ಇಸ್ಲಾಮಾಬಾದ್, ಜು.12-ಈ ತಿಂಗಳು 25ರಂದು ನಡೆಯುವ 2018ರ ಸಂಸತ್ ಚುನಾವಣೆಗೆ ಮುನ್ನವೇ ಪಾಕಿಸ್ತಾನದ ಬೇಹುಗಾರಿಕೆ ಸಂಸ್ಥೆ ಐಎಸ್‍ಐ ದೊಡ್ಡ ಮಟ್ಟದ ಅಕ್ರಮದಲ್ಲಿ ತೊಡಗಿದೆ ಎಂದು ಪಾಕಿಸ್ತಾನದ ಪದಚ್ಯುತ ನಾಯಕ ನವಾಜ್ ಷರೀಫ್ ಆರೋಪಿಸಿದ್ದಾರೆ.
ಐಎಸ್‍ಐನ ಗುಪ್ತಚರ ವಿಭಾಗದ ಮುಖ್ಯಸ್ಥ ಜನರಲ್ ಫಯಾಜ್ ಹಮೀದ್ ಚುನಾವಣೆಗೆ ಮುನ್ನವೇ ತಮ್ಮ ಪಿಎಂಎಲ್-ಎನ್ ಪಕ್ಷದ ಅಭ್ಯರ್ಥಿಗಳಿಗೆ ನಿಷ್ಠೆಯನ್ನು ಬದಲಿಸುವಂತೆ ಅಥವಾ ಸ್ವತಂತ್ರ್ಯ ಹುರಿಯಾಳುಗಳಾಗಿ ಸ್ಪರ್ಧಿಸುವಂತೆ ಬೆದರಿಕೆ ಒಡ್ಡುತ್ತಿದ್ದಾರೆ. ಇದು ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯಾಗಿದೆ ಎಂದು ನವಾಜ್ ಆಪಾದಿಸಿದ್ದಾರೆ.
ಜನರಲ್ ಹಮೀದ್ ಮತ್ತು ಅವರ ತಂಡವು ನಮ್ಮ ಪಕ್ಷದ ಉಮೇದುವಾರರ ಮೇಲೆ ಅನುಚಿತ ಪ್ರಭಾವ ಬೀರುತ್ತಿದೆ. ಜೀಪ್ ಚಿಹ್ನೆಯನ್ನು ಆಯ್ಕೆ ಮಾಡಿಕೊಳ್ಳುವಂತೆ, ತಮ್ಮ ಮೇಲಿನ ನಿಷ್ಠೆಯನ್ನು ಬದಲಿಸುವಂತೆ ಹಾಗೂ ಪಿಎಂಎಲ್-ಎನ್ ಪಕ್ಷವನ್ನು ತೊರೆದು ಪಕ್ಷೇತರ ಅಭ್ಯರ್ಥಿಗಳಾಗಿ ಕಣಕ್ಕಿಳಿಯುವಂತೆ ಪ್ರಲೋಭನೆ ಒಡ್ಡುತ್ತಿದೆ ಎಂದು ಪಾಕಿಸ್ತಾನ ಮಾಜಿ ಪ್ರಧಾನಿ ಆರೋಪಿಸಿದ್ದಾರೆ.
ಜುಲೈ 25ರಂದು ನಡೆಯುವ ಸಾರ್ವತ್ರಿಕ ಚುನಾವಣೆಯಲ್ಲಿ ಇದರಿಂದ ಪಕ್ಷದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುತ್ತದೆ. ಈ ಬಗ್ಗೆ ಚುನಾವಣಾ ಆಯೋಗ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕೆಂದು ಅವರು ಆಗ್ರಹಿಸಿದ್ದಾರೆ.