ಬೆಂಗಳೂರು: ಸಾಫ್ಟ್ ವೇರ್ ಎಂಜಿನಿಯರ್ ಮತ್ತು ಆತನ ಪತ್ನಿ ತಮ್ಮ ಅಪಾರ್ಟ್ ಮೆಂಟ್ನ ಸ್ನಾನದ ಕೋಣೆಯಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ರಾಜರಾಜೇಶ್ವರಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಪಟ್ಟಣಗೆರೆಯಲ್ಲಿ ನಡೆದಿದೆ.
ಪಟ್ಟಣಗೆರೆಯಲ್ಲಿರುವ ಶಿವಗಂಗಾ ಅಪಾರ್ಟ್ ಮೆಂಟ್ನಲ್ಲಿ ನಿನ್ನೆ ಮಧ್ಯಾಹ್ನ 3 ಗಂಟೆ ವೇಳೆಗೆ ಈ ಘಟನೆ ಬೆಳಕಿಗೆ ಬಂದಿದೆ. ಸಾಫ್ಟ್ವೇರ್ ಕಂಪನಿ ಉದ್ಯೋಗಿ ಮಹೇಶ್ (35) ಹಾಗೂ ಅವರ ಪತ್ನಿ ಶೀಲಾ (30) ಮೃತ ದಂಪತಿ. ಮೃತರು ಅಥಣಿ ಮೂಲದವರು ಎಂದು ಪೊಲೀಸರು ತಿಳಿಸಿದ್ದಾರೆ.
ಸ್ನಾನದ ಕೋಣೆಯಲ್ಲಿದ್ದ ಗ್ಯಾಸ್ ಗೀಸರ್ ನಿಂದ ಕಾರ್ಬನ್ ಮೋನಾಕ್ಸೈಡ್ ಹೆಚ್ಚಿನ ಪ್ರಮಾಣದಲ್ಲಿ ಸೋರಿಕೆಯಾಗಿ ಉಸಿರುಗಟ್ಟಿ ಸ್ನಾನಕ್ಕೆ ಹೋಗಿದ್ದ ಇಬ್ಬರೂ ಮೃತಪಟ್ಟಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಮೃತದೇಹಗಳನ್ನು ವಿಕ್ಟೋರಿಯಾ ಆಸ್ಪತ್ರೆಗೆ ಸಾಗಿಸಲಾಗಿದ್ದು ಮರಣೋತ್ತರ ಪರೀಕ್ಷೆ ನಂತರ ನಿಜವಾದ ಕಾರಣ ತಿಳಿದುಬರಲಿದೆ.
ಮಹೇಶ್ ಮತ್ತು ಶೀಲಾ ದಂಪತಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಇಬ್ಬರನ್ನೂ ಶಾಲೆಗೆ ಕಳುಹಿಸಿದ ನಂತರ ದಂಪತಿ ಸ್ನಾನಕ್ಕೆಂದು ತೆರಳಿದ್ದರು. ಮಕ್ಕಳು ಶಾಲೆ ಮುಗಿಸಿಕೊಂಡು ಮಧ್ಯಾಹ್ನ 2.30 ರ ಸುಮಾರಿಗೆ ಅಪಾರ್ಟ್ ಮೆಂಟ್ ಗೆ ವಾಪಸಾಗಿದ್ದಾರೆ. ಆದರೆ ಒಳಗಿದ್ದ ತಂದೆ ತಾಯಿ ಬಾಗಿಲು ತೆರೆಯದ ಹಿನ್ನೆಲೆಯಲ್ಲಿ ಅದೇ ಅಪಾರ್ಟ್ ಮೆಂಟ್ ನಲ್ಲಿದ್ದ ಸಂಬಂಧಿಗಳ ಮನೆಗೆ ಹೋಗಿದ್ದಾರೆ. ದಂಪತಿಗೆ ಫೋನ್ ಮಾಡಿದರೂ, ಬಾಗಿಲು ತಟ್ಟಿದರೂ ಒಳಗಿನಿಂದ ಯಾವುದೇ ಪ್ರತಿಕ್ರಿಯೆ ಬರದಿದ್ದಾಗ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದು ಮನೆ ಬಾಗಿಲು ಮುರಿದು ಒಳ ಪ್ರವೇಶಿಸಿದಾಗ ಸ್ನಾನದ ಕೋಣೆಯಲ್ಲಿ ದಂಪತಿ ಮೃತದೇಹಗಳು ಪತ್ತೆಯಾದವು ಎಂದು ಪೊಲೀಸರು ತಿಳಿಸಿದ್ದಾರೆ.
ದಂಪತಿ ಗ್ಯಾಸ್ ಗೀಸರ್ ಅನ್ನು ಬಳಸುತ್ತಿದ್ದರು. ಗ್ಯಾಸ್ ಗೀಸರ್ನಲ್ಲಿ ನೀರು ಬಿಸಿಯಾಗುವಾಗ ಕಾರ್ಬನ್ ಮೋನಾಕ್ಸೈಡ್ ಬಿಡುಗಡೆಯಾಗುತ್ತದೆ. ಗೀಸರ್ ನ ಗುಣಮಟ್ಟ ಸರಿಯಿಲ್ಲದಿರುವುದರಿಂದ ಹೆಚ್ಚಿನ ಪ್ರಮಾಣದಲ್ಲಿ ಕಾರ್ಬನ್ ಮೋನಾಕ್ಸೈಡ್ ಬಿಡುಗಡೆಯಾಗಿದೆ. ಈ ವೇಳೆ ಸ್ನಾನ ಮಾಡುತ್ತಿದ್ದವರು ಪ್ರಜ್ಞೆ ಕಳೆದುಕೊಂಡಿದ್ದಾರೆ. ಇಡೀ ಸ್ನಾನದ ಕೋಣೆ ಗ್ಯಾಸ್ ಚೇಂಬರ್ ನಂತಾದ ಕಾರಣದಿಂದ ಉಸಿರುಗಟ್ಟಿ ದಂಪತಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಘಟನೆ ಸಂಬಂಧ ರಾಜರಾಜೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.