ನವದೆಹಲಿ, ಜು.12-ಆರ್ಥಿಕವಾಗಿ ಸಬಲೀಕರಣಗೊಂಡ ವನಿತೆಯರು ಸಾಮಾಜಿಕ ಪಿಡುಗಿನ ವಿರುದ್ಧ ಭದ್ರಕೋಟೆಯಂತೆ ಎಂದು ಪ್ರಧಾನಿ ನರೇಂದ್ರ ಮೋದಿ ಬಣ್ಣಿಸಿದ್ದಾರೆ.
ದೇಶದ ಗ್ರಾಮೀಣ ಪ್ರದೇಶಗಳು, ಕೃಷಿ, ಹೈನುಗಾರಿಕೆ ಸೇರಿದಂತೆ ವಿವಿಧ ಕ್ಷೇತ್ರದಲ್ಲಿ ಮಹಿಳೆಯರ ಪಾತ್ರ-ಕೊಡುಗೆ ಅಪಾರ ಮತ್ತು ಅಗಾಧವಾದುದು. ಅವರಿಲ್ಲದ ಈ ಎರಡು ವಲಯಗಳನ್ನು ಕಲ್ಪಿಸಿಕೊಳ್ಳುವುದು ಅಸಾಧ್ಯ ಎಂದು ಮೋದಿ ಹೇಳಿದ್ದಾರೆ.
ರಾಷ್ಟ್ರಾದ್ಯಂತ ಇರುವ ವಿವಿಧ ಸ್ವಸಹಾಯಕ ಸಮೂಹಗಳಿಗೆ ಸೇರಿದ ಅಸಂಖ್ಯಾತ ಮಹಿಳೆಯರೊಂದಿಗೆ ನಮೋ ಆ್ಯಪ್ ಮೂಲಕ ವೀಡಿಯೋ ಸಂವಾದ ನಡೆಸಿದ ಮೋದಿ, ಮಹಿಳೆಯರ ಸಬಲೀಕರಣಕ್ಕೆ ಆರ್ಥಿಕ ಸ್ವಾವಲಂಬನೆ ಅತಿ ಮುಖ್ಯ. ವನಿತೆಯರು ಉದ್ಯಮಶೀಲರಾಗುತ್ತಿದ್ದಾರೆ. ಅವರು ಉದ್ಯಮದಲ್ಲಿ ಯಶಸ್ವಿಯಾಗಲು ಅವಕಾಶಗಳನ್ನು ನೀಡಬೇಕಿದೆ ಎಂದು ಹೇಳಿದರು.
ಸಮಾಜದ ಸರ್ವಾಂಗೀಣ ಅಭಿವೃದ್ದಿಗೆ ವಿಶೇಷವಾಗಿ ಗ್ರಾಮೀಣ ಮಹಿಳೆಯರೂ ಸೇರಿದಂತೆ ಎಲ್ಲ ವರ್ಗದ ವನಿತೆಯರು ಸಬಲೀಕರಣಗೊಳ್ಳುವ ಅಗತ್ಯವಿದೆ ಎಂದು ಒತ್ತಿ ಹೇಳಿದ ಪ್ರಧಾನಿ ಅವರು ಅಗಾಧ ಸಾಮಥ್ರ್ಯ ಹೊಂದಿದ್ದಾರೆ. ಅವರ ಶಕ್ತಿ-ಸಾಮಥ್ರ್ಯಗಳನ್ನು ಮನಗಾಣುವ ಅಗತ್ಯವಿದೆ ಎಂದು ಮೋದಿ ತಿಳಿಸಿದರು.
ಇಂದು ಯಾವುದೇ ಕ್ಷೇತ್ರದತ್ತ ನೋಡಿದರೂ, ಅಲ್ಲಿ ಕಾರ್ಯನಿರ್ವಹಿಸುತ್ತಿರುವ ಮಹಿಳೆಯರ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ಮೋದಿ ಸಂತಸ ವ್ಯಕ್ತಪಡಿಸಿದರು.