
ಬೆಂಗಳೂರು, ಜು.12-ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷರಾಗಿದ್ದ ಅನ್ವರ್ ಮಾನಪ್ಪಾಡಿ ಸಲ್ಲಿಸಿದ್ದ ವರದಿಯ ಸಂಬಂಧ ಸಿಬಿಐ ತನಿಖೆಗೆ ಒಪ್ಪಿಕೊಂಡ ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಮತ್ತು ವಕ್ಫ್‍ಸಚಿವ ಜಮೀರ್ ಅಹಮ್ಮದ್ ಖಾನ್ ಮರುಘಳಿಗೆಯೇ ಯುಟರ್ನ್ ತೆಗೆದುಕೊಂಡ ಘಟನೆ ವಿಧಾನಪರಿಷತ್‍ನಲ್ಲಿ ನಡೆಯಿತು.
ಪ್ರಶ್ನೋತ್ತರ ಕಲಾಪದಲ್ಲಿ ಅರುಣ್ ಶಹಾಪುರ ಅವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಂದರ್ಭದಲ್ಲಿ ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷರಾಗಿದ್ದ ಅನ್ವರ್ ಮಾನಪ್ಪಾಡಿ ಅವರು ವಕ್ಫ್ ಆಸ್ತಿ ದುರುಪಯೋಗ ನಡೆದಿದೆ ಎನ್ನಲಾದ ಕುರಿತು ವರದಿ ಸಲ್ಲಿಸಿದ್ದಾರೆ. ಅವರು ಅಧ್ಯಕ್ಷರಾಗಿದ್ದಾಗ ವರದಿ ಕೊಟ್ಟಿರಲಿಲ್ಲ. ಒಂದೂವರೆ ವರ್ಷದ ನಂತರ ವರದಿ ಕೊಟ್ಟಿದ್ದಾರೆ. ಆಗ ನಿಮ್ಮದೇ ಸರ್ಕಾರವಿತ್ತು. ನೀವು ಯಾಕೆ ಕ್ರಮಕೈಗೊಳ್ಳಲಿಲ್ಲ. ಸದಾನಂದಗೌಡರು ಮುಖ್ಯಮಂತ್ರಿಗಳಾಗಿದ್ದರು. ವರದಿಯಲ್ಲಿ ಸತ್ಯಾಂಶವಿದ್ದಿದ್ದರೆ ಕ್ರಮಕೈಗೊಳ್ಳುತ್ತಿದ್ದರು ಎಂದು ಹೇಳಿದರು.
ಅನ್ವರ್ ಮಾನಪ್ಪಾಡಿ ಅವರು 26.03.2012ರಂದು ಸಲ್ಲಿಸಿದ್ದ ವರದಿಯ ಮೇಲೆ ಕಾನೂನು ಇಲಾಖೆ ಅಭಿಪ್ರಾಯದೊಂದಿಗೆ ಅಡ್ವೊಕೇಟ್ ಜನರಲ್ ಅವರ ಅಭಿಪ್ರಾಯ ಪಡೆದು 03.03.2016ರಂದು ಸಚಿವ ಸಂಪುಟದ ಮುಂದೆ ಮಂಡಿಸಲಾಯಿತು. ಸಚಿವ ಸಂಪುಟ ಆಯೋಗದ ಶಿಫಾರಸುಗಳನ್ನು ತಿರಸ್ಕರಿಸಿದೆ ಎಂದರು.
ಮಾನಪ್ಪಾಡಿ ವರದಿಯಲ್ಲಿ ಸತ್ಯಾಂಶ ಇದ್ದಿದ್ದರೆ ನೀವು ಸಿಬಿಐಗೆ ವಹಿಸಬಹುದಿತ್ತು, ಏಕೆ ವಹಿಸಲಿಲ್ಲ? ಏಕೆ ತನಿಖೆ ನಡೆಸಲಿಲ್ಲ ಎಂದು ವಿರೋಧ ಪಕ್ಷದವರನ್ನೇ ಪ್ರಶ್ನಿಸಿದರು.
