ನಕಲಿ ಡಿಗ್ರಿ: ಕ್ರಿಕೆಟ್ ಆಟಗಾರ್ತಿ ಹರ್ಮನ್ ಪ್ರೀತ್ ಡಿಎಸ್ಪಿ ಹುದ್ದೆ ಹಿಂಪಡೆದ ಪಂಜಾಬ್ ಸರ್ಕಾರ

ಚಂಡೀಗಢ: ನಕಲಿ ಪದವಿ ಪ್ರಮಾಣ ಪತ್ರಗಳನ್ನು ನೀಡಿದ್ದರಿಂದ ಟೀಂ ಇಂಡಿಯಾ ಮಹಿಳಾ ಟಿ20 ಕ್ರಿಕೆಟ್ ತಂಡದ ನಾಯಕಿ ಹರ್ಮನ್ ಪ್ರೀತ್ ಕೌರ್ ಅವರಿಗೆ ಗೌರವಾರ್ಥವಾಗಿ ನೀಡಿದ್ದ ಡಿಎಸ್ಪಿ ಹುದ್ದೆಯನ್ನು ಪಂಜಾಬ್ ಸರ್ಕಾರ ಹಿಂಪಡೆದುಕೊಂಡಿದೆ.
ಹರ್ಮನ್ ಪ್ರೀತ್ ಕೌರ್ ರ ಪದವಿ ಪ್ರಮಾಣ ಪತ್ರಗಳು ನಕಲಿ ಎಂದು ಹೇಳಿರುವ ಪಂಜಾಬ್ ಸರ್ಕಾರ ಈ ತೀರ್ಮಾನಕ್ಕೆ ಬಂದಿದೆ. ಉತ್ತರ ಪ್ರದೇಶದ ಮೀರತ್ ನ ಚೌಧರಿ ಸಿಂಗ್ ವಿವಿಯಲ್ಲಿ 2011ರಲ್ಲಿ ಪದವಿ ಮುಗಿಸಿದ್ದಾಗಿ ಪಡೆದಿದ್ದ ಪ್ರಮಾಣ ಪತ್ರಕ್ಕೆ ಸಂಬಂಧಪಟ್ಟಂತೆ ವಿಶ್ವವಿದ್ಯಾಲಯ ಜತೆ ಪರಿಶೀಲನೆ ನಡೆಸಿದಾಗ ಡಿಗ್ರಿ ಸರ್ಟಿಫಿಕೇಟ್ ನಕಲಿಯೆಂದು ಕಂಡುಬಂದಿದೆ.
ಮಾರ್ಚ್ 1ರಂದು ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್ ಸಿಂಗ್ ಮತ್ತು ಡಿಎಸ್ಪಿ ಸುರೇಶ್ ಅರೋರ ಅವರು ಹರ್ಮನ್ ಪ್ರೀತ್ ಅವರಿಗೆ ಡಿಎಸ್ಪಿ ಹುದ್ದೆ ಜವಾಬ್ದಾರಿ ನೀಡಿದರು.
ಡಿಗ್ರಿ ಸರ್ಟಿಫಿಕೇಟ್ ಗಳು ನಕಲಿ ಆಗಿರುವುದರಿಂದ ಅವರ ವಿದ್ಯಾರ್ಹತೆಯನ್ನು 12ನೇ ತರಗತಿ ಮಾತ್ರ ಎಂದು ಪರಿಗಣಿಸಲಾಗಿದ್ದು ಹೀಗಾಗಿ ಅವರು ಕಾನ್ ಸ್ಟೇಬಲ್ ಹುದ್ದೆಯಲ್ಲಿ ಮುಂದುವರಿಯಬಹುದು ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಕಳೆದ ವರ್ಷ ಇಂಗ್ಲೆಂಡ್ ನಲ್ಲಿ ನಡೆದ ಮಹಿಳಾ ಏಕದಿನ ವಿಶ್ವಕಪ್ ನಲ್ಲಿ ಭಾರತ ರನ್ನರ್ ಅಪ್ ಪ್ರಶಸ್ತಿ ಗೆಲ್ಲುವಲ್ಲಿ ಹರ್ಮನ್ ಪ್ರೀತ್ ನಿರ್ಣಾಯಕ ಪಾತ್ರ ವಹಿಸಿದ್ದರು. ಈ ಹಿನ್ನೆಲೆಯಲ್ಲಿ ಪಂಜಾಬ್ ಸರ್ಕಾರ ಗೌರವಾರ್ಥವಾಗಿ ಡಿಎಸ್ಪಿ ಹುದ್ದೆಯನ್ನು ನೀಡಿತ್ತು.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