. ಬಜೆಟ್ನಲ್ಲಿ ಸುಸ್ತಿ ಸಾಲ ಮನ್ನಾ ಮಾಡಲಾಗಿತ್ತು. ರೈತರು ಸಹಕಾರಿ ಬ್ಯಾಂಕುಗಳಲ್ಲಿ ಪಡೆದಿರುವ ಒಂದು ಲಕ್ಷ ರೂ.ವರೆಗಿನ ಚಾಲ್ತಿ ಸಾಲವನ್ನು ಹಾಗೂ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಪಡೆದಿರುವ ಎರಡು ಲಕ್ಷ ರೂ.ವರೆಗಿನ ಸುಸ್ತಿ ಸಾಲವನ್ನು ಮನ್ನಾ ಮಾಡಲಾಗುವುದು.
ಇದರಿಂದ ಸರ್ಕಾರದ ಬೊಕ್ಕಸಕ್ಕೆ ೧೦,೭೦೦ ಕೋಟಿ ರೂ.ಹೊರೆಯಲಾಗಲಿದೆ. ನಮ್ಮ ಸಾಲ ಮನ್ನಾ ಯೋಜನೆಯಿಂದಾಗಿ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿನ ರೈತರ ೨೯,೨೭೯ ಕೋಟಿ ರೂ.ಸಾಲ ಮನ್ನಾ ಆಗಲಿದೆ. ಪ್ರತಿ ವರ್ಷ ರಾಷ್ಟ್ರೀಕೃತ ಬ್ಯಾಂಕುಗಳಿಗೆ ೬೫೦೦ ಕೋಟಿ ರೂ.ಪಾವತಿ ಮಾಡಲಾಗುತ್ತದೆ. ಈ ಕುರಿತಂತೆ ಸಮಗ್ರವಾಗಿ ಚರ್ಚೆ ಮಾಡಿzವೆ. ಈ ಸರಕಾರ ಐದು ವರ್ಷಗಳ ಕಾಲ ಮುಂದುವ??ಯಲಿದೆ, ಸಾಲ ಮನ್ನಾದ ಹೊರೆಯನ್ನು ನಾವೇ ತೀರಿಸುತ್ತೇವೆ. ಪ್ರಾಣ ಒತ್ತೆಯಿಟ್ಟಾದ್ದರೂ ರೈತರನ್ನು ಋಣಮುಕ್ತರನ್ನಾಗಿ ಮಾಡಲಾಗುವುದು.
ಈ ಬಜೆಟ್ ಕೇವಲ ಕೆಲವು ಜಿಲ್ಲೆಗಳಿಗೆ ಸೀಮಿತವಾದ ಬಜೆಟ್ ಅಲ್ಲ. ಸಮಗ್ರ ಕರ್ನಾಟಕದ ಅಭಿವೃದ್ಧಿ ನಮ್ಮ ಆದ್ಯತೆ. ಸಾಲ ಮನ್ನಾ ಯೋಜನೆಯಿಂದಾಗಿ ಬೆಳಗಾವಿ ಜಿಲ್ಲೆಗೆ ೨೬೭೦ ಕೋಟಿ ರೂ, ಬಾಗಲಕೋಟೆಗೆ ೧೮೨೦ ಕೋಟಿ ರೂ, ವಿಜಯಪುರ ೧೫೧೦ ಕೋಟಿ ರೂ, ಧಾರವಾಡಕ್ಕೆ ೧೦೨೬ ಕೋಟಿ ರೂ, ಹಾವೇರಿಗೆ ೧೦೩೬ ಕೋಟಿ ರೂ., ಗದಗ ೭೨೨ ಕೋಟಿ ರೂ, ಉತ್ತರ ಕನ್ನಡ ೪೦೭ ಕೋಟಿ ರೂ, ದಾವಣಗೆರೆ ೧೨೧೨ ಕೋಟಿ ರೂ, ತುಮಕೂರು ೧೧೮೫ ಕೋಟಿ ರೂ.ಗಳ ಪ್ರಯೋಜನವಾಗಲಿದೆ ಎಂದು ಅವರು ಹೇಳಿದರು.
