ಹೊಸ ತಾಲ್ಲೂಕುಗಳಿಗೆ ಸೂಕ್ತ ವ್ಯವಸ್ಥೆ – ಸಚಿವ ಆರ್.ವಿ.ದೇಶಪಾಂಡೆ

 

ಬೆಂಗಳೂರು,ಜು.11- ರಾಜ್ಯದಲ್ಲಿ ನೂತನವಾಗಿ ಪ್ರಾರಂಭವಾಗಿರುವ 50 ಹೊಸ ತಾಲ್ಲೂಕುಗಳಲ್ಲಿ ಇರುವ ಅನಾನುಕೂಲಗಳನ್ನು ಶೀಘ್ರವೇ ಸರಿಪಡಿಸಿ ಸೂಕ್ತ ವ್ಯವಸ್ಥೆಗಳನ್ನು ಕಲ್ಪಿಸಲಾಗುವುದು ಎಂದು ಕಂದಾಯ ಸಚಿವ ಆರ್.ವಿ.ದೇಶಪಾಂಡೆ ವಿಧಾನಪರಿಷತ್‍ಗೆ ಹೇಳಿದರು.
ಪ್ರಶ್ನೋತ್ತರ ಕಲಾಪದಲ್ಲಿ ಟಿ.ಎ.ಶರವಣ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ರಾಜ್ಯಾದ್ಯಂತ ಹೊಸದಾಗಿ ಕಳೆದ ಜನವರಿಯಿಂದ ಅನ್ವಯವಾಗುವಂತೆ 50 ಹೊಸ ತಾಲ್ಲೂಕುಗಳನ್ನು ರಚಿಸಲಾಗಿದೆ. ಪ್ರತಿ ತಾಲ್ಲೂಕಿನಲ್ಲಿ 14 ಮುಖ್ಯವಾದ ಇಲಾಖೆಗಳು ಕಾರ್ಯ ನಿರ್ವಹಿಸುತ್ತಿವೆ. ಆರಂಭಿಕ ಹಂತದಲ್ಲಿ ಕೆಲ ನ್ಯೂನ್ಯತೆಗಳಿರುವುದು ಸರ್ಕಾರದ ಗಮನಕ್ಕೆ ಬಂದಿದೆ. ಇಂದು ಮಧ್ಯಾಹ್ನ ಅಧಿಕಾರಿಗಳ ಸಭೆ ಕರೆಯಲಾಗಿದೆ. ಅಲ್ಲಿ ಚರ್ಚಿಸಿ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.
ಪ್ರಸ್ತುತ ಹೊಸ ತಾಲ್ಲೂಕುಗಳಲ್ಲಿ ಕಂದಾಯ ಇಲಾಖಾ ಕಚೇರಿಗಳು ಕಾರ್ಯರಾಂಭ ಮಾಡಿದ್ದು ಭೂಮಿ, ಕಾವೇರಿ, ಅಟಲ್ ಶ್ರೀ ಇತರೆ ಇಲಾಖಾ ಕಚೇರಿಗಳನ್ನು ಆರ್ಥಿಕ ಇಲಾಖೆಯ ಸಹಾಯದೊಂದಿಗೆ ಹಂತ ಹಂತವಾಗಿ ತೆರೆಯಲು ಸೂಚನೆ ನೀಡಲಾಗಿದೆ.
ಹೊಸ ತಾಲ್ಲೂಕುಗಳಲ್ಲಿ ಕೆಲವು ಕಡೆ ಮಿನಿ ವಿಧಾನಸೌಧ, ಕಟ್ಟಡ ಕಾಮಗಾರಿಗೆ ಸ್ಥಳ ಗುರುತಿಸಲಾಗಿದೆ. ಇನ್ನು ಕೆಲವು ಕಡೆ ಸ್ಥಳ ಗುರುತಿಸಲು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.
ಹೊಸ ತಾಲ್ಲೂಕುಗಳ ಕಾರ್ಯಾರಂಭ ಹಾಗೂ ಆಡಳಿತಾತ್ಮಕ ಪ್ರಕ್ರಿಯೆಗಳನ್ನು ಆರಂಭಿಸಲು ಪ್ರತಿ ತಾಲ್ಲೂಕಿಗೆ 10 ಲಕ್ಷ ರೂ.ಗಳಂತೆ ಸಂಬಂಧಪಟ್ಟ ಜಿಲ್ಲೆಗಳ ಡಿಸಿಗಳಿಗೆ ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ಅವರು ತಿಳಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