ಸಲಿಂಗಕಾಮ… ಸುಪ್ರೀಂನಲ್ಲಿ ಇಂದು ಕೂಡ ವಿಚಾರಣೆ

ಹೊಸದಿಲ್ಲಿ: ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ಪಂಚ ನ್ಯಾಯಮೂರ್ತಿಗಳ ಸಾಂವಿಧಾನಿಕ ಪೀಠ ಮಂಗಳವಾರ ಸಲಿಂಗಕಾಮದ ಸಂಬಂಧದ ಸೆಕ್ಷನ್ 377 ಕಾನೂನನ್ನು ರದ್ದುಗೊಳಿಸಬೇಕೆಂದು ಸಲ್ಲಿಸಿರುವ ಅರ್ಜಿಯನ್ನು ಕೈಗೆತ್ತಿಕೊಂಡಿದ್ದು, ಈ ವಿಚಾರಣೆ ಇಂದೂ ಕೂಡ ನಡೆಯಲಿದೆ.

ಮಂಗಳವಾರ ವಿಚಾರಣೆ ವೇಳೆ ಕೇಂದ್ರ ಸರ್ಕಾರ ಇದಕ್ಕೆ ಸಂಬಂಧಪಟ್ಟಂತೆ ಮಾಹಿತಿ ನೀಡಲು ನಾಲ್ಕು ವಾರಗಳ ಕಾಲಾವಕಾಶ ಕೋರಿತ್ತು. ಆದರೆ ಕೇಂದ್ರದ ಮನವಿಯನ್ನು ಸುಪ್ರೀಂಕೋರ್ಟ್ ತಳ್ಳಿಹಾಕಿದ್ದು, ವಿಚಾರಣೆ ಇಂದೂ ಮುಂದುವರೆಸಲಿದೆ.

ಮಂಗಳವಾರದ ಮೊದಲ ದಿನದ ವಿಚಾರಣೆಯಲ್ಲಿ ದೀಪಕ್ ಮಿಶ್ರಾ ನೇತೃತ್ವದ ಪೀಠ ಸೆಕ್ಷನ್ 377 ಕುರಿತಾಗಿ ಇರುವ ಗೊಂದಲಗಳನ್ನು ಅತ್ಯಂತ ಸೂಕ್ಷ್ಮವಾಗಿ ಗಮನಿಸಿದ್ದು, ದಿನಪೂರ್ತಿ ನಡೆದ ವಿಚಾರಣೆಯಲ್ಲಿ ಎಲ್ಲಾ ಅಡೆತಡೆಗಳನ್ನು ಸ್ಪಷ್ಟವಾಗಿ ಆಲಿಸಿದೆ.

ವಿಚಾರಣೆಯ ಹಿನ್ನಲೆ:
ಐಪಿಸಿ ಸೆಕ್ಷನ್ 377 ಪ್ರಕಾರ ಸಲಿಂಗ ಕಾಮ ಅಪರಾಧವೆಂದು ಉಲ್ಲೇಖಿಸಲಾಗಿದ್ದು, ಇದನ್ನು ತೆಗೆದುಹಾಕುವಂತೆ ಅರ್ಜಿಯಲ್ಲಿ ಮನವಿ ಮಾಡಲಾಗಿದೆ.

ಈ ವರ್ಷ ಎಪ್ರಿಲ್ 27 ರಂದು ಹಮ್ಸಫರ್ ಟ್ರಸ್ಟಿನ ಅಶೋಕ್ ರಾವ್ ಕವಿ ಮತ್ತು ಆರಿಫ್ ಜಾಫರ್ ಸೆಕ್ಷನ್ 377 ನ್ನು ವಿರೋಧಿಸಿ ಅರ್ಜಿ ಸಲ್ಲಿಸಿದ್ದರು.

2009 ರಲ್ಲಿ ದೆಹಲಿ ಹೈಕೋರ್ಟ್ ಸೆಕ್ಷನ್ 377 ನ್ನು ದೋಷಾರೋಪಣೆ ಮಾಡಿತ್ತು. ಆದರೆ ಈ ಆದೇಶವನ್ನು ಸುಪ್ರೀಂಕೋರ್ಟ್ ಅಂಗೀಕರಿಸಿರಲಿಲ್ಲ.

ಸಲಿಂಗ ವ್ಯಕ್ತಿಗಳ ನಡುವಿನ ಒಮ್ಮತದ ಲೈಂಗಿಕ ಸಂಭೋಗವನ್ನು ಭಾರತೀಯ ದಂಡ ಸಂಹಿತೆಯ (ಐಪಿಸಿ) ವಿಭಾಗ 377 ರ ಅಡಿಯಲ್ಲಿ ‘ಅಸ್ವಾಭಾವಿಕ ಲೈಂಗಿಕ ಕ್ರಿಯೆ’ ಎಂದು ಹೇಳಲಾಗಿದೆ ಮತ್ತು ಈ ಅಪರಾಧಕ್ಕೆ ಜೀವಾವಧಿ ಶಿಕ್ಷೆ ಅಥವಾ ದಂಡ ವಿಧಿಸುವ ಸಾಧ್ಯತೆ ಕಾನೂನಿನಲ್ಲಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