ವೆಚ್ಚ ಉಳಿಸಲು 62 ಕಂಟೋನ್ಮೆಂಟ್‍ಗಳ ರದ್ದು?

ನವದೆಹಲಿ, ಜು.13-ನಿರ್ವಹಣಾ ವೆಚ್ಚ ಉಳಿಸಲು ದೇಶದಲ್ಲಿರುವ ಎಲ್ಲ 62 ಕಂಟೋನ್ಮೆಂಟ್‍ಗಳನ್ನು(ಸೇನೆ ದಂಡು ಪ್ರದೇಶಗಳು) ರದ್ದುಗೊಳಿಲು ಭಾರತೀಯ ಭೂ ಸೇನೆ ಗಂಭೀರ ಚಿಂತನೆ ನಡೆಸಿದೆ. ಕಂಟೋನ್ಮೆಂಟ್‍ಗಳ ಒಳಗೆ ಇರುವ ಮಿಲಿಟರಿ ಪ್ರದೇಶಗಳನ್ನು ವಿಶೇಷ ಸೇನಾ ಕೇಂದ್ರಗಳನ್ನಾಗಿ ಪರಿವರ್ತಿಸಲು ಸಹ ಉದ್ದೇಶಿಸಲಾಗಿದೆ.
ಭಾರತದಲ್ಲಿರುವ ಎಲ್ಲ ದಂಡು ಪ್ರದೇಶಗಳನ್ನು ಬಂದ್ ಮಾಡುವುದರಿಂದ ರಕ್ಷಣಾ ಆಯವ್ಯಯದ ಮೇಲಿನ ಆರ್ಥಿಕ ಹೊರೆಯನ್ನು ತಗ್ಗಿಸಲು ನೆರವಾಗುತ್ತದೆ ಎಂದು ಉನ್ನತ ಸೇನಾಧಿಕಾರಿಗಳು ಪ್ರಸ್ತಾಪಿಸಿದ್ದಾರೆ.
ಕಂಟೋನ್ಮೆಂಟ್‍ಗಳನ್ನು ರದ್ದುಗೊಳಿಸಲು ಈ ಹಿಂದೆ ಉದ್ದೇಶಿಸಲಾಗಿತ್ತಾದರೂ ಅದು ವಿಫಲಗೊಂಡಿತ್ತು. ಈಗ ಈ ಪ್ರಸ್ತಾವಿತ ಯೋಜನೆ ಕಾರ್ಯರೂಪಕ್ಕೆ ಬಂದರೆ ದೊಡ್ಡ ಮಟ್ಟದಲ್ಲಿ ವಿವಾದ ಭುಗಿಲೇಳುವ ಆತಂಕವೂ ಎದುರಾಗಲಿದೆ. ಭಾರತದಲ್ಲಿನ ಮಿಲಿಟರಿ ದಂಡು ಪ್ರದೇಶಗಳಿಗೆ ಸುದೀರ್ಘ ಇತಿಹಾಸವಿದೆ. ಬ್ರಿಟಿಷರು 250 ವರ್ಷಗಳ ಹಿಂದೆ ಪಶ್ಚಿಮ ಬಂಗಾಳದ ಈಗಿನ ನಾರ್ತ್ 25 ಪರಗಣ ಜಿಲ್ಲೆಯ ಉಪ ವಲಯ ಬರಾಕ್‍ಪೆÇೀರ್‍ನಲ್ಲಿ ಯೋಧರ ವಾಸಕ್ಕಾಗಿ ಪ್ರಥಮ ಕಂಟೋನ್ಮೆಂಟ್ ಸ್ಥಾಪಿಸಿದ್ದರು. ಅದು ಕಾಲಕ್ರಮೇಣ ದೇಶಾದ್ಯಂತ ವಿಸ್ತರಣೆಯಾಗಿ ಈಗ ಒಟ್ಟು 62 ದಂಡು ಪ್ರದೇಶಗಳಿವೆ.
