![delhi-children-700](http://kannada.vartamitra.com/wp-content/uploads/2018/07/delhi-children-700-600x381.jpg)
ಹೊಸದಿಲ್ಲಿ : ಟ್ಯೂಶನ್ ಫೀ ಬಾಕಿ ಇಡಲಾಗಿದೆ ಎಂಬ ಕಾರಣಕ್ಕೆ ಹಳೇ ದಿಲ್ಲಿಯ ಪ್ರತಿಷ್ಠಿತ ಶಾಲೆಯೊಂದರ ಬೇಸ್‌ಮೆಂಟ್‌ನಲ್ಲಿ ಕನಿಷ್ಠ 59 ನರ್ಸರಿ ಬಾಲಕಿಯರನ್ನು ಲಾಕ್ ಮಾಡಿಟ್ಟ ಆಘಾತಕಾರಿ ಘಟನೆ ವರದಿಯಾಗಿದೆ.
ಶಾಲಾ ಅಧಿಕಾರಿಗಳಿಂದ ಕೆಲವು ತಾಸುಗಳ ಕಾಲ ಒತ್ತೆಸೆರೆಯಲ್ಲಿ ಇರಿಸಲಾದ ಪುಟಾಣಿಗಳು ನಾಲ್ಕರಿಂದ ಐದು ವರ್ಷ ಪ್ರಾಯದವರಾಗಿದ್ದಾರೆ.
ಕಳೆದ ವಾರ ಮಧ್ಯಾಹ್ನ ಹೆತ್ತವರು ತಮ್ಮ ಮಕ್ಕಳನ್ನು ರಾಬಿಯಾ ಗರ್ಲ್ಸ್ ಪಬ್ಲಿಕ್ ಸ್ಕೂಲ್ ನಿಂದ ಮನೆಗೊಯ್ಯಲು ಶಾಲೆಗೆ ಬಂದಿದ್ದಾಗಲೇ “ಮಕ್ಕಳ ಒತ್ತೆ ಸೆರೆ’ ಪ್ರಕರಣ ಬೆಳಕಿಗೆ ಬಂತು.
ಶಾಲೆಯ ತರಗತಿ ಕೋಣೆಯಲ್ಲಿ ತಮ್ಮ ಮಕ್ಕಳು ಇಲ್ಲದಿರುವುದನ್ನು ಕಂಡ ಹೆತ್ತವರು ಶಾಲಾ ಸಿಬಂದಿಗಳನ್ನು ಪ್ರಶ್ನಿಸಿದಾಗ ಟ್ಯೂಶನ್ ಫೀ ಬಾಕಿ ಇಡಲಾಗಿರುವ ಕಾರಣ ಆಡಳಿತ ವರ್ಗದವರು ಶಾಲಾ ಕಟ್ಟಡದ ಬೇಸ್‌ಮೆಂಟ್ ನಲ್ಲಿ ಮಕ್ಕಳನ್ನು (ತಳ ಅಂತಸ್ತಿನಲ್ಲಿ) ಲಾಕ್ ಮಾಡಿ ಇಟ್ಟಿದ್ದಾರೆ ಎಂದು ಉತ್ತರಿಸಿದರು.
ಸಿಟ್ಟಿಗೆದ್ದ ಹೆತ್ತವರು ಒಡನೆಯೇ ಸಮೀಪದ ಪೊಲೀಸ್ ಠಾಣೆಗೆ ತೆರಳಿ ಅಲ್ಲಿ ಶಾಲಾಡಳಿತದ ವಿರುದ್ಧ ಎಫ್ ಐ ಆರ್ ದಾಖಲಿಸಿದರು.
ಮಕ್ಕಳನ್ನು ಬಿಡಿರೆಂದು ನಾವು ಪದೇ ಪದೇ ಮನವಿ ಮಾಡಿಕೊಂಡರೂ ಶಾಲಾಡಳಿತದವರು ಒಪ್ಪದೆ ಸುಮಾರು ಐದು ತಾಸು ಕಾಲ ತಳ ಅಂತಸ್ತಿನಲ್ಲಿ ಮಕ್ಕಳನ್ನು ಒತ್ತೆ ಇರಿಸಿಕೊಂಡರು ಎಂದು ಹೆತ್ತವರು ಪೊಲೀಸರಿಗೆ ನೀಡಿರುವ ದೂರಿನಲ್ಲಿ ಹೇಳಿದ್ದಾರೆ.
ಕೆಲವು ಹೆತ್ತವರು “ನಾವು ಮಕ್ಕಳ ಫೀಸನ್ನು ಮುಂಗಡವಾಗಿ ಪಾವತಿಸಿದ್ದೇವೆ; ಆದರೂ ನಮ್ಮ ಮಕ್ಕಳನ್ನು ಒತ್ತೆ ಸೆರೆಯಲ್ಲಿ ಇರಿಸಿಕೊಂಡಿದ್ದಾರೆ’ ಎಂದು ದೂರಿದರು.
ಪ್ರತಿಷ್ಠಿತ ಹಮ್‌ದರ್‌ದ್ ಸಮೂಹಕ್ಕೆ ಸೇರಿರುವ ಈ ಶಾಲೆಯು ಮಕ್ಕಳಿಗೆ ತಿಂಗಳಿಗೆ 2,500 ರಿಂದ 2,900 ರೂ.ಗಳನ್ನು ಶುಲ್ಕ ವಿಧಿಸುತ್ತದೆ.