ಶಿವಮೊಗ್ಗ ೯೮೮ ಕೋಟಿ ರೂ, ಚಿತ್ರದುರ್ಗ ೯೧೮ ಕೋಟಿ ರೂ, ಬೆಂಗಳೂರು ಗ್ರಾಮಾಂತರ ೭೩೧ ಕೋಟಿ ರೂ, ರಾಮನಗರ ೬೩೦ ಕೋಟಿ ರೂ.ಗಳ ಪ್ರಯೋಜನವಾಗಲಿದೆ. ಇದರಡಿಯಲ್ಲಿ ರಾಜ್ಯದ ದಕ್ಷಿಣ ಭಾಗದ ಜಿಲ್ಲೆಗಳಿಗಿಂತ ಉತ್ತರ ಕರ್ನಾಟಕದ ಜಿಲ್ಲೆಗಳಿಗೆ ಹೆಚ್ಚಿನ ಲಾಭ ಆಗಲಿದೆ ಎಂದು ಅವರು ಅಂಕಿ ಅಂಶಗಳ ಸಮೇತ ಸಮರ್ಥಿಸಿಕೊಂಡರು.
ಆರ್ಥಿಕ ಶಿಸ್ತನ್ನು ಕಾಪಾಡಿಕೊಂಡು ರೈತರ ಸಾಲ ಮನ್ನಾ ಮಾಡುವ ಸವಾಲನ್ನು ನಾನು ಸ್ವೀಕರಿಸಿzನೆ. ಇದಕ್ಕಾಗಿ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಎಲ್ಲರೂ ನನಗೆ ಸಹಕಾರ ನೀಡಿದ್ದಾರೆ. ಸಾಲ ಮನ್ನಾ ಮಾಡಿ ದೊಡ್ಡ ಮಟ್ಟಿಗೆ ಟೀಕೆಗೆ ಗುರಿಯಾದ ಹಣಕಾಸು ಸಚಿವ ನಾನು. ಮಾಧ್ಯಮಗಳು ಬಜೆಟ್ ಬಗ್ಗೆ ವ್ಯಕ್ತಪಡಿಸಿರುವ ಅಭಿಪ್ರಾಯಗಳನ್ನು ಸೂಕ್ಷ್ಮವಾಗಿ ಗಮನಿಸಿzನೆ. ಕೆಲವರು ಅಪ್ಪ-ಮಕ್ಕಳ ಬಜೆಟ್, ಅಣ್ಣ-ತಮ್ಮ ಬಜೆಟ್ ಎಂದು ಟೀಕಿಸಿದ್ದಾರೆ ಎಂದು ಕುಮಾರಸ್ವಾಮಿ ಯಡಿಯೂರಪ್ಪ ಅವರನ್ನು ಚುಚ್ಚಿದರು.
೩೪ ಸಾವಿರ ಕೋಟಿ ರೂ.ಸಾಲ ಮನ್ನಾ ಎಂದು ಘೋಷಿಸಿ ರೈತರಿಗೆ ಟೋಪಿ ಹಾಕಲು ಹೊರಟ್ಟಿದ್ದಾರೆ ಎಂದು ಟೀಕಿಸಿದ್ದಾರೆ. ಬ್ಯಾಂಕುಗಳ ಮುಖ್ಯಸ್ಥರೊಂದಿಗೆ ನಡೆದ ಮೂರು ಸಭೆಗಳ ಬಳಿಕವೇ ನಾನು ಸಾಲ ಮನ್ನಾ ಮಾಡುವ ಘೋಷಣೆ ಮಾಡಿರುವುದು ಎಂದು ಅವರು ಹೇಳಿದರು.
ಸಾಲ ಮನ್ನಾ ಮಾಡುವುದರ ಜೊತೆಗೆ ಒಂದು ತಿಂಗಳಲ್ಲಿ ರೈತರಿಗೆ ಋಣಮುಕ್ತ ಪತ್ರ ಹಾಗೂ ಹೊಸ ಸಾಲ ಪಡೆಯಲು ಅವಕಾಶ ಕಲ್ಪಿಸಲು ಎಲ್ಲ ಪ್ರಯತ್ನಗಳನ್ನು ಮಾಡಲಾಗಿದೆ. ಈ ಸಂಬಂಧ ಬ್ಯಾಂಕುಗಳ ಮುಖ್ಯಸ್ಥರೊಂದಿಗೆ ಸಮಾಲೋಚನೆ ನಡೆಸಲಾಗಿದೆ ಎಂದರು.
