ಹೊಸ ಪೌರ ಕಾರ್ಮಿಕರನ್ನು ಕೈ ಬಿಡದಂತೆ ಬಿಬಿಎಂಪಿ ಸದಸ್ಯರ ಒತ್ತಾಯ

 

ಬೆಂಗಳೂರು, ಜು.12- ಪೌರ ಕಾರ್ಮಿಕರ ವೇತನ ಬಿಡುಗಡೆ ಹಾಗೂ ವೇತನ ಬಿಡುಗಡೆಯಲ್ಲಿನ ಲೋಪದೋಷ ಮತ್ತು ಹೊಸದಾಗಿ ನೇಮಕಗೊಂಡಿರುವ 3341 ಪೌರ ಕಾರ್ಮಿಕರನ್ನು ಕೈ ಬಿಡಬಾರದು ಎಂಬುದರ ಬಗ್ಗೆ ಪಾಲಿಕೆ ಸಭೆಯಲ್ಲಿಂದು ಗಂಭೀರ ಚರ್ಚೆ ನಡೆಯಿತು.
ಸಭೆ ಪ್ರಾರಂಭವಾಗುತ್ತಿದ್ದಂತೆ ಆಡಳಿತ ಪಕ್ಷದ ನಾಯಕ ಎಂ.ಶಿವರಾಜ್ ವಿಷಯ ಪ್ರಸ್ತಾಪಿಸಿ ಪ್ರತಿ ತಿಂಗಳು ಪೌರ ಕಾರ್ಮಿಕರ ವೇತನಕ್ಕಾಗಿ 27 ಕೋಟಿ ಹಣ ಬಿಡುಗಡೆ ಮಾಡಲಾಗುತ್ತಿದೆ. ಆದರೂ ಬಹಳಷ್ಟು ಮಂದಿಗೆ ತಲುಪುತ್ತಿಲ್ಲ. ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಕ್ರಮ ತೆಗೆದುಕೊಳ್ಳಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಮೇಯರ್ ಸಂಪತ್‍ರಾಜ್ ಮಾತನಾಡಿ, ಕಳೆದ ಎರಡು ದಿನಗಳ ಹಿಂದೆ ಪೌರ ಕಾರ್ಮಿಕ ಸುಬ್ರಹ್ಮಣ್ಯ ಮೃತಪಟ್ಟ ಬಗ್ಗೆ ಎಸಿಬಿ ತನಿಖೆ ನಡೆಸಲು ಸರ್ಕಾರ ನಿರ್ಧರಿಸಿದೆ. ಇದನ್ನು ಉಪಮುಖ್ಯಮಂತ್ರಿಗಳು ತಿಳಿಸಿದ್ದಾರೆ. ಕೂಡಲೇ ಈ ಕುರಿತು ವರದಿ ನೀಡಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಸಭೆಗೆ ಉತ್ತರ: ಮುಖ್ಯ ಲೆಕ್ಕಾಧಿಕಾರಿ ಮಹದೇವ್ ಪೌರ ಕಾರ್ಮಿಕರ ವೇತನ ಕುರಿತು ಸಭೆಗೆ ಉತ್ತರಿಸಿ, 15,480 ಪೌರ ಕಾರ್ಮಿಕರು ಖಾಯಂ ಆಗಿ ಕೆಲಸ ಮಾಡುತ್ತಿದ್ದಾರೆ. ಪ್ರತಿ ತಿಂಗಳು 27.1 ಕೋಟಿ ಹಣ ಬಿಡುಗಡೆ ಮಾಡಲಾಗುತ್ತಿದೆ. ಜೂನ್ ತಿಂಗಳವರೆಗೂ ವೇತನ ಕೊಡಲಾಗಿದೆ. ಜನವರಿಯಿಂದ ಜೂನ್‍ತನಕ 163 ಕೋಟಿ ಹಣ ಬಿಡುಗಡೆ ಮಾಡಲಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಧ್ಯ ಪ್ರವೇಶಿಸಿದ ಪ್ರತಿಪಕ್ಷದ ನಾಯಕ ಪದ್ಮನಾಭರೆಡ್ಡಿ, ಜನಪ್ರತಿನಿಧಿಗಳು ಹೇಳಿದ್ದನ್ನು ಅಧಿಕಾರಿಗಳು ಅಭಿವೃದ್ಧಿಪಡಿಸಿಕೊಂಡು ಹೋಗಬೇಕು. ಆದರೆ ಅವರು ಯಾವುದೇ ಕೆಲಸ ಮಾಡುವುದಿಲ್ಲ. ಪಾಲಿಕೆಯಿಂದ ಹಣ ಬಿಡುಗಡೆಯಾದರೂ ಅಧಿಕಾರಿಗಳು ಸರಿಯಾಗಿ ನೀಡಿಲ್ಲ ಎಂದು ಕಿಡಿಕಾರಿದರು.
