ಮಾದಕ ವಸ್ತು ಸರಬರಾಜು ವಿರುದ್ಧ ಗೂಂಡಾ ಕಾಯ್ದೆ – ಡಾ.ಜಿ.ಪರಮೇಶ್ವರ್

 

ಬೆಂಗಳೂರು, ಜು.13- ಮಾದಕ ವಸ್ತು ಸರಬರಾಜು, ಮಾರಾಟ ಮಾಡುವವರು ಹಾಗೂ ಕಿಂಗ್‍ಪಿನ್‍ಗಳ ವಿರುದ್ಧ ಗೂಂಡಾ ಕಾಯ್ದೆ ಪ್ರಯೋಗಿಸುವುದಾಗಿ ಗೃಹ ಸಚಿವರೂ ಆದ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಘೋಷಣೆ ಮಾಡಿದ್ದಾರೆ.
ವಿಧಾನಸಭೆಯಲ್ಲಿಂದು ಮಾದಕ ವಸ್ತುಗಳ ಬಗ್ಗೆ ಸುದೀರ್ಘ ಎರಡು ಗಂಟೆಗಳ ಕಾಲ ನಡೆದ ಚರ್ಚೆಗೆ ಉತ್ತರ ನೀಡಿದ ಅವರು, ಮಾದಕ ವಸ್ತುವಿನ ಚಟದಿಂದ ಯುವ ಸಮುದಾಯ ಹಾಳಾಗುತ್ತಿದೆ. ಇದು ಗಂಭೀರ ಸಮಸ್ಯೆ, ಇದರ ವಿರುದ್ಧ ಅಷ್ಟೇ ಗಂಭೀರ ಕ್ರಮಗಳನ್ನು ತೆಗೆದುಕೊಳ್ಳಲು ಸರ್ಕಾರ ಸಿದ್ಧ ಇದೆ ಎಂದು ಹೇಳಿದರು.
ಇದಕ್ಕೂ ಮುನ್ನ ಪ್ರತಿಪಕ್ಷದ ನಾಯಕರಾದ ಬಿ.ಎಸ್.ಯಡಿಯೂರಪ್ಪ, ಆರ್.ಅಶೋಕ್ ಅವರು ಮಾದಕ ವಸ್ತು ಮಾರಾಟಗಾರರು ಮತ್ತು ಸರಬರಾಜು ಮಾಡುವವರ ವಿರುದ್ಧ ಗೂಂಡಾ ಕಾಯ್ದೆ ಪ್ರಯೋಗಿಸುವಂತೆ ಒತ್ತಡ ಹೇರಿದರು.
ಇದಕ್ಕೆ ಸಹಮತ ವ್ಯಕ್ತಪಡಿಸಿದ ಪರಮೇಶ್ವರ್, ಅಗತ್ಯ ಇರುವ ಕಡೆ ಗೂಂಡಾ ಕಾಯ್ದೆ ಹಾಕಲು ಹಿಂದೆ ಸರಿಯುವುದಿಲ್ಲ. ಕಿಂಗ್‍ಪಿನ್‍ಗಳನ್ನು ಬಂಧಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.
ವೀಸಾ ಅವಧಿ ಮುಗಿದರೂ ರಾಜ್ಯದಲ್ಲೇ ನೆಲೆಯೂರಿರುವ ವಿದೇಶಿ ವಿದ್ಯಾರ್ಥಿಗಳನ್ನು ಅವರ ದೇಶಕ್ಕೆ ವಾಪಸ್ ಕಳುಹಿಸಲು ಕ್ರಮ ಕೈಗೊಳ್ಳಲಾಗುವುದು. ಈ ಮೊದಲು ನಾನು ಗೃಹ ಸಚಿವನಾಗಿದ್ದಾಗ 1460ಮಂದಿಯನ್ನು ಗುರುತಿಸಿ ವಾಪಸ್ ಕಳುಹಿಸಲು ಕ್ರಮ ಕೈಗೊಂಡಿದೆ. ಇದಕ್ಕೆ ನಾನು ಮತ್ತೆ ಗಮನಹರಿಸುತ್ತೇನೆ. ಎಲ್ಲಾ ಜಿಲ್ಲಾ ಪೆÇಲೀಸ್ ಮುಖ್ಯಾಧಿಕಾರಿಗಳು ಕಾಲೇಜಿಗೆ ತೆರಳಿ ವಿದೇಶಿ ವಿದ್ಯಾರ್ಥಿಗಳ ಮಾಹಿತಿ ಪಡೆದುಕೊಳ್ಳಬೇಕೆಂದು ಅವರು ಸೂಚನೆ ನೀಡಿದರು.
