ಲೋಕ ಚುನಾವಣೆ ತಯಾರಿಗೆ ಅಮಿತ್ ಶಾ ಟಾನಿಕ್

 

ಬೆಂಗಳೂರು,ಜು.12- ಮುಂಬರುವ ಲೋಕಸಭೆ ಚುನಾವಣೆಗೆ ಪಕ್ಷವನ್ನು ಬೇರು ಮಟ್ಟದಿಂದ ಸಂಘಟಿಸುವುದು, ನಾಯಕರ ನಡುವೆ ಸಮನ್ವಯ ಮೂಡಿಸಿ ಅಭ್ಯರ್ಥಿಗಳ ಆಯ್ಕೆ ಸೇರಿದಂತೆ ಹಲವು ವಿಷಯಗಳ ಬಗ್ಗೆ ಚರ್ಚಿಸಲು ಇದೇ 28ರಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ರಾಜ್ಯಕ್ಕೆ ಭೇಟಿ ನೀಡಲಿದ್ದಾರೆ.
ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ನಡೆದ ಬಳಿಕ ಅಮಿತ್ ಷಾ ಬೆಂಗಳೂರಿಗೆ ಆಗಮಿಸುತ್ತಿರುವುದು ಇದೇ ಮೊದಲು. ಚುನಾವಣೆಗೂ ಮುನ್ನ ರಾಜ್ಯದ ಉದ್ದಗಲಕ್ಕೂ ಸಂಚರಿಸಿದ್ದರು.
ಸರ್ಕಾರ ರಚನೆ ಮಾಡುವಷ್ಟು ಪಕ್ಷ ಸ್ಥಾನ ಗಳಿಸದಿದ್ದರೂ ಬಿಜೆಪಿ 104 ಸ್ಥಾನ ಬರುವುದರಲ್ಲಿ ಬಿಜೆಪಿ ಚುನಾವಣಾ ಚಾಣುಕ್ಯನ ಕಾರ್ಯತಂತ್ರ ಫಲ ನೀಡಿತ್ತು. ಹಲವು ಹೊಸ ಪ್ರಯೋಗಗಳ ಮೂಲಕ ವಿಧಾನಸಭೆ ಚುನಾವಣೆ ನಡೆಸಿದ್ದ ಅಮಿತ್ ಷಾ ಈಗ ಲೋಕಸಭೆ ಚುನಾವಣೆಗೂ ಹೊಸ ಪ್ರಯೋಗಗಳನ್ನು ನಡೆಸಲಿದ್ದಾರೆ.
28ಕ್ಕೆ ಬೆಂಗಳೂರಿಗೆ:
ಇದೇ 28ರಂದು ಬೆಂಗಳೂರಿಗೆ ಭೇಟಿ ನೀಡಲಿರುವ ಅಮಿತ್ ಷಾ ಮುಂಬರುವ ಲೋಕಸಭೆ ಚುನಾವಣೆಗೆ ಪಕ್ಷದ ಸ್ಥಿತಿಗತಿ ಕೈಗೊಳ್ಳಬೇಕಾದ ಕಾರ್ಯತಂತ್ರಗಳು, ಕಾಂಗ್ರೆಸ್-ಜೆಡಿಎಸ್ ದೋಸ್ತಿ ಸರ್ಕಾರದ ವೈಫಲ್ಯಗಳು ಹಾಗೂ ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಸಾಧನೆಗಳನ್ನು ಜನರಿಗೆ ಮನವರಿಕೆ ಮಾಡಿಕೊಡುವಂತೆ ಸ್ಥಳೀಯ ನಾಯಕರಿಗೆ ಸೂಚಿಸಲಿದ್ದಾರೆ.
28 ಕ್ಷೇತ್ರಗಳಲ್ಲಿ ಕನಿಷ್ಟ 20 ಕ್ಷೇತ್ರಗಳನ್ನು ಗೆಲ್ಲಲೇಬೇಕೆಂದು ಪಣ ತೊಟ್ಟಿರುವ ಅಮಿತ್ ಷಾ ಅಭ್ಯರ್ಥಿಗಳ ಆಯ್ಕೆ ಸಂಬಂಧ ಸ್ಥಳೀಯ ನಾಯಕರ ಜೊತೆ ಮಾಹಿತಿ ಪಡೆಯಲಿದ್ದಾರೆ.
2014ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಆಡಳಿತದ್ದಲ್ಲಿದ್ದರೂ ರಾಜ್ಯದಿಂದ 17 ಸಂಸದರು ಬಿಜೆಪಿಯಿಂದ ಆಯ್ಕೆಯಾಗಿದ್ದರು. ಈಗ ರಾಜ್ಯದಿಂದ ಇದೇ ಫಲಿತಾಂಶವನ್ನು ರಾಷ್ಟ್ರೀಯ ನಾಯಕರು ಎದುರು ನೋಡುತ್ತಿದ್ದಾರೆ.