ಆಡಳಿತ ದಾರಿ ತಪ್ಪಿದಾಗ ಮೇಯರ್ ರಾಜೀನಾಮೆ ಕೇಳಬೇಕು. ನಾವು ನಮ್ಮ ಕೆಲಸ ಮಾಡುತ್ತಿದ್ದೇವೆ. ಪೌರ ಕಾರ್ಮಿಕ ಆತ್ಮಹತ್ಯೆ ಮಾಡಿಕೊಂಡಿಲ್ಲ. ಅದೊಂದು ಕೊಲೆ ಎಂದು ಗಂಭೀರ ಆರೋಪ ಮಾಡಿದರು.
ತಕ್ಷಣ ಎಂ.ಶಿವರಾಜ್ ಮಧ್ಯೆ ಮಾತನಾಡಿ, ಕೊಲೆ ಆರೋಪ ಪದವನ್ನು ಹಿಂತೆಗೆದುಕೊಳ್ಳಬೇಕೆಂದು ಒತ್ತಾಯಿಸಿದರು.
ನಂತರ ಮಾತು ಮುಂದುವರಿಸಿದ ಪದ್ಮನಾಭರೆಡ್ಡಿ, ಪೌರ ಕಾರ್ಮಿಕ ಸುಬ್ರಹ್ಮಣ್ಯ ಮೃತಪಟ್ಟ ಬಳಿಕ ಹಣ ಬಿಡುಗಡೆ ಮಾಡಿದ್ದೀರಿ. ಆದರೆ, ಇನ್ನೂ ಪೌರ ಕಾರ್ಮಿಕರಿಗೆ ಹಣ ಸೇರಿಯೇ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮೇಯರ್ ಆದೇಶ: ಪೌರ ಕಾರ್ಮಿಕರ ಎಲ್ಲ ವೇತನ ಕೊಟ್ಟು ಮುಗಿಯುವವರೆಗೂ ನಮಗೆ ವೇತನ ಬೇಡ. ಕಾರ್ಮಿಕರ ಎಲ್ಲ ಹಣ ಕ್ಲಿಯರ್ ಆದ ನಂತರವೇ ನಮಗೆ ವೇತನ ಕೊಡಿ ಎಂದು ಮೇಯರ್ ಅಧಿಕಾರಿಗಳಿಗೆ ಸೂಚಿಸಿದರು.
ಮೇಯರ್ ಸೂಚನೆಗೆ ಮಾಜಿ ಮೇಯರ್ ಕಟ್ಟೆ ಸತ್ಯನಾರಾಯಣ ಧ್ವನಿಗೂಡಿಸಿ ನಮಗಷ್ಟೆ ಅಲ್ಲ, ಅಧಿಕಾರಿಗಳಿಗೂ ವೇತನ ನೀಡದಂತೆ ಸೂಚನೆ ಕೊಡಿ ಎಂದು ಆಗ್ರಹಿಸಿದರು.
ಹೆಚ್ಚುವರಿ ಇರುವ 3341 ಪೌರ ಕಾರ್ಮಿಕರನ್ನು ಯಾವುದೇ ಕಾರಣಕ್ಕೂ ಕೈ ಬಿಡಬಾರದು ಎಂದು ಬಹುತೇಕ ಸದಸ್ಯರು ಸಭೆಯಲ್ಲಿ ಒತ್ತಾಯಿಸಿದರು.
ಆಗ ಆಡಳಿತ ಪಕ್ಷದ ನಾಯಕ ಶಿವರಾಜ್ ಈ ನೌಕರರನ್ನು ಖಾಯಂ ಮಾಡಿದರೆ ಮತ್ತೆ ಹೊಸದಾಗಿ ಹೆಚ್ಚುವರಿಯಾಗಿ ಬರುತ್ತಾರೆ. ಹೀಗೇ ಆದರೆ ಆರ್ಥಿಕ ಅಶಿಸ್ತು ಉಂಟಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