ನವದೆಹಲಿ,ಜು.11- ಅಪ್ರಾಪ್ತ ಮಕ್ಕಳ ಮೇಲೆ ಅತ್ಯಾಚಾರ ನಡೆಸುವ ಕಾಮುಕರಿಗೆ ಮರಣದಂಡನೆ ಶಿಕ್ಷೆ ವಿಧಿಸುವಂತಹ ಕಠಿಣ ಕಾನೂನು ಸದ್ಯದಲ್ಲೇ ಜಾರಿಯಾಗಲಿದೆ.
ಇದೇ 18ರಂದು ಸಂಸತ್ನ ಚಳಿಗಾಲ ಅಧಿವೇಶನ ಪ್ರಾರಂಭವಾಗಲಿದ್ದು, ಹಾಲಿ ಇರುವ ಕಾನೂನಿಗೆ ತಿದ್ದುಪಡಿ ಮಾಡಲು ಕೇಂದ್ರ ಸರ್ಕಾರ ಮುಂದಾಗಿದೆ. ಇನ್ನು ಮುಂದೆ ಅಪ್ರಾಪ್ತರ ಮೇಲೆ ಅತ್ಯಾಚಾರ ನಡೆಸಿದರೆ ಅಂಥವರಿಗೆ ಮರಣದಂಡನೆ ವಿಧಿಸಲು ಕಾನೂನಿನಲ್ಲಿ ಅವಕಾಶವಿರುತ್ತದೆ.
2018ರ ಅಪರಾಧ ಕಾನೂನು ಕಾಯ್ದೆಗೆ ತಿದ್ದುಪಡಿ ಮಾಡಲು ಮುಂದಾಗಿರುವ ಕೇಂದ್ರ ಸರ್ಕಾರ ಅತ್ಯಾಚಾರ ಪ್ರಕರಣಗಳನ್ನು ಮೂರು ತಿಂಗಳೊಳಗೆ ವಿಚಾರಣೆ ನಡೆಸಿ ಶಿಕ್ಷೆ ಪ್ರಕಟಿಸುವಂತೆ ನಿಯಮಗಳನ್ನು ರೂಪಿಸಲಿದೆ.
ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್ ಈಗಾಗಲೇ ಕಾಯ್ದೆ ತಿದ್ದುಪಡಿ ಸಂಬಂಧ ಇಲಾಖೆ ಅಧಿಕಾರಿಗಳ ಜೊತೆ ಮಾತುಕತೆ ನಡೆಸುತ್ತಿದ್ದು, ಪ್ರಸಕ್ತ ಅಧಿವೇಶನದಲ್ಲಿ ಸಂಸತ್ನ ಉಭಯ ಸದನಗಳಾದ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಮಂಡಿಸಿ ಕಾಯ್ದೆಗೆ ಅಂಗೀಕಾರ ಪಡೆಯಲಿದ್ದಾರೆ.
ಈ ಕಾಯ್ದೆ ಜಾರಿಯಾದರೆ ದೇಶಾದ್ಯಂತ ಅತ್ಯಾಚಾರ ಪ್ರಕರಣಗಳನ್ನೇ ಪ್ರತ್ಯೇಕವಾಗಿ ವಿಚಾರಣೆ ನಡೆಸಲು ತ್ವರಿತ ನ್ಯಾಯಾಲಯಗಳು ಆರಂಭವಾಗಲಿವೆ.
ಇತ್ತೀಚೆಗೆ ಜಮ್ಮು-ಕಾಶ್ಮೀರದ ಕತ್ವಾ ಹಾಗೂ ಉತ್ತರಪ್ರದೇಶದ ಉನ್ನಾವೊನಲ್ಲಿ ಇಬ್ಬರು ಅಪ್ರಾಪ್ತೆಯರ ಮೇಲೆ ಅತ್ಯಾಚಾರ ನಡೆಸಿದ್ದು , ದೇಶಾದ್ಯಂತ ದೊಡ್ಡ ವಿವಾದವಾಗಿತ್ತು. ಭವಿಷ್ಯದಲ್ಲಿ ಇಂತಹ ಪ್ರಕರಣಗಳು ಮರುಕಳಿಸಿದರಂತೆ ಹಾಗೂ ಕಾಮುಕರಿಗೆ ತಕ್ಕ ಪಾಠ ಕಲಿಸಲು ಕೇಂದ್ರ ಸರ್ಕಾರ ದೃಢ ಹೆಜ್ಜೆ ಇಟ್ಟಿದೆ.