ಸದ್ಯಕ್ಕೆ ಬಿಜೆಪಿಯಲ್ಲಿ ಯಾವುದೇ ಬಣ ರಾಜಕೀಯ ಇಲ್ಲದಿರುವುದು ವರಿಷ್ಠರ ತಲೆ ಭಾರವನ್ನು ಕಡಿಮೆ ಮಾಡಿದೆ. ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ , ಪಕ್ಷದ ಹಿರಿಯರಾದ ಕೆ.ಎಸ್.ಈಶ್ವರಪ್ಪ ಸೇರಿದಂತೆ ಎಲ್ಲ ನಾಯಕರು ಒಗ್ಗಟ್ಟಿನಿಂದ ಮುನ್ನುಗ್ಗುತ್ತಿರುವುದು ಹಾಗೂ ಉಭಯ ಮಂಡಲದಲ್ಲಿ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳುವುದರಲ್ಲಿ ಹಿಂದೆಮುಂದೆ ನೋಡದೆ ಹೋರಾಟ ಮಾಡುತ್ತಿರುವುದಕ್ಕೆ ರಾಷ್ಟ್ರೀಯ ನಾಯಕರು ತೃಪ್ತಿ ವ್ಯಕ್ತಪಡಿಸುತ್ತಿದ್ದಾರೆ.
ಯಡಿಯೂರಪ್ಪ ಭವಿಷ್ಯವೂ ನಿರ್ಧಾರ:
ಇನ್ನು ಅಮಿತ್ ಷಾ ಆಗಮನದ ಸಂದರ್ಭದಲ್ಲಿ ಯಡಿಯೂರಪ್ಪನವರ ಸ್ಥಾನಮಾನದ ಬಗ್ಗೆ ಉಂಟಾಗಿರುವ ಗೊಂದಲವನ್ನು ನಿವಾರಣೆ ಮಾಡಲಿದ್ದಾರೆ. ಪಕ್ಷದ ಸಂವಿಧಾನದ ಪ್ರಕಾರ ಒಬ್ಬ ವ್ಯಕ್ತಿಗೆ ಒಂದೇ ಹುದ್ದೆ ಎನ್ನುವಂತೆ ಬಿಎಸ್‍ವೈಗೆ ಅಧ್ಯಕ್ಷ ಸ್ಥಾನದಲ್ಲಿ ಮುಂದುವರೆಸಬೇಕೇ ಬೇಡವೇ ಎಂಬುದು ತೀರ್ಮಾನವಾಗಲಿದೆ.
ಯಡಿಯೂರಪ್ಪನವರು ವಿಧಾನಸಭೆಯ ಪ್ರತಿಪಕ್ಷದ ನಾಯಕನಾಗಿರುವುದರಿಂದ ರಾಜ್ಯಾಧ್ಯಕ್ಷ ಸ್ಥಾನವನ್ನು ಬೇರೊಬ್ಬರಿಗೆ ನೀಡಬೇಕೆಂಬ ಮಾತು ಪಕ್ಷದ ವಲಯದಲ್ಲಿ ಕೇಳಿಬಂದಿತ್ತು.
ವಿಧಾನಸಭೆಯ ಪ್ರತಿಪಕ್ಷದ ನಾಯಕರಾಗಿರುವುದರಿಂದ ಬಿಎಸ್‍ವೈಗೆ ರಾಜ್ಯಾಧ್ಯಕ್ಷ ಸ್ಥಾನವನ್ನು ನಿಭಾಯಿಸುವುದು ಸಾಧ್ಯವಾಗದ ಕಾರಣ ಅಧ್ಯಕ್ಷ ಸ್ಥಾನಕ್ಕೆ ಸೂಕ್ತರಾದವರನ್ನು ಆಯ್ಕೆ ಮಾಡಬೇಕೆಂಬ ಬೇಡಿಕೆ ಇತ್ತು.
ಸಂಸದೆ ಶೋಭಾ ಕರಂದ್ಲಾಜೆ, ಶಾಸಕರಾದ ಸಿ.ಟಿ.ರವಿ, ಅರವಿಂದ ಲಿಂಬಾವಳಿ ಸೇರಿದಂತೆ ಮತ್ತಿತರ ಪ್ರಮುಖ ಹೆಸರುಗಳು ಅಧ್ಯಕ್ಷ ಸ್ಥಾನಕ್ಕೆ ಕೇಳಿಬಂದಿದ್ದವು.
28ರಂದು ಬೆಂಗಳೂರಿಗೆ ಆಗಮಿಸಲಿರುವ ಅಮಿತ್ ಷಾ ಈ ಗೊಂದಲವನ್ನು ನಿವಾರಿಸುವ ಸಾಧ್ಯತೆ ಇದೆ. ಮೂಲಗಳ ಪ್ರಕಾರ ಲೋಕಸಭೆ ಚುನಾವಣೆವರೆಗೂ ಯಡಿಯೂರಪ್ಪನವರನ್ನೇ ಅಧ್ಯಕ್ಷ ಸ್ಥಾನದಲ್ಲಿ ಮುಂದುವರೆಸುವ ಬಗ್ಗೆ ಕೇಂದ್ರ ನಾಯಕರು ತೀರ್ಮಾನಿಸಿದ್ದಾರೆ ಎನ್ನಲಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