ಬೆಂಗಳೂರು, ಜು.10- ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ಖಾಲಿ ಇರುವ 15,600 ಹುದ್ದೆಗಳಿಗೆ ಅತಿಥಿ ಶಿಕ್ಷಕರನ್ನು ನೇಮಕಾತಿ ಮಾಡಿಕೊಳ್ಳಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎನ್.ಮಹೇಶ್ ತಿಳಿಸಿದರು.
ಪ್ರಶ್ನೋತ್ತರ ವೇಳೆಯಲ್ಲಿ ಶಾಸಕ ಗುತ್ತೇದಾರ್ ಶುಭಾಷ್‍ರುಕ್ಮಯ್ಯ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಪ್ರಾಥಮಿಕ ಶಾಲೆಗಳಲ್ಲಿ 2500 ಹಾಗೂ ಪ್ರೌಢಶಾಲೆಗಳಲ್ಲಿ 3100 ಹುದ್ದೆಗಳು ಖಾಲಿ ಇವೆ. ರಾಜ್ಯದ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ 10 ಸಾವಿರ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ಹುದ್ದೆಗಳಿಗೆ ನೇರ ನೇಮಕಾತಿ ನಡೆದಿದ್ದು, ಆಯ್ಕೆಗೊಂಡ ಶಿಕ್ಷಕರು ಕರ್ತವ್ಯಕ್ಕೆ ಹಾಜರಾದ ಕೂಡಲೇ ಅತಿಥಿ ಶಿಕ್ಷಕರ ನೇಮಕಾತಿ ರದ್ದಾಗಲಿದೆ ಎಂದು ಹೇಳಿದರು.
ರಾಜ್ಯದಲ್ಲಿ 58 ಪದವಿಪೂರ್ವ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ 10ಕ್ಕಿಂತ ಕಡಿಮೆ ಇದ್ದು, ವಿದ್ಯಾರ್ಥಿಗಳ ಅಗತ್ಯವಿರುವ ಕಡೆಗಳಿಗೆ ಅಂತಹ ಕಾಲೇಜುಗಳನ್ನು ಸ್ಥಳಾಂತರ ಮಾಡಲಾಗುವುದು ಎಂದು ಕಾಂಗ್ರೆಸ್ ಪಕ್ಷದ ಶಾಸಕ ಎಸ್.ಟಿ.ಸೋಮಶೇಖರ್ ಅವರು ಕೇಳಿದ ಪ್ರಶ್ನೆ ಸಂದರ್ಭದಲ್ಲಿ ಸಚಿವರು ಉತ್ತರಿಸಿದರು.
ಪದವಿ ಪೂರ್ವ ಕಾಲೇಜುಗಳನ್ನು ಸ್ಥಳಾಂತರ ಮಾಡುವಾಗ ಆಡಳಿತ ಹಾಗೂ ವಿರೋಧ ಪಕ್ಷಗಳ ಕ್ಷೇತ್ರಗಳೆಂಬ ಭೇದ-ಭಾವ ಮಾಡುವುದಿಲ್ಲ. ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಸ್ಥಳಾಂತರ ಮಾಡಲಾಗುವುದು ಎಂದರು.
ಬೆಂಗಳೂರಿನ ಹೊರ ವಲಯದ ತಾವರೆಕೆರೆಯಲ್ಲಿ ಪ್ರೌಢಶಾಲೆ ಮತ್ತು ಪದವಿ ಪೂರ್ವ ಕಾಲೇಜು ಪ್ರಾರಂಭಿಸಲು ಹಾಗೂ ಕೆಂಗೇರಿಯಲ್ಲಿರುವ ಪ್ರೌಢಶಾಲೆಯನ್ನು ಪದವಿ ಪೂರ್ವ ಕಾಲೇಜಾಗಿ ಮೇಲ್ದರ್ಜೆಗೇರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಮಲೆಮಹದೇಶ್ವರ ಬೆಟ್ಟದ ಸುತ್ತಮುತ್ತಲಿನ 21 ಶಾಲೆಗಳ ಶಿಕ್ಷರಿಗೆ ಗಿರಿಭತ್ಯೆ ನೀಡಲು ಪರಿಶೀಲಿಸಲಾಗುವುದು ಎಂದು ಶಾಸಕ ಆರ್.ನರೇಂದ್ರ ಅವರ ಪ್ರಶ್ನೆಗೆ ಸಚಿವರು ಉತ್ತರಿಸಿದರು.
ಮಹದೇಶ್ವರಸ್ವಾಮಿ ಬೆಟ್ಟದಲ್ಲಿ ಕರ್ತವ್ಯ ನಿರ್ವಹಿಸುವ ರಾಜ್ಯ ಸರ್ಕಾರಿ ನೌಕರರಿಗೆ ಗಿರಿತಾಣಭತ್ಯೆ ಮಂಜೂರು ಮಾಡಲಾಗಿದೆ. ಆದರೆ, ಬೆಟ್ಟದ ತಪ್ಪಲಿನಲ್ಲಿ ಇರುವ ಶಾಲೆಗಳಲ್ಲಿ ಗಿರಿ ಭತ್ಯೆ ಕೊಡಲು ಅವಕಾಶವಿಲ್ಲ. ಕೊಡಗು, ಮಲೆನಾಡು ಗ್ರಾಮೀಣ ಭಾಗದ ಶಾಲಾ ಶಿಕ್ಷಕರಿಗೂ ಗಿರಿ ಭತ್ಯೆ ನೀಡಬೇಕೆಂಬ ಹಲವು ಶಾಸಕರ ಸಲಹೆ ಬಗ್ಗೆ ಮುಖ್ಯಮಂತ್ರಿಗಳ ಜತೆ ಚರ್ಚಿಸಿ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು ಎಂದು ಹೇಳಿದರು.