ಬೆಂಗಳೂರನ್ನು ಪಂಜಾಬಿನಂತೆ ಮಾದಕ ವ್ಯಸನ ತಾಣವಾಗಲು ಬಿಡುವುದಿಲ್ಲ. ಅತ್ಯಂತ ಕಠಿಣ ಕ್ರಮಗಳನ್ನು ಕೈಗೊಳ್ಳುತ್ತೇವೆ. ವಿದೇಶದಿಂದ ಬೆಂಗಳೂರಿಗೆ ಮಾದಕ ವಸ್ತುಗಳನ್ನು ಸರಬರಾಜು ಮಾಡುತ್ತಿರುವುದು ಒಂದು ದಂಧೆಯಾದರೆ, ಬೆಂಗಳೂರಿನಿಂದಲೇ ವಿದೇಶಕ್ಕೆ ಮಾದಕ ವಸ್ತುಗಳನ್ನು ಸರಬರಾಜು ಮಾಡುವ ಜಾಲ ಮತ್ತೊಂದಿದೆ. ಇತ್ತೀಚೆಗೆ ಅಬಕಾರಿ ಅಧಿಕಾರಿಗಳು ವಿಮಾನ ನಿಲ್ದಾಣ ಸುತ್ತಮುತ್ತ ಕೊಡಿಗೆಹಳ್ಳಿಯಲ್ಲಿ 5 ಕೋಟಿ ಮೌಲ್ಯದ ಮಾತ್ರೆಗಳನ್ನು ವಶಪಡಿಸಿಕೊಂಡಿದ್ದಾರೆ ಎಂದರು.
ಎಲ್ಲಾ ಪೆÇಲೀಸ್ ಠಾಣೆಗಳಲ್ಲೂ ಮಾದಕ ವಸ್ತು ನಿಯಂತ್ರಣಕ್ಕೆ ಪ್ರತ್ಯೇಕ ವಿಭಾಗ ಇದೆ. ಅವುಗಳನ್ನು ಚುರುಕುಗೊಳಿಸಲಾಗುವುದು. ಜರ್ಮನಿಯಲ್ಲಿ ಸಾಕಿಕೊಂಡಿರುವ ನಾಯಿಗಳು ಆರು ತಿಂಗಳ ಹಿಂದೆ ಮಾದಕ ವಸ್ತು ಸೇವಿಸಿದ್ದರೂ ಪತ್ತೆ ಹಚ್ಚುವ ಸಾಮಥ್ರ್ಯ ಹೊಂದಿವೆ. ನಮ್ಮಲ್ಲಿ ಇಂತಹ ವ್ಯವಸ್ಥೆ ಇಲ್ಲ ಎಂದು ಹೇಳಿದರು.
ಅಂತಹ ಶ್ವಾನಗಳನ್ನು ತರಿಸಿ ಎಂದು ಅರವಿಂದ ಲಿಂಬಾವಳಿ ಸಲಹೆ ನೀಡಿದಾಗ. ನಮ್ಮಲ್ಲಿರುವ ನಾಯಿಗಳಿಗೇ ತರಬೇತಿ ನೀಡಿದರೆ ಸಾಕು ಎಂದು ಪರಮೇಶ್ವರ್ ಹೇಳಿದರು.
ಇದಕ್ಕೂ ಮುನ್ನ ಬಿಜೆಪಿ ಶಾಸಕ ಕಳಕಪ್ಪ ಬಂಡಿ ಅವರು, ತಮ್ಮ ಪುತ್ರನೇ ಮಾದಕ ವಸ್ತು ಚಟದಿಂದ ಬಳಲಿದ್ದನ್ನು ಸದನದಲ್ಲಿ ವಿವರಿಸಿದರು.
