ಬೆಂಗಳೂರು, ಜು.12-ರಾಜ್ಯ ವಿಶ್ವವಿದ್ಯಾನಿಲಯಗಳಲ್ಲಿ ಏಕರೂಪ ಪಠ್ಯಕ್ರಮ, ಖಾಲಿ ಹುದ್ದೆಗಳ ಭರ್ತಿ, ಎಲ್ಲ ವಿವಿಗಳಲ್ಲಿ ಕೌಶಲ್ಯಾಭಿವೃದ್ಧಿ ತರಬೇತಿ ಕೋರ್ಸ್‍ಗಳ ಆರಂಭ ಸೇರಿದಂತೆ ವಿವಿಧ ಕ್ರಮಗಳನ್ನು ಆದಷ್ಟು ಶೀಘ್ರ ಕೈಗೊಳ್ಳಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ವಿಧಾನಪರಿಷತ್‍ಗೆ ತಿಳಿಸಿದರು.
ಪ್ರಶ್ನೋತ್ತರ ಕಲಾಪದಲ್ಲಿ ಆರ್.ಪ್ರಸನ್ನಕುಮಾರ್ ಅವರ ಪರವಾಗಿ ಐವಾನ್ ಡಿಸೋಜಾ ಅವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಖಾಸಗಿ ವಿವಿಗಳನ್ನು ಹೊರತುಪಡಿಸಿ ರಾಜ್ಯದ 19 ವಿವಿಗಳಲ್ಲಿ ರಾಜ್ಯಪಾಲರ ಅನುಮೋದನೆಯೊಂದಿಗೆ ಪಠ್ಯಕ್ರಮಗಳನ್ನು ಅಳವಡಿಸಿಕೊಳ್ಳಲಾಗುತ್ತಿದೆ. ಪ್ರಸ್ತುತ ಏಕರೂಪ ಪಠ್ಯಕ್ರಮ ಜಾರಿಗೆ ತರುವ ಪ್ರಸ್ತಾವನೆ ಪರಿಶೀಲನೆಯಲ್ಲಿರುವುದಿಲ್ಲ. ಆದರೆ ಬೇರೆ ಬೇರೆ ಸಿಲಬಸ್‍ನಿಂದ ವಿದ್ಯಾರ್ಥಿಗಳೀಗೆ ತೊಂದರೆಯಾಗುತ್ತಿದೆ ಎಂಬ ಹಿನ್ನೆಲೆಯಲ್ಲಿ ಅಧಿಕಾರಿಗಳು ಹಾಗೂ ಶಿಕ್ಷಕರು ಪದವೀಧರ ಕ್ಷೇತ್ರದಿಂದ ಆಯ್ಕೆಯಾದ ಸದಸ್ಯರೊಂದಿಗೆ ಚರ್ಚಿಸಿ ಕ್ರಮಕೈಗೊಳ್ಳುವ ಬಗ್ಗೆ ಚಿಂತನೆ ನಡೆಸಲಾಗುವುದು ಎಂದು ಹೇಳಿದರು.
ಉನ್ನತ ಶಿಕ್ಷಣ ಇಲಾಖೆ ವ್ಯಾಪ್ತಿಯ ವಿಶ್ವವಿದ್ಯಾನಿಲಯಗಳಲ್ಲಿ ಮಂಜೂರಾದ 3934 ಬೋಧಕ ಸಿಬ್ಬಂದಿಯಲ್ಲಿ 1799 ಹುದ್ದೆಗಳುಖಾಲಿ ಇವೆ. ಅದೇ ರೀತಿ 7838 ಮಂಜೂರಾದ ಬೋಧಕೇತರ ಹುದ್ದೆಗಳ ಪೈಕಿ 4202 ಹುದ್ದೆಗಳು ಖಾಲಿ ಇದ್ದು, ಇವುಗಳನ್ನು ಭರ್ತಿ ಮಾಡುವ ಬಗ್ಗೆ ಕ್ರಮಕೈಗೊಳ್ಳಲಾಗುವುದು ಎಂದು ಸಚಿವರು ತಿಳಿಸಿದರು.
ವಿಶ್ವವಿದ್ಯಾನಿಲಯ ಧನಸಹಾಯ ಆಯೋಗದ ಮಾರ್ಗಸೂಚಿ ಅನುಸಾರ ಆಯಾ ವಿವಿಗಳಲ್ಲಿ ನಿಯಮ ರಚಿಸಿ ರಾಜ್ಯಪಾಲರ ಅನುಮೋದನೆ ಪಡೆದು ಪಿಎಚ್‍ಡಿ ನಿಯಮಗಳಿಗನುಸಾರ ವಿವಿಧ ವಿಷಯಗಳಲ್ಲಿನ ಪಿಎಚ್‍ಡಿ ಪದವಿಗೆ ಆಯ್ಕೆ ಪ್ರಕ್ರಿಯೆ ನಡೆಸಲಾಗುತ್ತದೆ. ವಿವಿ ಧನಸಹಾಯ ಆಯೋಗದ ಮಾನ್ಯತೆ ಇರುವ ವಿವಿಗಳಿಂದ ಪಡೆದ ಸ್ನಾತಕೋತ್ತರ ಪದವಿಯಲ್ಲಿ ಶೇ.55ಕ್ಕಿಂತ ಹೆಚ್ಚಿನ ಅಂಕಗಳನ್ನು ಪಡೆದವರು ಪಿಎಚ್‍ಡಿಗೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಎಸ್ಸಿ-ಎಸ್ಟಿ ಮತ್ತು ವಿಕಲಚೇತನರು ಶೇ.50 ಅಂಕಗಳನ್ನು ಪಡೆದಿರಬೇಕು ಎಂದು ಹೇಳಿದರು.