ಬೀಜಿಂಗ್, ಜು.13-ಚೀನಾದ ನೈರುತ್ಯ ಪ್ರಾಂತ್ಯದ ರಾಸಾಯನಿಕ ಘಟಕವೊಂದರಲ್ಲಿ ಭಾರೀ ಸ್ಫೋಟ ಸಂಭವಿಸಿ, 19 ಮಂದಿ ಮೃತಪಟ್ಟು, ಇತರ 12 ಜನ ತೀವ್ರ ಗಾಯಗೊಂಡಿದ್ದಾರೆ.
ಸಿಚುಅನ್ ಪ್ರಾಂತ್ಯದ ಕೈಗಾರಿಕಾ ಪ್ರದೇಶದಲ್ಲಿ ನಿನ್ನೆ ರಾತ್ರಿ ಈ ಸ್ಪೋಟ ಸಂಭವಿಸಿತು ಎಂದು ಅಧಿಕಾರಿಗಳು ತಿಳಿಸಿದ್ಧಾರೆ. ಈ ಸ್ಫೋಟ ದುರಂತದಲ್ಲಿ 19 ಮಂದಿ ಸಾವಿಗೀಡಾಗಿದ್ದಾರೆ. ಗಾಯಗೊಂಡ 12 ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರಲ್ಲಿ ಕೆಲವರ ಸ್ಥಿತಿ ಶೋಚನೀಯವಾಗಿದೆ.
ಹೆಂಗ್ಡಾ ಎಂಬ ರಾಸಾಯನಿಕ ತಯಾರಿಕಾ ಘಟಕದಲ್ಲಿ ಕಾಣಿಸಿಕೊಂಡ ಆಕಸ್ಮಿಕ ಬೆಂಕಿ ರಾಸಾಯನಿಕಗಳೊಂದಿಗೆ ಸಂಪರ್ಕವಾಗಿ ಭಾರೀ ಆಸ್ಪೋಟನೆಯಾಯಿತು. ಸ್ಫೋಟದ ತೀವ್ರತೆಗೆ ಘಟಕದ ಕಟ್ಟಡಕ್ಕೆ ಭಾರೀ ಹಾನಿಯಾಗಿದೆ. ಚೀನಾದಲ್ಲಿ ಇತ್ತೀಚಿನ ವರ್ಷಗಳಲ್ಲಿ ಕೈಗಾರಿಕಾ ದುರಂತಗಳು ಹೆಚ್ಚಾಗುತ್ತಿವೆ. ಕಳೆದ ನವೆಂಬರ್ನಲ್ಲಿ ಶಾಂಘೈನ ನಿಂಗ್ಬೋ ಪ್ರದೇಶದಲ್ಲಿ ಸೆಪ್ಟಿಕ್ ಟ್ಯಾಂಕೊಂದು ಸ್ಫೋಟಗೊಂಡು ಸಾವು-ನೋವು ಸಂಭವಿಸಿತ್ತು. 2015ರಲ್ಲಿ ಟಿಯಾನ್ಜಿನ್ ಬಂದರು ನಗರಿಯಲ್ಲಿ ಕಂಟೈನರ್ ಸಂಗ್ರಹ ಘಟಕದಲ್ಲಿ ರಾಸಾಯನಿಕ ಸ್ಫೋಟ ಸಂಭವಿಸಿ 166 ಮಂದಿ ಮೃತಪಟ್ಟಿದ್ದರು.