ಬೆಂಗಳೂರು, ಜು.11-ಆಡಳಿತ ಪಕ್ಷದ ಶಾಸಕರ, ಸಚಿವರ ಹಾಗೂ ಅಧಿಕಾರಿಗಳ ಹಾಜರಾತಿ ಕಡಿಮೆ ಇರುವ ಬಗ್ಗೆ ಬಿಜೆಪಿ ಶಾಸಕರು ವಿಧಾನಸಭೆಯಲ್ಲಿಂದು
ಆಕ್ಷೇಪ ವ್ಯಕ್ತಪಡಿಸಿದರು.
ಇಂದು ಬೆಳಗ್ಗೆ ಸದನ ಸಮಾವೇಶಗೊಂಡಾಗ ಅಧಿಕಾರಿಗಳ ಗ್ಯಾಲರಿಯಲ್ಲಿ ಹಾಜರಾತಿ ಕಡಿಮೆ ಇದ್ದು, ಆಡಳಿತ ಪಕ್ಷದ ಶಾಸಕರ ಸ್ಥಾನಗಳು ಹೆಚ್ಚಾಗಿ ಖಾಲಿಯಿದ್ದವು. ಸಚಿವರಾದ ಕೃಷ್ಣಬೈರೇಗೌಡ, ಬಂಡೆಪ್ಪ ಕಾಶಂಪೂರ್, ಎಚ್.ಡಿ.ರೇವಣ್ಣ, ವೆಂಕಟರಾವ್ ನಾಡಗೌಡ ಮಾತ್ರ ಉಪಸ್ಥಿತರಿದ್ದರು. ಇದನ್ನು ಗಮನಿಸಿದ ಬಿಜೆಪಿಯ ಹಿರಿಯ ಶಾಸಕ ಅಧಿಕಾರಿಗಳ ಗ್ಯಾಲರಿಯೂ ಖಾಲಿ ಇದೆ. ಸಚಿವರೂ ಇಲ್ಲ. ಹೀಗಾದರೆ ಸದನ ನಡೆಯುವುದು ಹೇಗೆ ಎಂದು ಆಕ್ಷೇಪಿಸಿದರು.
ಇದಕ್ಕೆ ದನಿಗೂಡಿಸಿದ ಬಿಜೆಪಿಯ ಸಿ.ಟಿ.ರವಿ, ಸಚಿವರ ಗೈರು ಹಾಜರಾತಿಗೆ ಕಾರಣವೇನು? ಸದನ ಹೇಗೆ ನಡೆಯಬೇಕು ಎಂದು ಪ್ರಶ್ನಿಸಿದರು.
ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಕೃಷ್ಣಭೆರೇಗೌಡ ಮಾತನಾಡಿ, ನಮ್ಮ ಪಕ್ಷದ ಅಧ್ಯಕ್ಷರ ಅಧಿಕಾರ ಸ್ವೀಕಾರ ಸಮಾರಂಭವಿದೆ. ಮಧ್ಯಾಹ್ನದವರೆಗೂ ಸಹಕರಿಸಿ, ರೇವಣ್ಣ ಅವರು ಒಬ್ಬರಿದ್ದರೆ ಸಾಕಲ್ಲವೆ? ಎಂದು ಬಿಜೆಪಿಯ ಶಾಸಕ ಜೆ.ಸಿ.ಮಾಧುಸ್ವಾಮಿ ಅವರನ್ನು ಉದ್ದೇಶಿಸಿ ಹೇಳಿದರು.
ನಿನ್ನೆ ನೀವೇ ಹೇಳಿದ್ದರಲ್ಲವೇ ರೇವಣ್ಣ ಒಬ್ಬರಿದ್ದರೆ ಸಾಕು ಎಂದು ಎಂದಾಗ ಮಾಧುಸ್ವಾಮಿ, ರೇವಣ್ಣ ಅವರು ನಮ್ಮ ಕಡೆ ಇರಬೇಕಿತ್ತು ಎಂದರು.
ಬಿಜೆಪಿಯ ಮತ್ತೊಬ್ಬ ಶಾಸಕ ಅಪ್ಪಚ್ಚು ರಂಜನ್ ಮಾತನಾಡಿ, ರೇವಣ್ಣ ಎಲ್ಲರ ಪರ ಇರುತ್ತಾರೆ ಎಂದರು.
ಮಧ್ಯಪ್ರವೇಶಿಸಿದ ಸಭಾಧ್ಯಕ್ಷರ ಪೀಠದಲ್ಲಿದ್ದ ಉಪಸಭಾಪತಿ ಎಂ.ಕೃಷ್ಣಾರೆಡ್ಡಿ ಅವರು, ಸಚಿವರು ಬರುತ್ತಾರೆ. ಪ್ರಶ್ನೋತ್ತರ ಕಾರ್ಯಕಲಾಪಗಳಿಗೆ ಬದಲಾಗಿ, ವಿತ್ತೀಯ ಕಾರ್ಯಕಲಾಪಗಳನ್ನು ಕೈಗೆತ್ತಿಕೊಳ್ಳುವುದಾಗಿ ಪ್ರಕಟಿಸಿ, ಬಜೆಟ್ ಕುರಿತು ಮಾತನಾಡಲು ಗೋವಿಂದ ಕಾರಜೋಳ ಅವರಿಗೆ ಅವಕಾಶ ನೀಡಿದರು.