ಅನ್ನಭಾಗ್ಯಕ್ಕೆ ಮುಕ್ತಿ:
ಕರ್ನಾಟಕವನ್ನು ಹಸಿವು ಮುಕ್ತಗೊಳಿಸಬೇಕು ಎಂಬ ಸಿದ್ದರಾಮಯ್ಯ ಅವರ ಮಹತ್ವಾಕಾಂಕ್ಷಿ ಯೋಜನೆ ಅನ್ನಭಾಗ್ಯದಲ್ಲಿ ನೀಡುತ್ತಿದ್ದ ಅಕ್ಕಿಯಲ್ಲಿ ಎರಡು ಕೆಜಿಯನ್ನು ಕುಮಾರ ಸ್ವಾಮಿ ತಮ್ಮ ಬಜೆಟ್ನಲ್ಲಿ ಕಡಿರ ಮಾಡಿದ್ದಕ್ಕೆ. ಸಿದ್ದರಾಮಯ್ಯ ಬಹಿರಂಗವಾಗಿಯೇ ಅಸಮಧಾನ ವ್ಯಕ್ತಪಡಿಸಿದ್ದರು. ಇಂದು ಸದನದಲ್ಲಿ ಉತ್ತರ ನೀಡಿದ ಕುಮಾರಸ್ವಾಮಿ, ಅಕ್ಕಿಯನ್ನು ಮತ್ತೆ ೭ ಕೆಜಿಗೆ ಏರಿಸಲಾಗುವುದು ಎಂದರು. ೫ ಕೆ.ಜಿ.ಅಕ್ಕಿಯಿಂದ ೭ ಕೆ.ಜಿ.ಗೆ ಹೆಚ್ಚಿಸಲು ಎರಡೂವರೆ ಸಾವಿರ ಕೋಟಿ ರೂ ಹೊರೆಯಾಗಲಿದೆ ಎಂದು ಹೇಳಿದರು.
ಹುಸಿಯಾದ ಉಚಿತ ಬಸ್ಪಾಸ್ ನಿರೀಕ್ಷೆ:
ವಿದ್ಯಾರ್ಥಿಗಳಿಗೆ ಉಚಿತ ಪಾಸ್ ನೀಡಲಾಗುತ್ತದೆ ಎಂಬ ನಿರೀಕ್ಷೆ ಹುಸಿಯಾಗಿದೆ. ಸಿದ್ದರಾಮಯ್ಯ ಕಳೆದ ಫೆಬ್ರವರಿಯಲ್ಲಿ ಮುಖ್ಯಮಂತ್ರಿಯಾಗಿ ಮಂಡಿಸಿದ್ದ ಬಜೆಟ್ನಲ್ಲಿ ಎಲ್ಲಾ ಜಾತಿಯ ವಿದ್ಯಾರ್ಥಿಗಳಿಗೆ ಉಚಿತ ಬಸ್ಪಾಸ್ ನೀಡುವುದಾಗಿ ಹೇಳಿದ್ದರು. ಅದಕ್ಕೆ ಸಾರಿಗೆ ಇಲಾಖೆ ವಿರೋಧ ವ್ಯಕ್ತ ಪಡಿಸಿತ್ತು. ಉಚಿತ ಬಸ್ಪಾಸ್ಗೆ ಸುಮಾರು ೭೦೦ ಕೋಟಿ ವೆಚ್ಚವಾಗಲಿದೆ ಅದನ್ನು ಸರ್ಕಾರ ಬರಿಸಿದರೆ ಪಾಸ್ ನೀಡಲು ಸಿದ್ಧ ಎಂದು ಹೇಳಿತ್ತು.
