ಬೆಂಗಳೂರು, ಜು.10-ಕಳೆದ ಆರು ತಿಂಗಳಿಂದ ವೇತನ ಸಿಗದೆ ಪೌರಕಾರ್ಮಿಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣ ಜೆಡಿಎಸ್-ಕಾಂಗ್ರೆಸ್ ಆಡಳಿತದ ನಿದ್ದೆಗೆಡಿಸಿದೆ.
ಪೌರಕಾರ್ಮಿಕ ಆತ್ಮಹತ್ಯೆ ಮಾಡಿಕೊಂಡಿರುವುದನ್ನು ಖಂಡಿಸಿ ಬಿಜೆಪಿ ಬಿಬಿಎಂಪಿ ಪಶ್ಚಿಮ ವಲಯದ ಎದುರು ಇಂದು ಬೃಹತ್ ಪ್ರತಿಭಟನೆ ನಡೆಸಿತು.
ಸಂಸದ ಪಿ.ಸಿ.ಮೋಹನ್, ಪಾಲಿಕೆ ಪ್ರತಿಪಕ್ಷದ ನಾಯಕ ಪದ್ಮನಾಭರೆಡ್ಡಿ, ಮಾಜಿ ಮೇಯರ್ ಕಟ್ಟೆ ಸತ್ಯನಾರಾಯಣ ಸೇರಿದಂತೆ ಪಾಲಿಕೆ ಬಿಜೆಪಿ ಸದಸ್ಯರು, ಕಾರ್ಯಕರ್ತರು ಪಾಲ್ಗೊಂಡು ಬಿಬಿಎಂಪಿ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಪದ್ಮನಾಭರೆಡ್ಡಿ ಮಾತನಾಡಿ, ಬಯೋಮೆಟ್ರಿಕ್ ಅಳವಡಿಸಿ ಪೌರಕಾರ್ಮಿಕರಿಗೆ ನೇರ ವೇತನ ನೀಡುವುದಾಗಿ ಹೇಳಿ ಮಾತು ತಪ್ಪಿದ್ದೀರ. ಇದರಿಂದ ಅಮಾಯಕ ಪೌರಕಾರ್ಮಿಕ ಬಲಿಯಾಗಿದ್ದಾನೆ. ನೈತಿಕ ಹೊಣೆ ಹೊತ್ತು ಮೇಯರ್ ಸಂಪತ್ರಾಜ್ ಕೂಡಲೇ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದರು.
ಪೌರಕಾರ್ಮಿಕರಿಗೆ ತಕ್ಷಣ ವೇತನ ಬಿಡುಗಡೆಯಾಗದಿದ್ದರೆ ಸಂತ್ರಸ್ತ ಪೌರಕಾರ್ಮಿಕರ ಪರವಾಗಿ ನಿಂತು ಉಗ್ರ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಸಿದರು.
ಇದೇ ಸಂದರ್ಭದಲ್ಲಿ ವೇತನ ನೀಡಲು ವಿಳಂಬ ಧೋರಣೆ ಅನುಸರಿಸುತ್ತಿರುವುದನ್ನು ಖಂಡಿಸಿ ನೂರಾರು ಪೌರಕಾರ್ಮಿಕರು ಬಿಬಿಎಂಪಿ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದರು.
ಈ ವೇಳೆ ಹಲವಾರು ಪೌರಕಾರ್ಮಿಕರು ಮಾತನಾಡಿ, ಬಯೋಮೆಟ್ರಿಕ್ ಅಳವಡಿಸಿ ನೇರ ವೇತನ ಕೊಡುವುದಾಗಿ ಹೇಳಿದ್ದೀರಿ. ಇದುವರೆಗೆ ವೇತನ ಬಿಡುಗಡೆ ಮಾಡಿಲ್ಲ. ನಮ್ಮ ಗೋಳು ನಿಮಗೆ ತಟ್ಟದೆ ಬಿಡುವುದಿಲ್ಲ. ನಮ್ಮ ಹೊಟ್ಟೆ ಉರಿ ನಿಮಗೆ ಶಾಪವಾಗಿ ತಟ್ಟಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜಂಟಿ ಆಯುಕ್ತ ಬಸವರಾಜು ಸ್ಥಳಕ್ಕಾಗಮಿಸಿ ಪೌರಕಾರ್ಮಿಕರನ್ನು ಸಮಾಧಾನಪಡಿಸಿ ಬಯೋಮೆಟ್ರಿಕ್ನಲ್ಲಿ ಹೆಸರು ನೋಂದಾಯಿಸಿರುವವರಿಗೆ ಸಂಜೆ ವೇಳೆಗೆ ವೇತನ ನೀಡುವುದಾಗಿ ಭರವಸೆ ನೀಡಿದರು.