ಹಾಗೆ ನೋಡಿದರೆ ದೇಶದಲ್ಲಿ ಅತ್ಯಾಚಾರ ಪ್ರಕರಣಗಳಿಗೆ ಮರಣದಂಡನೆ ಶಿಕ್ಷೆ ವಿಧಿಸುವಂತಹ ನಿದರ್ಶನಗಳು ಅಪರೂಪ ಎನ್ನುವಂತಿತ್ತು. 1980ರಲ್ಲಿ ಪಂಜಾಬ್ ಸರ್ಕಾರ ಹಾಗೂ ಬಚನ್ ಸಿಂಗ್ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ನೀಡಿದ ಒಂದು ತೀರ್ಪು ಐತಿಹಾಸಿಕ ಎನ್ನಿಸಿತ್ತು.
ಮರಣದಂಡನೆ ಶಿಕ್ಷೆ ವಿಧಿಸಬೇಕಾದರೆ ಪ್ರಕರಣವು ಅಪರೂಪದಲ್ಲೇ ಅಪರೂಪದ್ದು ಆಗಿರಬೇಕೆಂದು ನ್ಯಾಯಾಲಯ ಅಭಿಪ್ರಾಯಪಟ್ಟಿತ್ತು. ಅತ್ಯಾಚಾರ ಪ್ರಕರಣಗಳು ಹಾಗೂ ಗಂಭೀರ ಸ್ವರೂಪದ ಅಪರಾಧಗಳಿದ್ದರೆ ಆರೋಪಿಗಳಿಗೆ ಮರಣದಂಡನೆ ಶಿಕ್ಷೆಯೇ ಸರಿ ಎಂಬುದು ನ್ಯಾಯಾಲಯದ ವಾದವಾಗಿತ್ತು.
ಈಗ ಕಾನೂನಿಗೆ ತಿದ್ದುಪಡಿ ಮಾಡುತ್ತಿರುವುದರಿಂದ ಇನ್ನು ಮುಂದೆ ಅತ್ಯಾಚಾರ ಪ್ರಕರಣಗಳು ಮೂರು ತಿಂಗಳೊಳಗೆ ತನಿಖೆ ನಡೆಸಿ ಶಿಕ್ಷೆ ಪ್ರಕಟವಾಗಲಿದೆ.
ಸದ್ಯಕ್ಕೆ ವಿಶ್ವದ 10ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ಅತ್ಯಾಚಾರ ಪ್ರಕರಣಗಳಿಗೆ ಮರಣದಂಡನೆ ಶಿಕ್ಷೆ ವಿಧಿಸುವ ಕಾನೂನು ಜಾರಿಯಲ್ಲಿದೆ. ಇರಾನ್, ಅಫ್ಘಾನಿಸ್ತಾನ, ಯುಎಇ, ಈಜಿಪ್ಟ್, ಬಾಂಗ್ಲಾದೇಶ, ಸೌದಿ ಅರೇಬಿಯಾ, ಪಾಕಿಸ್ತಾನ, ಚೀನ ಮತ್ತು ಉತ್ತರ ಕೊರಿಯಾದಲ್ಲಿ ಈ ಕಾನೂನು ಜಾರಿ ಮಾಡಲಾಗಿದೆ.
ಭಾರತದಲ್ಲಿ ಅತ್ಯಾಚಾರ ಪ್ರಕರಣ ಹೆಚ್ಚುತ್ತಲೇ ಇರುವುದು ಆತಂಕಕ್ಕೀಡು ಮಾಡಿದೆ. ಕೇಂದ್ರ ಗೃಹ ಇಲಾಖೆ ಬಿಡುಗಡೆ ಮಾಡಿರುವ ವರದಿಯ ಪ್ರಕಾರ 2012ರಲ್ಲಿ 25 ಸಾವಿರ ಹಾಗೂ 2016ರಲ್ಲಿ 38 ಸಾವಿರ ಅತ್ಯಾಚಾರ ಪ್ರಕರಣಗಳು ನಡೆದಿವೆ.