ನವದೆಹಲಿ,ಜು.11- ಅತ್ಯಾಚಾರ ಪ್ರಕರಣ ಕುರಿತಂತೆ ಐಎಎಸ್ ಅಧಿಕಾರಿಯೊಬ್ಬರು ಮಾಡಿರುವ ಟ್ವೀಟ್ ವಿವಾದಕ್ಕೆಡೆ ಮಾಡಿಕೊಟ್ಟಿದ್ದು , ಇದೀಗ ಅವರ ಸರ್ಕಾರಿ ಕೆಲಸಕ್ಕೂ ಕುತ್ತು ತಂದಿದೆ.
2012ರ ಜಮ್ಮು-ಕಾಶ್ಮೀರ ಬ್ಯಾಚ್ನ ಐಎಎಸ್ ಅಧಿಕಾರಿ ಷಾ ಫೈಸಲ್ ಸಾಮಾಜಿಕ ಜಾಲತಾಣದಲ್ಲಿ ಮಾಡಿರುವ ಟ್ವೀಟ್ ಕುರಿತಂತೆ ತನಿಖೆ ನಡೆಸಿ ವರದಿ ನೀಡಬೇಕೆಂದು ಕೇಂದ್ರ ಸರ್ಕಾರ ಸೂಚನೆ ನೀಡಿದೆ.
ಪಾಪುಲೇಷನ್ + ಪ್ಯಾಟ್ರ್ರೆಚ್ರಿ+ಇಲ್ಲಿಟ್ರೆಸ್ಸಿ+ಹಾಲ್ಕೋಹಾಲ್+ಅನಾರ್ಕಿ=ರೇಪಿಸ್ತಾನ್ ಎಂದು ಟ್ವೀಟ್ ಮಾಡಿದ್ದಾರೆ. ಅವರ ಈ ಟ್ವೀಟ್ಗೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗಿದೆ.
ಕೆಲವರು ಬೆಂಬಲಿಸಿದ್ದರೆ ಇನ್ನು ಕೆಲವರು ತಕ್ಷಣವೇ ಕೇಂದ್ರ ಸರ್ಕಾರ ಇವರನ್ನು ಅಮಾನತು ಮಾಡಬೇಕೆಂದು ಆಗ್ರಹಿಸಿದ್ದಾರೆ. ಕೇಂದ್ರ ಸರ್ಕಾರ ಹೊರಡಿಸಿರುವ ನೂತನ ನಿಯಮಗಳ ಪ್ರಕಾರ ಯಾವುದೇ ಸರ್ಕಾರಿ ಅಧಿಕಾರಿ ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ವಿಷಯದ ಬಗ್ಗೆ ಟೀಕೆ-ಟಿಪ್ಪಣ್ಣಿ ಮಾಡುವಂತಿಲ್ಲ. ಹಾಗೊಂದು ವೇಳೆ ಮಾಡಿದ್ದೇಯಾದರೆ ಅದು ಕಾನೂನಿನ ಪ್ರಕಾರ ಶಿಕ್ಷಾರ್ಹ ಅಪರಾಧ ಎಂದು ಸೂಚನೆ ನೀಡಿತ್ತು.
2012ರಲ್ಲಿ ಜಮ್ಮು-ಕಾಶ್ಮೀರದಿಂದ ಐಎಎಸ್ ಪರೀಕ್ಷೆಯಲ್ಲಿ ಟಾಪರ್ ಆಗಿ ಹೊರಹೊಮ್ಮಿ ಈ ರಾಜ್ಯದ ಮೊದಲ ಐಎಎಸ್ ಅಧಿಕಾರಿ ಎಂಬ ಹೆಗ್ಗಳಿಕೆಗೆ ಷಾ ಫೈಸಲ್ಗೆ ಸಿಕ್ಕಿತ್ತು. ಅಧಿಕೃತ ಕರ್ತವ್ಯವನ್ನು ನಿಭಾಯಿಸುವಲ್ಲಿ ನೀವು ಪ್ರಾಮಾಣಿಕತೆ ಮತ್ತು ವೃತ್ತಿ ನಿಷ್ಠೆಯಲ್ಲಿ ವಿಫಲರಾಗಿದ್ದೀರಿ ಎಂಬ ಆರೋಪವಿದೆ. ಈ ಮೂಲಕ ಸಾರ್ವಜನಿಕರ ಸೇವಕರಾಗಲು ಅರ್ಹರೆನಿಸದ ರೀತಿಯಲ್ಲಿ ವರ್ತಿಸಿದ್ದೀರಿ ಎಂದು ಕೇಂದ್ರ ಸರ್ಕಾರ ನೋಟಿಸ್ ನೀಡಿದೆ.
ಕೇಂದ್ರ ಸಿಬ್ಬಂದಿ ಮತ್ತು ತರಬೇತಿ ಇಲಾಖೆ ನಿಮ್ಮ ವಿರುದ್ಧ ಕ್ರಮ ಕೈಗೊಳ್ಳಲು ನೋಟಿಸ್ ನೀಡಿದೆ. ಈ ನೋಟಿಸ್ಗೆ ಸಮರ್ಪಕ ಉತ್ತರ ನೀಡದಿದ್ದರೆ ನಿಮ್ಮ ವಿರುದ್ಧ ಶಿಸ್ತುಕ್ರಮ ಜರುಗಿಸುವುದಾಗಿ ನೋಟಿಸ್ನಲ್ಲಿ ಎಚ್ಚರಿಸಲಾಗಿದೆ. ದಕ್ಷಿಣ ಏಷ್ಯಾದ ಅತ್ಯಾಚಾರ ಸಂಸ್ಕøತಿ ವಿರುದ್ಧ ಮೇಲಾಧಿಕಾರಿಯಿಂದ ನನಗೆ ನೋಟಿಸ್ ಬಂದಿದೆ. ಸಾಮ್ರಾಜ್ಯಸಾಹಿ ಕಾಲದ ಸೇವಾ ನಿಯಮಗಳನ್ನು ಪ್ರಜಾಪ್ರಭುತ್ವ ಆಡಳಿತದ ಆಧುನಿಕ ಭಾರತದಲ್ಲಿ ನಮಗೆ ಅನ್ವಯಿಸುವ ಮೂಲಕ ನಾವು ಆತ್ಮಪ್ರಜ್ಞೆಯ ಸ್ವತಂತ್ರವನ್ನು ದಮನಿಸಲು ಬಳಸುತ್ತಿರುವುದು ಖಂಡನೀಯ. ನೋಟಿಸ್ಗೆ ನಾನು ಸಮರ್ಪಕವಾದ ಉತ್ತರ ನೀಡುತ್ತೇನೆ ಎಂದು ಫೈಸಲ್ ಹೇಳಿದ್ದಾರೆ.
ಕೇಂದ್ರ ಸರ್ಕಾರ ನೋಟಿಸ್ ನೀಡಿರುವುದಕ್ಕೆ ಜಮ್ಮು-ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಉಮರ್ ಅಬ್ದುಲ್ಲ ತೀವ್ರವಾಗಿ ಖಂಡಿಸಿದ್ದಾರೆ. ದಕ್ಷ ಹಾಗೂ ಪ್ರಾಮಾಣಿಕ ಅಧಿಕಾರಿಯನ್ನು ನಾಗರಿಕ ಸೇವಾ ಕ್ಷೇತ್ರದಿಂದ ಹೊರ ಹಾಕುವ ಹುನ್ನಾರ ಇದಾಗಿದೆ ಎಂದು ಫೈಸಲ್ ಬೆಂಬಲಕ್ಕೆ ನಿಂತಿದ್ದಾರೆ.