ಎಸ್ಸಿಎಸ್ಟಿ ವಿದ್ಯಾರ್ಥಿಗಳಿಗೆ ೨೦೦ ನಿರ್ವಹಣಾ ಶುಲ್ಕ ಮಾತ್ರ ಸಂಗ್ರಹಿಸಿ ಪಾಸ್ನ್ನು ಉಚಿತವಾಗಿ ನೀಡಲಾಗುತ್ತಿದೆ. ಇತರೆ ವರ್ಗದ ವಿದ್ಯಾರ್ಥಿಗಳಿಂದ ಶೇ.೨೫ರಷ್ಟು ಶುಲ್ಕ ವಸೂಲಿ ಮಾಡಲಾಗುತ್ತಿದೆ. ಉಳಿದ ಶೇ.೭೫ರಷ್ಟು ಶುಲ್ಕದಲ್ಲಿ ಸರ್ಕಾರ ಶೇ.೨೫ರಷ್ಟು ಭರಿಸುತ್ತಿದ್ದು, ಸಾರಿಗೆ ನಿಗಮಗಳು ಶೇ.೨೫ರಷ್ಟುನ್ನು ತುಂಬಿಕೊಡುತ್ತಿವೆ. ವಿದ್ಯಾರ್ಥಿಗಳಿಂದ ಪಡೆಯುತ್ತಿರುವ ಶೇ.೨೫ರಷ್ಟು ಶುಲ್ಕವನ್ನು ರದ್ದುಗೊಳಿಸಬೇಕು ಎಂಬ ಒತ್ತಾಯಕ್ಕೆ ಸಿಎಂ ಮನ್ನಣೆ ನೀಡಿಲ್ಲ. ಈಗಾಗಲೇ ಬಹುತೇಕ ಕಡೆ ವಿದ್ಯಾರ್ಥಿಗಳು ಬಸ್ ಪಾಸ್ಗಳನ್ನು ಖರೀದಿಸಿದ್ದಾರೆ. ಬಹುಶಃ ಸರ್ಕಾರ ಉಚಿತವಾಗಿ ಪಾಸ್ ನೀಡಲು ವಿದ್ಯಾರ್ಥಿಗಳು ಪಾವತಿಸಿರುವ ಹಣವನ್ನು ವಾಪಾಸ್ ನೀಡಲಿದೆ ಎಂಬ ನಿರೀಕ್ಷೆ ಉಸಿಯಾಗಿದೆ.
ಅಲ್ಪಸಂಖ್ಯಾತರನ್ನು ಕಡೆಗಣಿಸಿಲ್ಲ:
ರಾಜ್ಯ ಬಜೆಟ್ನಲ್ಲಿ ಅಲ್ಪಸಂಖ್ಯಾತರ ಸಮುದಾಯವನ್ನು ಕಡೆಗಣಿಸಲಾಗಿಲ್ಲ. ಸಿದ್ದರಾಮಯ್ಯನವರು ಈ ಹಿಂದೆ ಮಂಡಿಸಿರುವ ಬಜೆಟ್ನಲ್ಲಿ ಅಲ್ಪಸಂಖ್ಯಾತರಿಗಾಗಿ ಘೋಷಿಸಿರುವ ಕಾರ್ಯಕ್ರಮಗಳು, ಯೋಜನೆಗಳು ಮುಂದುವರೆಯಲಿವೆ. ಈ ಸರಕಾರವು ಅಲ್ಪಸಂಖ್ಯಾತರು ಸೇರಿದಂತೆ ಎಲ್ಲ ವರ್ಗಗಳ ಹಿತರಕ್ಷಣೆಗೆ ಬದ್ಧವಾಗಿದೆ. ಹಿಂದೆ ಬಜೆಟ್ನಲ್ಲಿ ಅಲ್ಪಸಂಖ್ಯಾತರ ಇಲಾಖೆಗೆ ೫೦೦ ಕೋಟಿ ಮೀಸಲಿಡಲಾಗಿದ್ದು ಅದನ್ನು ಮುಂದುವರೆಸಲಾಗುವುದು. ಅಂತೆಯೇ ಹಿಂದಿನ ಸರಕಾರದ ಎಲ್ಲ ಕಾರ್ಯಕ್ರಮಗಳನ್ನು ಮುಂದುವರೆಸಲಾಗುವುದು ಎಂದು ತಿಳಿಸಿದರು.
