ಬೆಂಗಳೂರು, ಜು.11- ಮಲ್ಲಸಂದ್ರದಲ್ಲಿರುವ 600 ವಿದ್ಯಾರ್ಥಿಗಳನ್ನೊಳಗೊಂಡ ಸರ್ಕಾರಿ ಪ್ರೌಢಶಾಲೆಗೆ ಅಗತ್ಯ ಮೂಲಭೂತ ಸೌಲಭ್ಯ ಒದಗಿಸಿ ಅಭಿವೃದ್ಧಿಪಡಿಸುವಂತೆ ವಾರ್ಡ್ ಮಟ್ಟದ ಕಾಮಗಾರಿ ಸ್ಥಾಯಿ ಸಮಿತಿ ಅಧಿಕಾರಿಗಳಿಗೆ ತಾಕೀತು ಮಾಡಿದೆ.
ದಾಸರಹಳ್ಳಿ ವಲಯದ ವಿವಿಧ ಪ್ರದೇಶಗಳಿಗೆ ಬಿಬಿಎಂಪಿ ವಾರ್ಡ್ ಮಟ್ಟದ ಕಾಮಗಾರಿ ಸ್ಥಾಯಿ ಸಮಿತಿ ಸದಸ್ಯರು ಭೇಟಿ ನೀಡಿ ಹಲವಾರು ಅಭಿವೃದ್ಧಿ ಕಾಮಗಾರಿಗಳ ಪರಿಶೀಲನೆ ನಡೆಸಿದರು.
ಮಲ್ಲಸಂದ್ರದ ಸರ್ಕಾರಿ ಶಾಲೆಗೆ ಭೇಟಿ ನೀಡಿದಾಗ ಅಲ್ಲಿನ ಪ್ರಾಂಶುಪಾಲರು ನಮ್ಮ ಶಾಲೆಯಲ್ಲಿ 600 ವಿದ್ಯಾರ್ಥಿಗಳಿದ್ದು, ಅವರಿಗೆ ಅಗತ್ಯ ಶೌಚಾಲಯವಿಲ್ಲ, ಭದ್ರತಾ ಸಿಬ್ಬಂದಿ ನೇಮಕ ಮಾಡಿಲ್ಲ, ಕಾಂಪೌಂಡ್ ಅಭಿವೃದ್ಧಿಪಡಿಸಬೇಕಿದೆ, ಶಿಕ್ಷಕರ ಕೊರತೆ ಇದೆ ಎಂಬ ಮಾಹಿತಿ ನೀಡಿದರು.
ತಕ್ಷಣ ವಾರ್ಡ್ ಮಟ್ಟದ ಕಾಮಗಾರಿ ಸ್ಥಾಯಿ ಸಮಿತಿ ಅಧ್ಯಕ್ಷ ಇಮ್ರಾನ್ ಪಾಷ ಅವರು ಸ್ಥಳದಲ್ಲಿ ಹಾಜರಿದ್ದ ಕಾರ್ಯಪಾಲಕ ಅಭಿಯಂತರರಿಗೆ ಮಲ್ಲಸಂದ್ರ ಶಾಲೆಗೆ ಅಗತ್ಯ ಮೂಲಭೂತ ಸೌಲಭ್ಯ ಕಲ್ಪಿಸಬೇಕು ಎಂದು ತಾಕೀತು ಮಾಡಿದರು.
ಅದೇ ರೀತಿ ಶಾಲೆ ಸಮೀಪ 1.80 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ಸಮುದಾಯ ಭವನದ ಪ್ರವೇಶ ದ್ವಾರವನ್ನು ಶಾಲೆಯ ಆವರಣದಿಂದ ಹೊರಭಾಗದಲ್ಲಿ ನಿರ್ಮಿಸುವಂತೆಯೂ ಅವರು ಸೂಚನೆ ನೀಡಿದರು.
ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳು ಕಡು ಬಡವ ಕುಟುಂಬದವರು. ಅಂತಹ ಮಕ್ಕಳ ವ್ಯಾಸಂಗಕ್ಕೆ ಅಗತ್ಯ ಮೂಲಭೂತ ಸೌಕರ್ಯ ಕಲ್ಪಿಸಬೇಕಾಗಿರುವುದು ಪಾಲಿಕೆ ಕರ್ತವ್ಯ. ಈ ನಿಟ್ಟಿನಲ್ಲಿ ಎಲ್ಲ ಅಗತ್ಯ ನೆರವು ನೀಡುವುದಾಗಿ ಇಮ್ರಾನ್ ಪಾಷ ಸೂಚಿಸಿದರು.
ಅದೇ ರೀತಿ 2017-18ನೆ ಸಾಲಿನ ಎಲ್ಲ ಪಿಒಡಬ್ಲ್ಯೂ ಕಾಮಗಾರಿಗಳನ್ನು ಪೂರ್ಣಗೊಳಿಸುವಂತೆಯೂ ಸಂಬಂಧಪಟ್ಟ ಅಧಿಕಾರಿಗಳಿಗೆ ಪಾಷ ಸೂಚನೆ ನೀಡಿದರು.
ಶೆಟ್ಟಿಹಳ್ಳಿ ವಿಭಾಗದ ಸುಮಾರು 90ಕಿಮೀ ಉದ್ದದ ಕಾವೇರಿ ಕೊಳವೆ ಪೈಪ್ ಅಳವಡಿಸುವ ಕಾಮಗಾರಿಯನ್ನು ಸ್ಥಾಯಿ ಸಮಿತಿ ಸದಸ್ಯರು ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ಸಮಿತಿ ಸದಸ್ಯರಾದ ದೀಪಾ ನಾಗೇಶ್, ನಾಗರಾಜ್, ಶ್ವೇತಾ ವಿಜಯ್ಕುಮಾರ್, ಹೇಮಲತಾ, ಸತೀಶ್ ಸೇಠ್, ಯಶೋಧಾ, ಭುವನೇಶ್ವರಿ, ಮಂಜುಳಾ ಮತ್ತಿತರರು ಹಾಜರಿದ್ದರು.