ಆಗ ವಿಪಕ್ಷ ನಾಯಕ ಕೋಟಾ ಶ್ರೀನಿವಾಸ್ ಪೂಜಾರಿ, ಅರುಣ್ ಶಹಾಪುರ್, ನಾರಾಯಣಸ್ವಾಮಿ, ಆ ಕೆಲಸವನ್ನು ನೀವು ಮಾಡಿ ಎಂದು ಹೇಳಿದರು.
ಆಯ್ತು, ನಾವು ಮಾಡುತ್ತೇವೆ. ಸಿಬಿಐಗೆ ಕೊಡುತ್ತೇನೆ ಎಂದು ಜಮೀರ್ ಹೇಳಿದಾಗ, ಪ್ರತಿಪಕ್ಷದ ಸದಸ್ಯರು ಮೇಜು ಕುಟ್ಟಿ ಸ್ವಾಗತಿಸಿದರು. ಸಭಾಪತಿ ಹೊರಟ್ಟಿ ಅವರು ಆಯ್ತು ಬಿಡಿ ಅವರು ಒಪ್ಪಿದ್ದಾರಲ್ಲ ಎಂದು ಮುಂದಿನ ಪ್ರಶ್ನೆ ಕೈಗೆತ್ತಿಕೊಂಡರು.
ನಂತರ ಜಬ್ಬಾರ್‍ಖಾನ್ ಹೊನ್ನಳ್ಳಿ ಅವರು, ಪ್ರಕರಣ ನ್ಯಾಯಾಲಯದಲ್ಲಿದೆ. ಹಾಗೆ ಮಾಡಲು ಬರುವುದಿಲ್ಲ ಎಂದರು.
ಯು.ಟಿ.ಖಾದರ್ ಅವರು ಜಮೀರ್ ಅಹಮ್ಮದ್ ಬಳಿ ಬಂದು ಮಾತನಾಡಿದರು. ನಂತರ ಯುಟರ್ನ್ ಹೊಡೆದ ಜಮೀರ್ ಅಹಮ್ಮದ್ ಅವರು, ನಾನು ಹಾಗೆ ಹೇಳಲಿಲ್ಲ. ನೋಡುತ್ತೇನೆ ಎಂದು ಹೇಳಿದೆ. ಬೇಕಾದರೆ ಕಡತವನ್ನು ತೆಗೆಸಿ ನೋಡಿ ಎಂದು ಹೇಳಿದರು.
ಇದಕ್ಕೆ ಪ್ರತಿಪಕ್ಷದವರು ಆಕ್ಷೇಪ ವ್ಯಕ್ತಪಡಿಸಿದಾಗ ಆಗ ಜಮೀರ್ ಅಹಮ್ಮದ್ ಖಾನ್ ಮತ್ತೆ ಸಮಜಾಯಿಷಿ ನೀಡಿದರು. ನಾನು ಸಿಬಿಐಗೆ ಕೊಡ್ತೀನಿ ಹೇಳಲಿಲ್ಲ. ನೋಡ್ತೀನಿ ಅಂತಾ ಮಾತ್ರ ಹೇಳಿದ್ದು, ಮಾಡ್ತೀನಿ ಹೇಳಲಿಲ್ಲ ಎಂದು ತಮ್ಮ ರಾಗ ಬದಲಿಸಿದರು.
ಆಗ ಪ್ರತಿಪಕ್ಷದವರು ಸಭಾಪತಿಯವರ ಕಡೆ ತಿರುಗಿ ನೋಡಿ ಇವರೇನು ಹೀಗೆ ಹೇಳ್ತಿದ್ದಾರೆ ಅಂತ ಆಕ್ಷೇಪ ವ್ಯಕ್ತಪಡಿಸಿ. ಆಗ ಜಮೀರ್ ಏನು ಹೇಳಿದರೆಂದು ಕಡತ ಪರಿಶೀಲಿಸಿ ಹೇಳುತ್ತೇನೆ. ಇದನ್ನು ಇಲ್ಲಿಗೆ ಮುಗಿಸಿ ಎಂದು ಚರ್ಚೆಗೆ ಇತಿಶ್ರೀ ಹಾಡಿದರು.