ಜಪಾನಲ್ಲಿ ಮಳೆ 179 ಜೀವ ಬಲಿ

ಕುರಾಶಿಕಿ, ಜು.11- ಜಪಾನ್‍ನಾದ್ಯಂತ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಸಾವಿರಾರು ಕೋಟಿ ನಷ್ಟ ಸಂಭವಿಸಿದೆ. 179ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದು, ಸಾವಿರಾರು ನಾಗರಿಕರು ಮನೆ-ಮಠ ಕಳೆದುಕೊಂಡು ಬೀದಿ ಪಾಲಾಗಿದ್ದಾರೆ. ಪರಿಸ್ಥಿತಿಯನ್ನು ಗಂಭೀರವಾಗಿ ಪರಿಗಣಿಸಿರುವ ಜಪಾನ್ ಪ್ರಧಾನಮಂತ್ರಿ ಶಿಂಜೊ ಅಬೆ ಅವರು ತಮ್ಮ ನಾಲ್ಕು ದಿನಗಳ ವಿದೇಶಿ ಪ್ರವಾಸವನ್ನು ಮೊಟಕುಗೊಳಿಸಿ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
ಕಳೆದ ಮೂರು ದಶಕಗಳಿಂದ ಈ ಪ್ರಮಾಣದ ಮಳೆಯಾಗಿರಲಿಲ್ಲ. ಇನ್ನೂ ಕೆಲ ದಿನಗಳ ಕಾಲ ಮಳೆರಾಯ ಆರ್ಭಟಿಸಲಿರುವ ಹಿನ್ನೆಲೆಯಲ್ಲಿ ಜನಸಾಮಾನ್ಯರ ರಕ್ಷಣೆಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಅಬೆ ಅಧಿಕಾರಿಗಳಿಗೆ ಆದೇಶಿಸಿದ್ದಾರೆ. ಮಳೆ ಅನಾಹುತಕ್ಕೆ ಈಗಾಗಲೇ 179 ಮಂದಿ ಅಮಾಯಕರು ಪ್ರಾಣ ಕಳೆದುಕೊಂಡಿದ್ದು, ಇನ್ನೂ ನೂರಾರು ಮಂದಿ ಕಣ್ಮರೆಯಾಗಿದ್ದು, ಅವರಿಗಾಗಿ ಹುಡುಕಾಟ ಆರಂಭವಾಗಿದೆ.
ರಕ್ಷಣಾ ಸಿಬ್ಬಂದಿಗಳು ಭೂ ಕುಸಿತ ಉಂಟಾಗಿರುವ ಪ್ರದೇಶಗಳಲ್ಲಿ ಬೀಡು ಬಿಟ್ಟು ಪರಿಹಾರ ಕಾಮಗಾರಿಗಳನ್ನು ಕೈಗೊಂಡಿದ್ದಾರೆ. ಪ್ರವಾಹದಲ್ಲಿ ಸಿಲುಕಿಕೊಂಡಿರುವವರ ರಕ್ಷಣೆಗೂ ಹರಸಾಹಸ ನಡೆಸಲಾಗುತ್ತಿದೆ.
ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದ ಸಾವಿರಾರು ಕುಟುಂಬಗಳು ಬೀದಿ ಪಾಲಾಗಿದ್ದು, 10 ಸಾವಿರಕ್ಕೂ ಹೆಚ್ಚು ಮಂದಿಗೆ ತಾತ್ಕಾಲಿಕ ಶೆಡ್‍ಗಳನ್ನು ನಿರ್ಮಾಣ ಮಾಡಲಾಗಿದೆ. ನಿರಾಶ್ರಿತರಿಗೆ ಸ್ಥಳೀಯ ಶಾಲೆಗಳಲ್ಲಿ ವಸತಿ ಒದಗಿಸಲಾಗಿದ್ದು, ಹೊದಿಕೆ ಇಲ್ಲದೆ ಚಾಪೆ ಮೇಲೆ ರಾತ್ರಿ ಕಳೆಯುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಜಪಾನ್‍ನಾದ್ಯಂತ ಹಳ್ಳ-ಕೊಳ್ಳಗಳು, ನದಿಗಳು ಉಕ್ಕಿ ಹರಿಯುತ್ತಿವೆ. ನೀರಿನ ರಭಸಕ್ಕೆ ಅಕ್ಕಪಕ್ಕದ ಗುಡ್ಡಗಳು, ಕಟ್ಟಡಗಳು ಕೊಚ್ಚಿ ಹೋಗುತ್ತಿವೆ. ನದಿಗಳಲ್ಲಿ ನೀರಿನ ರಭಸ ಕಡಿಮೆಯಾಗದ ಹಿನ್ನೆಲೆಯಲ್ಲಿ ಮತ್ತಷ್ಟು ಅನಾಹುತಗಳು ಸಂಭವಿಸುವ ಸಾಧ್ಯತೆ ಇರುವುದರಿಂದ ಸಾರ್ವಜನಿಕರು ಎಚ್ಚರ ವಹಿಸುವಂತೆ ಜಪಾನ್ ಆಡಳಿತ ಮನವಿ ಮಾಡಿಕೊಳ್ಳುತ್ತಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