ಇವುಗಳ ನಿರ್ವಹಣೆಗಾಗಿ ಅಧಿಕ ವೆಚ್ಚವಾಗುತ್ತಿದ್ದು, ಸೇನೆ ಮೇಲೆ ಆರ್ಥಿಕ ಹೊರೆಯಾಗುತ್ತಿದೆ. ಈ ವರ್ಷ ಇವುಗಳ ನಿರ್ವಹಣೆಗಾಗಿ 476 ಕೋಟಿ ರೂ. ವ್ಯಯಿಸಲಾಗಿದೆ. ಆದ್ದರಿಂದ ಇದನ್ನು ರದ್ದುಗೊಳಿಸಿ ಇವುಗಳ ಒಳಗೆ ಇರುವ ಸೇನಾ ಪ್ರದೇಶಗಳನ್ನು ವಿಶೇಷ ಮಿಲಿಟರಿ ಸ್ಟೇಷನ್‍ಗಳಾಗಿ ಪರಿವರ್ತಿಸಬೇಕು. ಸಾರ್ವಜನಿಕ ಸ್ಥಳವನ್ನು ಇತರ ಉದ್ದೇಶಗಳಿಗೆ ಮತ್ತು ನಿರ್ವಹಣೆಗಾಗಿ ಸ್ಥಳೀಯ ನಗರ ಪಾಲಿಕೆ/ಮುನ್ಸಿಪಾಲಿಟಿಗಳಿಗೆ ಹಸ್ತಾಂತರಿಸಬೇಕು ಎಂದು ಸೇನೆ ಈಗಾಗಲೇ ರಕ್ಷಣಾ ಸಚಿವಾಲಯಕ್ಕೆ ಮನವರಿಕೆ ಮಾಡಿಕೊಟ್ಟಿದೆ.
ಕಂಟೋನ್ಮೆಂಟ್ ಪ್ರದೇಶಗಳನ್ನು ವಿಶೇಷ ಸೇನಾ ಕೇಂದ್ರಗಳಾಗಿ ಪರಿವರ್ತಿಸುವುದರಿಂದ ಆರ್ಥಿಕ ಹೊರೆ ತಗ್ಗುತ್ತದೆ, ಸೇನೆಯನ್ನು ಮತ್ತಷ್ಟು ಬಲಗೊಳಿಸಿದಂತಾಗುತ್ತದೆ ಹಾಗೂ ಒತ್ತುವರಿಯನ್ನು ತಡೆಗಟ್ಟಲು ಸಹಕಾರಿ ಎಂಬ ಅಂಶವನ್ನು ಸೇನೆ ಉಲ್ಲೇಖಿಸಿದೆ. ಭೂಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಈ ಬಗ್ಗೆ ಅಧ್ಯಯನ ನಡೆಸಿ ವರದಿ ನೀಡುವಂತೆ ಕಳೆದ ಸೆಪ್ಟೆಂಬರ್‍ನಲ್ಲೇ ಆದೇಶ ನೀಡಿದ್ದರು. ಕಂಟೋನ್ಮೆಂಟ್‍ಗಳನ್ನು ರದ್ದುಗೊಳಿಸಬೇಕೆಂಬ ಪ್ರಸ್ತಾಪ ಹೊಸದೇನಲ್ಲ. ಇವುಗಳನ್ನು ರದ್ದುಗೊಳಿಸುವ ಉದ್ದೇಶಕ್ಕೆ ಈ ಹಿಂದೆ ವ್ಯಾಪಕ ವಿರೋಧಗಳು ವ್ಯಕ್ತವಾಗಿದ್ದವು. ಭಾರತದ ಸೇನಾ ಇತಿಹಾಸ ಸಾರುವ ಇವುಗಳನ್ನು ಯಾವುದ ಕಾರಣಕ್ಕೂ ರದ್ದುಗೊಳಿಸಬಾರದು ಎಂದು ಈಗ ಮತ್ತೆ ಹೊಸ ಪ್ರಸ್ತಾವ ಕೇಳಿ ಬಂದಿರುವುದರಿಂದ ದೊಡ್ಡ ಮಟ್ಟದಲ್ಲಿ ವಿವಾದ ಭುಗಿಲೇಳುವ ಲಕ್ಷಣಗಳು ಗೋಚರಿಸುತ್ತಿವೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