
ಬೆಂಗಳೂರು,ಜು.12- ಮುಖ್ಯಮಂತ್ರಿ ಎಚ್.ಡಿ. ಕುಮಾರ ಸ್ವಾಮಿಯವರ ಮಾತು ಕೇಳಿ ಮಹಿಳೆಯರು ಗರ್ಭಿಣಿಯಾಗಿದ್ದರೆ ಬೀದಿಗೆ ಬರುತ್ತಿದ್ದರು ಎಂದು ಬಿಜೆಪಿ ಸದಸ್ಯ ಆಯನೂರು ಮಂಜುನಾಥ್ ವಿಧಾನಪರಿಷತ್‍ನಲ್ಲಿ ಹೇಳಿದ ಮಾತು, ಆಡಳಿತ ಮತ್ತು ಪ್ರತಿ ಪಕ್ಷಗಳ ಸದಸ್ಯರ ನಡುವೆ ಮಾತಿನ ಚಕಮಕಿಗೆ ಕಾರಣವಾಯಿತು. ಪರಸ್ಪರ ಆರೋಪ-ಪ್ರತ್ಯಾರೋಪ ವಾಗ್ವಾದಕ್ಕೆ ಎಡೆ ಮಾಡಿಕೊಟ್ಟಿತು.
ಗರ್ಭಿಣಿಯರಿಗೆ ಆರು ಸಾವಿರ ರೂ. ಮಾಸಾಶನ ನೀಡುವುದಾಗಿ ಮಾತು ಕೊಟ್ಟಿದ್ದ ಮುಖ್ಯಮಂತ್ರಿ ಕುಮಾರಸ್ವಾಮಿ ಮಾತು ತಪ್ಪಿದ್ದಾರೆ. ಅವರ ಮಾತು ಕೇಳಿ ಗರ್ಭಿಣಿಯರಾಗಿದ್ದರೆ ಅವರ ಸ್ಥಿತಿ ಹರೋಹರ ಎಂದು ಆಯನೂರು ಮಂಜುನಾಥ್ ಟೀಕಿಸಿದರು.
ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಆಡಳಿತ ಪಕ್ಷದ ಡಾ.ಜಯಮಾಲ ರಾಮಚಂದ್ರ, ಉಗ್ರಪ್ಪ, ಜಯಮ್ಮ ಬಾಲರಾಜ್, ವೀಣಾ ಅಚ್ಚಯ್ಯ ಮುಂತಾದವರು ಯಾರು ಯಾರನ್ನು ಕೇಳಿ ಗರ್ಭಿಣಿಯರಾಗುವುದಿಲ್ಲ. ನಿಮ್ಮನ್ನು ಹೆರುವಾಗ ನಿಮ್ಮ ತಾಯಿ ನಿಮ್ಮನ್ನು ಕೇಳಿದ್ದರೆ ಎಂದು ತಿರುಗೇಟು ನೀಡಿದರು.
ಒಂದು ಹಂತದಲ್ಲಿ ಉಗ್ರಪ್ಪ ಬಿಜೆಪಿಯವರದು ಮನುವಾದಿಗಳ ಧೋರಣೆ. ಹೆಣ್ಣು ಮಕ್ಕಳಿಗೆ ಎಷ್ಟು ಗೌರವ ಕೊಡುತ್ತಾರೆ ಎಂಬುದು ಇವರ ಈ ಹೇಳಿಕೆಯಿಂದ ಗೊತ್ತಾಗುತ್ತದೆ ಎಂದು ಹೇಳಿದರು.
ಉಗ್ರಪ್ಪನವರ ಮೇಲೆ ಕೋಟಾ ಶ್ರೀನಿವಾಸ್ ಪೂಜಾರಿ, ಅರುಣ್ ಶಹಾಪುರ್ ಮುಂತಾದವರು ಮುಗಿಬಿದ್ದರು. ಮಧ್ಯಪ್ರವೇಶಿಸಿದ ಸಭಾಪತಿ ಸ್ಥಾನದಲ್ಲಿದ್ದ ಕೆ.ಬಿ.ಶಾಣಪ್ಪ ಎಲ್ಲರನ್ನು ಸುಮ್ಮನಿರುವಂತೆ ಹೇಳಿ ಬಜೆಟ್ ಮೇಲಿನ ಚರ್ಚೆ ಮುಗಿಸುವಂತೆ ಆಯನೂರು ಮಂಜುನಾಥ್‍ಗೆ ಸೂಚಿಸಿದರು.
ಈ ಬಜೆಟ್ ಸುಳ್ಳಿನ ಸರಮಾಲೆಯಾಗಿದೆ. ಅಲ್ಪಸಂಖ್ಯಾತರಿಗೆ ಅನ್ಯಾಯವಾಗಿದೆ, ಸಾಲಮನ್ನಾ ಅಪ್ರಮಾಣಿಕವಾಗಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.