ಕೃಷ್ಣಾ ಕೊಳ್ಳದಲ್ಲಿ 250 ಟಿಎಂಸಿ ಅಡಿ ನೀರು ಬಳಕೆ ಮಾಡಿಕೊಳ್ಳಲು ಸಾಧ್ಯವಾಗಿಲ್ಲ ಎಂದು ಬಿಜೆಪಿ ಹಿರಿಯ ಶಾಸಕ ಗೋವಿಂದ ಕಾರಜೋಳ ವಿಧಾನಸಭೆಯಲ್ಲಿಂದು ತಿಳಿಸಿದರು

 

ಬೆಂಗಳೂರು, ಜು.11-ಕೃಷ್ಣಾ ಕೊಳ್ಳದಲ್ಲಿ 250 ಟಿಎಂಸಿ ಅಡಿ ನೀರು ಬಳಕೆ ಮಾಡಿಕೊಳ್ಳಲು ಸಾಧ್ಯವಾಗಿಲ್ಲ ಎಂದು ಬಿಜೆಪಿ ಹಿರಿಯ ಶಾಸಕ ಗೋವಿಂದ ಕಾರಜೋಳ ವಿಧಾನಸಭೆಯಲ್ಲಿಂದು ತಿಳಿಸಿದರು.
ಪ್ರಸಕ್ತ ಆಯವ್ಯಯದ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಬಚಾವತ್ ತೀರ್ಪು ಹಾಗೂ ಕೃಷ್ಣಾ ನ್ಯಾಯಾಧೀಕರಣದ ತೀರ್ಪಿನಿಂದ ನಮ್ಮ ರಾಜ್ಯಕ್ಕೆ ದೊರೆಯುತ್ತಿರುವ ನೀರಿನಲ್ಲಿ 250 ಟಿಎಂಸಿ ಅಡಿಯಷ್ಟು ನೀರು ಬಳಕೆ ಮಾಡಿಕೊಂಡಿಲ್ಲ. ಆದರೆ ನೆರೆಯ ರಾಜ್ಯದವರು ತಮ್ಮ ಪಾಲಿನ ನೀರನ್ನೂ ಸದ್ಬಳಕೆ ಮಾಡಿಕೊಂಡಿದ್ದಾರೆ ಎಂದರು.
ಕಾಂಗ್ರೆಸ್ ನಡಿಗೆ ಕೃಷ್ಣಾದ ಕಡೆಗೆ ಪಾದಯಾತ್ರೆ ಮಾಡಿ ವಾರ್ಷಿಕ 10 ಸಾವಿರ ಕೋಟಿ ಖರ್ಚು ಮಾಡಿ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸುವುದಾಗಿ ಹೇಳಿತ್ತು. ಐದು ವರ್ಷದಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆಗಳಿಗೆ ಕೇವಲ ಎಂಟೂವರೆ ಸಾವಿರ ಕೋಟಿ ರೂ. ಖರ್ಚು ಮಾಡಲಾಗಿದೆ. ಆಲಮಟ್ಟಿ ಜಲಾಶಯದ ಮುಳುಗಡೆ ಪ್ರದೇಶದ ಸ್ಥಳಾಂತರ ಹಾಗೂ ಪುನರ್ವಸತಿ ಬಗ್ಗೆ ಕ್ರಮಕೈಗೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಜೂ.30ರವರೆಗೆ ರೈತರು ಪಡೆದಿರುವ ಸಾಲವನ್ನೂ ಕೂಡ ಸಾಲ ಮನ್ನಾ ಯೋಜನೆಯಲ್ಲಿ ಸೇರಿಸಬೇಕು. ಜೆಡಿಎಸ್ ಚುನಾವಣಾ ಪ್ರಣಾಳಿಕೆಯಲ್ಲಿ ಭರವಸೆ ನೀಡಿದಂತೆ ಮೀನುಗಾರರ, ಸ್ತ್ರೀಶಕ್ತಿ ಸಂಘಗಳ ಸಾಲ ಮನ್ನಾ ಪ್ರಸ್ತಾಪ ಮಾಡಿಲ್ಲ. ವಿದ್ಯುತ್ ಇಲಾಖೆಯಲ್ಲಿ ಸಿಸ್ಟಮ್ ಸುಧಾರಣೆ ತರಬೇಕೆಂದು ಸಲಹೆ ಮಾಡಿದರು.
ಬಜೆಟ್ ಬಗ್ಗೆ ಮಾತನಾಡುವುದೆಂದರೆ ಆಯುಧವಿಲ್ಲದೆ ಯುದ್ಧಕ್ಕೆ ಹೋದಂತಾಗುತ್ತದೆ. ಈ ಸಮ್ಮಿಶ್ರ ಸರ್ಕಾರ ಕುರುಡರು, ಕುಂಟರನ್ನು ಹೊತ್ತುಕೊಂಡು ನಡೆಯುತ್ತಿರುವಂತೆ ಕಾಣುತ್ತಿದೆ ಎಂದು ಟೀಕಿಸಿದರು.
ನೇಕಾರರು ತೀವ್ರ ಸಂಕಷ್ಟದಲ್ಲಿದ್ದು, ಅವರ ನೆರವಿಗೂ ಕೂಡ ಸರ್ಕಾರ ಧಾವಿಸಬೇಕು ಎಂದು ಹೇಳಿದರು.
ನೇಕಾರರನ್ನು ತಕ್ಕಡಿಗೆ ಹಾಕಿ ನೋಡಿದರೆ ಒಬ್ಬರೂ 50 ಕೆಜಿ ತೂಗುವುದಿಲ್ಲ. ಹೊಟ್ಟೆ ತುಂಬಾ ಊಟ ಮಾಡುವ ಶಕ್ತಿಯೂ ಇಲ್ಲ. ನಿರ್ಲಕ್ಷ್ಯಕ್ಕೊಳಗಾಗಿರುವ ನೇಕಾರರು ಜೀವನ ನಿರ್ವಹಣೆಗೆ ದೇವಸ್ಥಾನಗಳ ಹೊರಗೆ ಅಗರಬತ್ತಿ ಮಾರಾಟ ಮಾಡಿ ಜೀವನ ಸಾಗಿಸುವಂತಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