ಸಚಿವರ ಉತ್ತರಕ್ಕೂ ಮೊದಲೂ ನಿಯಮ 69ರ ಮೇರೆಗೆ ಸಾರ್ವಜನಿಕ ಮಹತ್ವದ ಅಲ್ಪಕಾಲಾವಧಿ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಡ್ರಗ್ಸ್ ಮಾಫಿಯಾದ ಡೀಲರ್‍ಗಳು 40ರಿಂದ 50 ಮಂದಿ ಇದ್ದು, ಇದನ್ನು ನಿಯಂತ್ರಿಸಬೇಕಿದೆ. ಡ್ರಗ್ಸ್ ಮಾಫಿಯಾ ತಡೆಗಟ್ಟಲು ವಿಶೇಷ ಸ್ಕ್ವಾರ್ಡ್ ನೇಮಕವಾಗಬೇಕು. ವಿಶೇಷ ಪರಿಣಿತ ತನಿಖಾಧಿಕಾರಿಗಳು ಬೇಕು. ಈ ಕೇಸುಗಳಿಗೆ ಸಂಬಂಧಿಸಿದ ವಕೀಲರಿಗೂ ತರಬೇತಿ ನೀಡಬೇಕು. ಶಾಲಾ-ಕಾಲೇಜುಗಳ ಪ್ರಾಂಶುಪಾಲರ ಸಭೆ ಕರೆದು ಸೂಕ್ತ ತಿಳುವಳಿಕೆ ನೀಡಬೇಕು ಎಂದು ಸಲಹೆ ಮಾಡಿದರು.
ವಿದೇಶಗಳಿಂದ ಟೀಪುಡಿ ಪೆÇಟ್ಟಣದಲ್ಲಿ ಗಾಂಜಾ ಬಿತ್ತನೆ ಬೀಜಗಳು ಬರುತ್ತಿದ್ದು, ಬನ್ನೇರುಘಟ್ಟದ ಸುತ್ತಮುತ್ತಲಿನ ಪ್ರತಿಷ್ಠಿತ ಫಾರಂನಲ್ಲಿ ಬೆಳೆಯುತ್ತಿದ್ದಾರೆ ಎಂಬ ಮಾಹಿತಿ ಇದೆ. ಕೇರಳ ರಾಜ್ಯದ ರೀತಿಯಲ್ಲಿ ಗಾಂಜಾ, ಆಫೀಮು, ಕೊಕೈನ್, ಡ್ರಗ್ಸ್ ತಡೆಗಟ್ಟಲು ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ರಾಜ್ಯದಲ್ಲಿ ಸುಮಾರು 5ಲಕ್ಷದಷ್ಟು ಡ್ರಗ್ಸ್ ವ್ಯಸನಿಗಳಿದ್ದಾರೆ. ಪ್ರತಿ ದಿನ ಕೋಟ್ಯಂತರ ರೂ. ಮೌಲ್ಯದ ಡ್ರಗ್ಸ್ ಬರುತ್ತಿದೆ. ಇತ್ತೀಚೆಗೆ ಸಾಬೂನಿನಲ್ಲಿ ಮಹಿಳೆಯೊಬ್ಬರು ಕೊಕೈನ್ ತಂದಿದ್ದು ಪತ್ತೆಯಾಗಿದೆ. ವರ್ಷದಿಂದ ವರ್ಷಕ್ಕೆ ಡ್ರಗ್ಸ್ ಮಾಫಿಯಾ ಜಾಲ ಬೆಳೆಯುತ್ತಿದ್ದು, ರಾಜಾರೋಷವಾಗಿ ಎಲ್ಲಾ ಕಡೆಯೂ ಸಿಗುವುದಷ್ಟೇ ಅಲ್ಲ. ವೆಬ್‍ಸೈಟ್‍ನಲ್ಲೂ ಈ ದಂಧೆ ಬೆಳೆಯುತ್ತಿದೆ. ಯುವ ಸಮುದಾಯವನ್ನು ಡ್ರಗ್ಸ್ ವ್ಯಸನದಿಂದ ಮುಕ್ತಗೊಳಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕಾಗಿದೆ ಎಂದು ಹಲವು ಅಂಕಿ -ಅಂಶಗಳ ಮೂಲಕ ಮಾಹಿತಿ ನೀಡಿದರು.
