ಪುಣೆ (ಮಹಾರಾಷ್ಟ್ರ): ಅತೀ ಉದ್ದನೆಯ ಉಗುರುಗಳನ್ನು ಬೆಳೆಸಿ ಗಿನ್ನಿಸ್ ದಾಖಲೆ ಬರೆದಿದ್ದ ಭಾರತೀಯ ಮೂಲದ ಪ್ರಜೆ ಶ್ರೀಧರ್ ಚಿಲ್ಲಾಲ್ ಅವರು 66 ವರ್ಷಗಳ ಬಳಿಕ ತಮ್ಮ ಉಗುರುಗಳನ್ನು ಕತ್ತರಿಸಿದ್ದಾರೆ.
ಮಹಾರಾಷ್ಟ್ರ ರಾಜ್ಯದ ಪುಣೆ ಮೂಲದವರಾಗಿದ್ದ ಶ್ರೀಧರ್ ಚಿಲ್ಲಾಲ್ ಅವರು ತಮ್ಮ ಉದ್ದದ ಕೈ ಉಗುರುಗಳಿಂದಲೇ ಗಿನ್ನಿಸ್ ದಾಖಲೆ ಬರೆದಿದ್ದರು.
ತಮ್ಮ ಎಡಗೈ ಬೆರಳುಗಳ ಉಗುರುಗಳನ್ನು ಐದಾರು ಅಡಿಗಳಷ್ಟು ಉದ್ದ ಬೆಳೆಸಿದ್ದ ಶ್ರೀಧರ್ ಅವರು, 2015ರಲ್ಲಿ ದಾಖಲೆ ಬರೆದಿದ್ದರು. 16ನೇ ವಯಸ್ಸಿನಲ್ಲಿ ಉಗುರು ಕತ್ತರಿಸುವುದನ್ನು ನಿಲ್ಲಿಸಿದ್ದ ಚಿಲ್ಲಾಲ್, 66 ವರ್ಷಗಳಷ್ಟು ಹಳೆಯದಾದ ಉಗುರುಗಳನ್ನು ನಿನ್ನೆ ಕತ್ತರಿಸಿದ್ದಾರೆ.
ನ್ಯೂಯಾರ್ಕ್ ಟೈಮ್ಸ್ ಸ್ಕ್ವೇರ್’ನಲ್ಲಿರುವ ‘ದ ರಿಪ್ಲೀಸ್ ಬಿಲೀವ್ ಇಟ್ ಆರ್ ನಾಟ್’ ಮ್ಯೂಸಿಯಮ್ ನಲ್ಲಿ ಚಿಲ್ಲಾಲ್ ಅವರು ತಮ್ಮ ಉಗುರುಗಳನ್ನು ಕತ್ತರಿಸಿಕೊಂಡರು.
ಚಿಲ್ಲಾಲ್ ಅವರ ಉಗುರುಗಳ ಒಟ್ಟು ಉದ್ದ 909.6 ಸೆಂ.ಮೀ ಗಳಷ್ಟಿದ್ದು, ಈ ಪೈಕಿ ಹೆಬ್ಬೆರಳಿನ ಉಗುರು ಅತೀ ಉದ್ದವಾಗಿದೆ. ಹೆಬ್ಬೆರಳಿನ ಉಗುರು 197.8 ಸೆಂ.ಮೀಗಳಷ್ಟಿದೆ.
ಗಿನ್ನಿಸ್ ದಾಖಲೆ ಬರೆದಿರುವ ಈ ಉಗುರುಗಳು ಮ್ಯೂಸಿಯಮ್’ನಲ್ಲಿ ಅಮರವಾಗಿರಬೇಕೆಂಬ ಉದ್ದೇಶದಿಂದ ಚಿಲ್ಲಾಲ್ ಅವರನ್ನು ಅಮೆರಿಕ ಆಹ್ವಾನಿಸಿತ್ತು. ಈ ಆಮಂತ್ರಣವನ್ನು ಸ್ವೀಕರಿಸಿದ್ದ ಚಿಲ್ಲಾಲ್ ಅವರು ಉಗುರುಗಳನ್ನು ಕತ್ತರಿಸಿ ಮ್ಯೂಸಿಯಮ್’ಗೆ ನೀಡಿದ್ದಾರೆ.