ತಿರುವನಂತಪುರಂ,ಜು.12- ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತೆ ಗೆದ್ದರೆ ದೇಶದಲ್ಲಿ ಹಿಂದೂ ಪಾಕಿಸ್ತಾನವಾಗುತ್ತದೆ ಎಂದು ವಿವಾದಾತ್ಮಕ ಹೇಳಿಕೆ ನೀಡಿರುವ ಕೇಂದ್ರ ಮಾಜಿ ಸಚಿವ ಶಶಿ ತರೂರ್ ಕ್ಷಮೆಯಾಚಿಸಬೇಕೆಂದು ಬಿಜೆಪಿ ಪಟ್ಟು ಹಿಡಿದಿದೆ. ಅಲ್ಪಸಂಖ್ಯಾತರ ಹಕ್ಕುಗಳನ್ನು ಗೌರವಿಸದ ಪಾಕಿಸ್ತಾನದ ಮಾದರಿಯಲ್ಲಿ ಬಿಜೆಪಿ ಭಾರತದಲ್ಲಿ ಸಂವಿಧಾನದ ಮೂಲ ಆಶಯಗಳನ್ನು ಬೇರ್ಪಡಿಸಿ ಹೊಸ ಸಂವಿಧಾನ ಬರೆಯಲಿದೆ ಎಂದು ಆರೋಪಿಸಿದ್ದಾರೆ. ಬಿಜೆಪಿಯ ಹೊಸ ಸಂವಿಧಾನದಲ್ಲಿ ಮಹಾತ್ಮ ಗಾಂಧೀಜಿ , ಜವಹಾರ್ ಲಾಲ್ ನೆಹರು, ಸರ್ದಾರ್ ಪಟೇಲ್, ಮೌಲಾನಾ ಅಜಾದ್‍ರ ಆಶಯಗಳಿಗೆ ಬೆಲೆ ಇಲ್ಲದಂತಾಗುತ್ತದೆ ಎಂದು ಅವರು ವಿಷಾದಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಬಿಜೆಪಿ ವಕ್ತಾರ ಸಂಬೀತ್ ಪಾತ್ರ, ಕಾಂಗ್ರೆಸ್ ಪಾಕಿಸ್ಥಾನದ ಹುಟ್ಟಿಗೆ ಕಾರಣವಾದ ಪಕ್ಷ . ಅದೀಗ ಭಾರತವನ್ನು ಹಿಮ್ಮೆಟ್ಟಿಸಲು , ಹಿಂದೂಗಳಿಗೆ ಅಪಖ್ಯಾತಿ ತರಲು ಮುಂದಾಗಿದೆ ಎಂದು ಕಿಡಿಕಾರಿದ್ದಾರೆ. ಶಶಿ ತರೂರ್ ಅವರ ವಿವಾದಿತ ಹೇಳಿಕೆ ಕುರಿತು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಕೂಡ ಕ್ಷಮೆ ಯಾಚಿಸಬೇಕೆಂದು ಬಿಜೆಪಿ ಪಟ್ಟು ಹಿಡಿದಿದೆ.