ಈ ನಡುವೆ ಸಭಾಧ್ಯಕ್ಷರ ಪೀಠದಲ್ಲಿದ್ದ ಉಪಸಭಾಧ್ಯಕ್ಷ ಎಂ.ಕೃಷ್ಣಾರೆಡ್ಡಿ ಮಾತನಾಡಿ, ನಮ್ಮ ದೇಶದಲ್ಲಿ ಕಾನೂನುಗಳು ಬಲಿಷ್ಠವಾಗಿದ್ದರೂ ಶಿಫಾರಸ್ಸಿನಿಂದ ಕಟ್ಟುನಿಟ್ಟಿನ ಕ್ರಮ ಸಾಧ್ಯ ಆಗುತ್ತಿಲ್ಲ. ಶಿಫಾರಸು ಮಾಡುವುದು ನಿಲ್ಲಿಸಿದರೆ ಶೇ.50ರಷ್ಟು ಸುಧಾರಣೆಯಾಗಲಿದೆ ಎಂದರು.
ಕಾಂಗ್ರೆಸ್ ಶಾಸಕ ಎನ್.ಎ.ಹ್ಯಾರಿಸ್ ಮಾತನಾಡಿ, ಶಿಕ್ಷೆ ಪ್ರಮಾಣ ಹೆಚ್ಚು ಮಾಡುವ ಮೂಲಕ ಡ್ರಗ್ಸ್ ಮಾಫಿಯಾ ತಪ್ಪಿಸಬೇಕಾಗಿದೆ ಎಂದು ಸಲಹೆ ಮಾಡಿದರು.
ಡ್ರಗ್ಸ್ ಮುಕ್ತ ಕರ್ನಾಟಕ:
ಬಿಜೆಪಿ ಹಿರಿಯ ಶಾಸಕ ಎಸ್.ಸುರೇಶ್‍ಕುಮಾರ್ ಮಾತನಾಡಿ, ಪೆÇಲೀಸ್ ಇಲಾಖೆಗೆ ಡ್ರಗ್ಸ್ ಮಾಫಿಯಾ ಬಗ್ಗೆ ಮಾಹಿತಿ ಇದೆ. ಇದನ್ನು ನಿಯಂತ್ರಿಸದೇ ಬಿಟ್ಟರೆ ಯುವ ಜನತೆಯನ್ನು ಬಲಿಕೊಟ್ಟಂತಾಗುತ್ತದೆ. ಡ್ರಗ್ಸ್ ಮುಕ್ತ ಕರ್ನಾಟಕ ಎಂದು ಹೇಳುವುದು ಯಾವಾಗ? ಕೊಳಗೇರಿ, ಆಟದ ಮೈದಾನ, ರೈಲ್ವೆ ನಿಲ್ದಾಣ ಬಳಿಯೂ ಡ್ರಗ್ಸ್ ಮಾರಾಟವಾಗುತ್ತಿದ್ದು, ಈ ಸಮಸ್ಯೆಗೆ ಪರಿಹಾರ ದೊರೆಯಬೇಕಾಗಿದೆ ಎಂದರು.
ಬಿಜೆಪಿ ಶಾಸಕ ಭರತ್‍ಶೆಟ್ಟಿ ಮಾತನಾಡಿ, ಮಂಗಳೂರು ಭಾಗದಲ್ಲೂ ಡ್ರಗ್ಸ್ ಮಾರಾಟವಾಗುತ್ತಿದ್ದು, ಇದನ್ನು ನಿಯಂತ್ರಿಸಲು ಕಠಿಣ ಕ್ರಮ ಕೈಗೊಳ್ಳಬೇಕು ಎಂದರು.