ಬಿಜೆಪಿ ಸಭಾತ್ಯಾಗ:
ಮುಖ್ಯಮಂತ್ರಿ ಭಾಷಣಕ್ಕೆ ಸ್ಪಷ್ಟಣೆ ಕೇಳಿದ ವಿರೋಧ ಪಕ್ಷದ ನಾಯಕ ಯಡಿಯೂರಪ್ಪ, ನಾಲ್ಕು ಕಂತುಗಳಲ್ಲಿ ಸಾಲ ಮನ್ನಾ, ಋಣಮುಕ್ತ ಪತ್ರ ನೀಡುವುದು, ಸ್ತ್ರೀಶಕ್ತಿ ಸಂಘಗಳು, ನೇಕಾರರ ಸಾಲ ಮನ್ನಾ ಸೇರಿದಂತೆ ಹಲವು ವಿಚಾರಗಳಲ್ಲಿ ಸ್ಪಷ್ಟನೆ ಕೇಳಿದರು.
ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ, ರೈತರ ಸಾಲ ಮನ್ನಾ ಮಾಡುವುದು ನಮ್ಮ ಬದ್ಧತೆ. ಜೀವ ಕೊಟ್ಟಾದರೂ ರೈತರ ಸಾಲ ಮನ್ನಾ ಮಾಡುತ್ತೇವೆ. ಇದಕ್ಕೆ ಅಗತ್ಯವಿರುವ ಎಲ್ಲ ಪೂರ್ವ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಆದುದರಿಂದ, ಈ ವಿಚಾರದಲ್ಲಿ ಯಾರೂ ಅನುಮಾನ ಪಡುವುದು ಬೇಡ ಎಂದರು.
ಮಹಾದಾಯಿ ಯೋಜನೆಗೆ ಸಂಬಂಧಿಸಿದಂತೆ ನ್ಯಾಯಾಧೀಕರಣ ಆಗಸ್ಟ್ನಲ್ಲಿ ತೀರ್ಪು ನೀಡಲಿದೆ. ತೀರ್ಪು ಬಂದ ಕೂಡಲೆ ಅಲ್ಲಿ ಸ್ಥಳೀಯವಾಗಿ ಕಾಮಗಾರಿಗಳನ್ನು ಪ್ರಾರಂಭಿಸಲಾಗುವುದು ಎಂದು ಹೇಳಿ ಬಜೆಟ್ಗೆ ಒಪ್ಪಿಗೆ ನೀಡುವಂತೆ ಮನವಿ ಮಾಡಿದರು.
ಮುಖ್ಯಮಂತ್ರಿಯ ಉತ್ತರಿಂದ ತೃಪ್ತರಾಗದ ಬಿಜೆಪಿ ಸದಸ್ಯರು, ಯಡಿಯೂರಪ್ಪ ನೇತೃತ್ವದಲ್ಲಿ ಸಭಾತ್ಯಾಗ ಮಾಡಿದರು. ಇದೇ ವೇಳೆ ಸ್ಪೀಕರ್ ರಮೇಶ್ಕುಮಾರ್, ೨೦೧೮ನೆ ಸಾಲಿನ ಧನ ವಿನಿಯೋಗ(ಸಂಖ್ಯೆ ೨) ವಿಧೇಯಕ, ರಾಜ್ಯ ಮೌಲ್ಯ ವರ್ಧಿತ ತೆರಿಗೆ(ತಿದ್ದುಪಡಿ) ವಿಧೇಯಕ ಹಾಗೂ ರಾಜ್ಯ ವಿದ್ಯುತ್ಚ್ಛಕ್ತಿ(ಬಳಕೆ ಅಥವಾ ಮಾರಾಟದ ಮೇಲೆ ತೆರಿಗೆ ನಿರ್ಧರಣೆ)(ತಿದ್ದುಪಡಿ) ವಿಧೇಯಕವನ್ನು ಮಂಡಿಸಲು ಅವಕಾಶ ಕಲ್ಪಿಸಿದರು. ಸದನವು ಈ ವಿಧೇಯಕಗಳಿಗೆ ಅನುಮೋದನೆ ನೀಡಿತು.