ಹೈದರಾಬಾದ್, ಜು.12 ಮುಸ್ಲಿಮರ ವಿರುದ್ಧ ಪ್ರಚೋದನಾತ್ಮಕ ಹೇಳಿಕೆಗಳನ್ನು ನೀಡಿದ್ದಾರೆ ಎನ್ನಲಾದ ಸ್ವಾಮಿ ಪರಿಪೂರ್ಣಾನಂದರನ್ನು ಆರು ತಿಂಗಳುಗಳ ಅವಧಿಗೆ ಹೈದರಾಬಾದ್‍ನಿಂದ ಗಡೀಪಾರು ಮಾಡಲಾಗಿದೆ. ತೆಲಂಗಾಣ ಸಮಾಜ ವಿರೋಧಿ ಮತ್ತು ಅಪಾಯಕಾರಿ ಚಟುವಟಿಕೆಗಳ ನಿಯಂತ್ರಣ ಕಾಯ್ದೆ 1930 ಅನ್ವಯ ಈ ಕ್ರಮ ಕೈಗೊಳ್ಳಲಾಗಿದೆ. ರಾಷ್ಟ್ರೀಯ ಹಿಂದು ಸೇನಾ ಸಭೆಗಳಲ್ಲಿ ಮುಸ್ಲಿಮರ ವಿರುದ್ಧ ಪ್ರಚೋದನಾತ್ಮಕ ಹೇಳಿಕೆ ನೀಡುತ್ತಿದ್ದರು ಎಂದು ಇವರ ವಿರುದ್ದ ಆರೋಪಗಳಿ ಕೇಳಿಬಂದಿದ್ದವು.
ಹೈದರಾಬಾದ್‍ನ ಜುಬಿಲೀ ಹಿಲ್ಸ್ ಪ್ರದೇಶದಲ್ಲಿ ಪೂರ್ಣಾನಂದರ ನಿವಾಸವಿದ್ದು, ಪೂರ್ವ ಗೋದಾವರಿ ಜಿಲ್ಲೆಯ ಕಾಕಿನಾಡಿನಲ್ಲಿ ಶ್ರೀ ಪೀಠಂ ಎಂಬ ಆಧ್ಯಾತ್ಮಿಕ ಕೇಂದ್ರವನ್ನು ನಡೆಸುತ್ತಿದ್ದಾರೆ. ಕಳೆದ ವಾರ ಟಿವಿ ಕಾರ್ಯಕ್ರಮವೊಂದರಲ್ಲಿ ದಲಿತ ಚಿತ್ರ ವಿಮರ್ಶಕ ಕಥಿ ಮಹೇಶ್ ಅವರು ಶ್ರೀರಾಮ ಮತ್ತು ಸೀತೆಯ ವಿರುದ್ಧ ಹೇಳಿಕೆ ನೀಡಿದ್ದರು. ಇದನ್ನು ವಿರೋಧಿಸಿ ಹೈದರಾಬಾದ್ ನಿಂದ ಭೊಂಗಿರ್ ಜಿಲ್ಲೆಯಲ್ಲಿ ಆಯೋಜಿಸಿದ್ದ ಧಾರ್ಮಿಕ ಚೈತನ್ಯ ಯಾತ್ರೆಯನ್ನು ಪೆÇಲೀಸರು ನಿಷೇಧಿಸಿದ್ದರು. ಸ್ವಾಮಿ ಪರಿಪೂರ್ಣಾನಂದರನ್ನು ಬಹಿಷ್ಕರಿಸಿದ ಕ್ರಮವನ್ನು ಬಿಜೆಪಿ ಟೀಕಿಸಿದೆ. ಈ ಕ್ರಮವನ್ನು ಖಂಡಿಸಿ ರಾಜ್ಯಾದ್ಯಂತ ಪ್ರತಿಭಟನೆ ನಡೆಸುವುದಾಗಿ ವಿಶ್ವ ಹಿಂದು ಪರಿಷದ್ ಹಾಗೂ ಬಜರಂಗ ದಳ ಎಚ್ಚರಿಸಿವೆ.