ಬಯೋಮೆಟ್ರಿಕ್ನಲ್ಲಿ ಒಂದು ಲಕ್ಷದೊಳಗೆ ನೋಂದಣಿ ಮಾಡಿಸಿದವರಿಗೆ ಸ್ವಲ್ಪ ತಡವಾಗಿ ವೇತನ ಕೊಡಲಾಗುವುದು. ಯಾವುದೇ ಕಾರಣಕ್ಕೂ ಪೌರಕಾರ್ಮಿಕರು ಆತಂಕಕ್ಕೊಳಗಾಗಬಾರದು ಎಂದು ಸಮಾಧಾನಪಡಿಸಿದರು.
ಜೀವಕ್ಕೆ ಬೆಲೆ ಇಲ್ಲ:
ಕಸ ವಿಲೇವಾರಿ ಗುತ್ತಿಗೆದಾರರ ಸಂಘದ ಪ್ರಧಾನ ಕಾರ್ಯದರ್ಶಿ ಬಾಲಸುಬ್ರಹ್ಮಣ್ಯ ಮಾತನಾಡಿ, ಬಿಬಿಎಂಪಿ ಆಡಳಿತದಲ್ಲಿ ಪೌರಕಾರ್ಮಿಕರ ಜೀವಕ್ಕೆ ಬೆಲೆ ಇಲ್ಲ ಎಂಬುದು ಸಾಬೀತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪೌರಕಾರ್ಮಿಕರಿಗೆ ವೇತನ ಬಿಡುಗಡೆ ಮಾಡಿ ಎಂದು 3-4 ತಿಂಗಳಿಂದ ಹೋರಾಟ ಮಾಡುತ್ತಿದ್ದೇವೆ. ನಿನ್ನೆ ಅಮಾಯಕ ಪ್ರಾಣ ತ್ಯಾಗ ಮಾಡಿದ್ದಾನೆ. ಜೀವಾನೇ ಹೋದ ಮೇಲೆ 10 ಪರಿಹಾರ ನೀಡುವುದು, ಉದ್ಯೋಗ ನೀಡುವುದು ಯಾವ ಪುರುಷಾರ್ಥಕ್ಕೆ? ಮೊದಲು ಜೀವಕ್ಕೆ ಬೆಲೆ ಕೊಡಿ, ಕೂಡಲೇ ಸಂಬಂಧಪಟ್ಟವರು ಎಚ್ಚೆತ್ತುಕೊಂಡು ಅನ್ಯಾಯ ಸರಿಪಡಿಸಿ ಎಂದು ಆಗ್ರಹಿಸಿದರು.
ಎಲ್ಲಾ ಸಮಸ್ಯೆ ನಿವಾರಣೆ:
ಪೌರಕಾರ್ಮಿಕರ ಪ್ರತಿಭಟನೆಗೆ ಸ್ಪಂದಿಸಿರುವ ಮೇಯರ್ ಸಂಪತ್ರಾಜ್ ಅವರು, ಎಲ್ಲಾ ಸಮಸ್ಯೆಗಳನ್ನು ನಿವಾರಿಸಲಾಗುವುದು. ಪೌರಕಾರ್ಮಿಕರ ಹಿತ ಕಾಪಾಡಲು ನಮ್ಮ ಆಡಳಿತ ಬದ್ಧವಾಗಿದೆ ಎಂದು ಭರವಸೆ ನೀಡಿದರು.
ಜು.20ರೊಳಗೆ ಪೌರಕಾರ್ಮಿಕರ ಎಲ್ಲಾ ಸಮಸ್ಯೆ ಇತ್ಯರ್ಥವಾಗಲಿದೆ. ಬಯೋವೆÅಟ್ರಿಕ್ನಲ್ಲಿ ಇರುವ ಪೌರಕಾರ್ಮಿಕರಿಗೆ ಇದೇ 20ರೊಳಗೆ ವೇತನ ಪಾವತಿ ಮಾಡಲಾಗುವುದು ಎಂದು ಹೇಳಿದರು.