ಕ್ಯಾನ್ಸರ್‍ಗಿಂತ ದೊಡ್ಡ ಕಾಯಿಲೆ:
ಬಿಜೆಪಿ ಶಾಸಕ ವಿ.ಸೋಮಣ್ಣ ಮಾತನಾಡಿ, ಡ್ರಗ್ಸ್ ದಂಧೆ ಕ್ಯಾನ್ಸರ್ ರೋಗಕ್ಕಿಂತಲೂ ದೊಡ್ಡದಾಗಿದೆ. ಕೇರಳ ರಾಜ್ಯದಲ್ಲಿ ಸಾಕಷ್ಟು ನಿಯಂತ್ರಣಕ್ಕೆ ತಂದಂತೆ ರಾಜ್ಯದಲ್ಲೂ ಕೂಡ ತರಬೇಕಾಗಿದೆ. ಬೆಂಗಳೂರು ಮಾತ್ರವಲ್ಲ, ಬೆಳಗಾವಿ ಮತ್ತು ಮೈಸೂರಿನಂತಹ ದೊಡ್ಡ ದೊಡ್ಡ ನಗರಗಳಲ್ಲೂ ಮಾಫಿಯ ಇದೆ. ಇದನ್ನು ಸಂಪೂರ್ಣವಾಗಿ ನಿಯಂತ್ರಿಸಲು ಕಾಯ್ದೆ ಬೇಕಾಗಿದೆ. ತರಬೇತಿ ಪಡೆದ ಪೆÇಲೀಸರು ಬೇಕು. ಇಲ್ಲದಿದ್ದರೆ ಪೆÇಲೀಸರು ಹಿಡಿದ 15 ದಿನದಲ್ಲಿ ವಾಪಸ್ ಬರುತ್ತಾರೆ. ಎಷ್ಟೇ ದೊಡ್ಡ ವ್ಯಕ್ತಿಗಳಾದರೂ ಕೂಡ ಮುಲಾಜಿಲ್ಲದೆ ಬಿಸಿ ಮುಟ್ಟಿಸುವಂತಹ ಕೆಲಸವಾಗಬೇಕು. ಆರೋಗ್ಯ ಮತ್ತು ಗೃಹ ಇಲಾಖೆ ಜಂಟಿಯಾಗಿ ಡ್ರಗ್ಸ್ ಜಾಲ ನಿಯಂತ್ರಿಸಲು ಕ್ರಮ ಕೈಗೊಳ್ಳಬೇಕೆಂದು ಸಲಹೆ ಮಾಡಿದರು.
ಶಾಸಕ ಅರವಿಂದ ಲಿಂಬಾವಳಿ ಮಾತನಾಡಿ, ಡ್ರಗ್ಸ್ ಜಾಲ ಸಾಮಾಜಿಕ ಪಿಡುಗಾಗಿದೆ. ನಾಲ್ಕೈದು ಇಲಾಖೆಗಳಿಗೆ ಸಂಬಂಧಪಟ್ಟಿದೆ. ಬೆಂಗಳೂರು ಸುತ್ತಮುತ್ತಲೂ ಗಾಂಜಾ ಬೆಳೆಯುವ ಯೋಚನೆ ಮಾಡುತ್ತಿದ್ದು, ಇದಕ್ಕೆ ಕಡಿವಾಣ ಹಾಕಬೇಕು. ಶಾಲಾ-ಕಾಲೇಜುಗಳ ಆಡಳಿತ ಮಂಡಳಿ, ಪ್ರಾಂಶುಪಾಲರ ಸಭೆ ಕರೆದು ತಿಳುವಳಿಕೆ ನೀಡಬೇಕು, ದಾರಿ ತಪ್ಪುವ ಯುವಕರನ್ನು ಸರಿ ದಾರಿಗೆ ತರಬೇಕು, ಮಾನಸಿಕ ಆರೋಗ್ಯ ಕೇಂದ್ರಗಳನ್ನು ಸದೃಢಗೊಳಿಸಿ ಡ್ರಗ್ಸ್ ವ್ಯಸನಿಗಳಿಗೆ ಕೌನ್ಸಲಿಂಗ್ ನಡೆಸಬೇಕು. ಡ್ರಗ್ಸ್ ಸೇವನೆ ಪತ್ತೆ ಹಚ್ಚುವಂತಹ ಕೆಲಸ ಮಾಡಬೇಕು. ವೀಸಾ ಅವಧಿ ಮುಗಿದ ವಿದೇಶಿ ವಿದ್ಯಾರ್ಥಿಗಳನ್ನು ಆಯಾ ದೇಶಕ್ಕೆ ಕಳುಹಿಸುವ ಕೆಲಸ ಆಗಬೇಕೆಂದು ಸರ್ಕಾರವನ್ನು ಒತ್ತಾಯಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